ಜಿಲ್ಲೆಯ ಪ್ರತಿ ರೈತರಿಂದ ಪ್ರತಿ ಎಕರೆಗೆ 4 ಕ್ವಿಂಟಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಸೂರ್ಯಕಾಂತಿ ಖರೀದಿಸಬೇಕು.
ಗದಗ: 2026-27ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ಸೂರ್ಯಕಾಂತಿ ಹುಟ್ಟುವಳಿ ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ತಿಳಿಸಿದರು.
2026-27ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿಸುವ ಕುರಿತು, ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ತೆರೆಯಲಾಗುವ ಸೂರ್ಯಕಾಂತಿ ಹುಟ್ಟುವಳಿ ಖರೀದಿ ಕೇಂದ್ರಗಳಲ್ಲಿ ಖರೀದಿಸಲಾಗುವ ಎಫ್.ಎ.ಕ್ಯೂ. ಗುಣಮಟ್ಟ ಪರಿಶೀಲನೆಗೆ ಗ್ರೇಡರ್‌ಗಳನ್ನು ನೇಮಕ ಮಾಡಬೇಕು ಮತ್ತು ಅವರಿಗೆ ಎಫ್‌ಎಕ್ಯೂ ಗ್ರೇಡಿಂಗ್ ತರಬೇತಿ ನೀಡಬೇಕು. ಜಿಲ್ಲೆಯ ಪ್ರತಿ ರೈತರಿಂದ ಪ್ರತಿ ಎಕರೆಗೆ 4 ಕ್ವಿಂಟಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಸೂರ್ಯಕಾಂತಿ ಖರೀದಿಸಬೇಕು. ಸರ್ಕಾರದ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಹುಟ್ಟುವಳಿ ಖರೀದಿಯ ಕುರಿತು ರೈತರಿಗೆ ತಿಳಿವಳಿಕೆ ನೀಡಲು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಹಾಗೂ ಜಿಲ್ಲೆಯ ರೈತರು ಈ ಯೋಜನೆಯ ಲಾಭ ಪಡೆಯಲು ಅನುಕೂಲವಾಗುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕಿ ಸುಧಾ ಆರ್. ಬಂಡಿ ಮಾತನಾಡಿ, ಎಫ್.ಎ.ಕ್ಯೂ. ಗುಣಮಟ್ಟದ ಸೂರ್ಯಕಾಂತಿ ಹುಟ್ಟುವಳಿಗೆ ಪ್ರತಿ ಕ್ವಿಂಟಲ್‌ಗೆ ₹8,343 ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಸರ್ಕಾರದ ಆದೇಶದನುಸಾರ ನ್ಯಾಪೆಡ್ ಸಂಸ್ಥೆ ಹಾಗೂ ಎನ್.ಸಿ.ಸಿ.ಎಫ್. ಸಂಸ್ಥೆಯನ್ನು ಕೇಂದ್ರದ ಖರೀದಿ ಏಜೆನ್ಸಿಯಾಗಿ ಹಾಗೂ ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತ (ಕೆಒಎಫ್) ಬೆಂಗಳೂರು ಇವರನ್ನು ರಾಜ್ಯ ಮಟ್ಟದ ಖರೀದಿ ಏಜನ್ಸಿಯನ್ನಾಗಿ ನೇಮಿಸಿದ್ದು ಸರ್ಕಾರದ ಆದೇಶದ ದಿನಾಂಕದಿಂದ ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳ ವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳ ವರೆಗೆ ನಿಗದಿಪಡಿಸಿದ್ದು, ನೋಂದಣಿ ಕಾರ್ಯದ ಜತೆಗೆ ಖರೀದಿ ಪ್ರಕ್ರಿಯೆ ಸಹ ಪ್ರಾರಂಭಿಸಲು ಆದೇಶಿಸಿದೆ ಎಂದರು.
ಜಿಲ್ಲೆಯ 11 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಯಿತು.ಸಭೆಯಲ್ಲಿ ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ ಇಲಾಖೆ, ಸಹಕಾರಿ ಸಂಘಗಳ ಇಲಾಖೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.