ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಕಳೆದ 25 ವರ್ಷಗಳಿಂದ ಆಗದ ಕೆಲಸಗಳು ನನಗೆ ಸವಾಲಾಗಿವೆ. ಕ್ಷೇತ್ರದ ಜನರ ಸೇವೆ ಯಾವ ರೀತಿ ಮಾಡಬಹುದು ಎಂಬುದನ್ನು ಸರ್ಕಾರದ ಕಾರ್ಯಕ್ರಮ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಎಲ್ಲರ ಸಹಕಾರದಲ್ಲಿ ಮಾಡಿ ತೋರಿಸುತ್ತಿದ್ದೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.ನಗರದ ಶಾಸಕರ ಕಚೇರಿಯಲ್ಲಿ ಜಿಪಂ, ಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸವಲತ್ತುಗಳ ವಿತರಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕುಡಿಯುವ ನೀರು, ಅರ್ಕಾವತಿ ದಂಡೆಯ ಅಭಿವೃದ್ಧಿ, ಜಿಲ್ಲಾ ಕ್ರೀಡಾಂಗಣಕ್ಕೆ ಸೌಕರ್ಯಗಳು ಸೇರಿ ಕ್ಷೇತ್ರಕ್ಕೆ ಹೊಸ ಚಿತ್ರಣ ಕೊಡಲಾಗುತ್ತಿದೆ. 100 ಎಕರೆ ಜಮೀನಿನಲ್ಲಿ ವಸತಿ ಕಲ್ಪಿಸುವ ಕೆಲಸಕ್ಕೆ ಈಗಾಗಲೇ ನಿವೇಶನ ರಹಿತ 13 ಸಾವಿರ ಅರ್ಜಿಗಳು ಬಂದಿವೆ ಎಂದರು.
ನಗರದ ಎರಡು ವಾರ್ಡುಗಳಲ್ಲಿ ಬಟ್ಟೆ ಒಗೆಯುವ 10 ಕೇಂದ್ರಗಳ ನಿರ್ಮಾಣಕ್ಕೆ ಪ್ರಾಯೋಗಿಕವಾಗಿ ಯೋಜನೆ ರೂಪಿಸಿದ್ದು, ಕೆಲವೇ ದಿನಗಳಲ್ಲಿ ವಿನೂತನ ಯೋಜನೆ ಸಾಕಾರವಾಗಿದೆ. ಇದು ನಮ್ಮ ಬದ್ಧತೆಯ ಕೆಲಸ. ಈ ಹಿಂದೆ 25 ವರ್ಷಗಳಿಂದ ಕ್ಷೇತ್ರದಲ್ಲಿ ಗೆದ್ದು ಮುಖ್ಯಮಂತ್ರಿ, ಪ್ರಧಾನಿಗಳಾದವರು ಅಧಿಕಾರ ಪಡೆದರೆ ಹೊರತು ಕ್ಷೇತ್ರದ ಜನರ ಬಗ್ಗೆ ಚಿಂತನೆ ಮಾಡಿಲ್ಲ. ಕೋವಿಡ್ ಸಮಯದಲ್ಲಿ ನಿಮ್ಮ ನೆರವಿಗೆ ಬರಲಿಲ್ಲ ಎಂದು ಜೆಡಿಎಸ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.ಎಂಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಸರ್ಕಾರದ ಸವಲತ್ತು ನೀಡುವ ಕಾರ್ಯಕ್ರಮ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಯೋಜನೆಗಳನ್ನು ಅರ್ಹ ಪಲಾನುಭವಿಗಳಿಗೆ ತಲುಪಿಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಕೆ.ರಾಜು ಮಾತನಾಡಿ, ಶಾಸಕರು ಕ್ಷೇತ್ರದ ಜನರ ಋಣ ತೀರಿಸುವ ಪ್ರಾಮಾಣಿಕ ಕೆಲಸ ಮಾಡುತ್ತಾ, ಸರ್ಕಾರದ ಯೋಜನೆಗಳ ಜೊತೆಗೆ ವೈಯಕ್ತಿಕವಾಗಿಯೂ ನೆರವು ನೀಡುತ್ತಿದ್ದಾರೆ ಎಂದು ಶಾಸಕರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ನಗರಸಭೆ ಮಾಜಿ ಅಧ್ಯಕ್ಷೆ ಪಾರ್ವತಮ್ಮ, ಸದಸ್ಯೆ ಆಯಿಷಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ವಿ.ಎಚ್.ರಾಜು, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಸೋಮಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಅಸ್ಮದ್, ಸದಸ್ಯರಾದ ಆಯಿಷಾ, ಜಯಲಕ್ಷ್ಮಮ್ಮ, ಗಿರಿಜಮ್ಮ, ಪವಿತ್ರ, ಹಿರಿಯ ಮುಖಂಡ ಆರ್.ದೊಡ್ಡ ವೀರಯ್ಯ, ಗ್ರಾಪಂ ಅಧ್ಯಕ್ಷ ಪ್ರಭಣ್ಣ, ಹೇಮಂತ್ ಕುಮಾರ್, ಮುಖಂಡರಾದ ಜಯರಾಮಯ್ಯ, ಸಿ.ರಾಮಯ್ಯ, ಪಾಪಣ್ಣ, ಗುರುವಯ್ಯ ಹಾಜರಿದ್ದರು.
ಶಾಸಕರಿಂದ ಸವಲತ್ತುಗಳ ವಿತರಣೆಶಾಸಕರ ವೈಯಕ್ತಿಕ ವೆಚ್ಚದಿಂದ 61 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಸುಮಾರು 7 ಲಕ್ಷ ರು. ವೆಚ್ಚದ ಡಿಡಿಗಳ ವಿತರಣೆ, 50 ಮಹಿಳೆಯರಿಗೆ ಉಚಿತ ಹೊಲಿಗೆಯಂತ್ರಗಳ ವಿತರಣೆ, ಶಾಸಕರ ಅನುದಾನದಡಿ 20 ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನ, ಸಣ್ಣ ಕೈಗಾರಿಕಾ ಇಲಾಖೆ ವತಿಯಿಂದ 67 ಫಲಾನುಭವಿಗಳಿಗೆ ಸುಧಾರಿತ ಉಪಕರಣಗಳನ್ನು (ಮರಗೆಲಸ -28, ಗಾರೆ ಕೆಲಸ-24, ಭಜಂತ್ರಿ-3, ಡೋಬಿ-10, ಕಲ್ಲು ಕೆಲಸ -2) ಸಣ್ಣ ಕೈಗಾರಿಕೆ ಇಲಾಖೆ ವತಿಯಿಂದ 22 ಫಲಾನುಭವಿಗಳು, ದೇವರಾಜು ಅರಸು ನಿಗಮದ ವತಿಯಿಂದ 22 ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.