ಬೆಂಬಲ ಬೆಲೆ ಆರ್ಥಿಕ ಸದೃಢತೆಗೆ ಸಹಕಾರಿ: ತಮ್ಮಯ್ಯ

| Published : Mar 10 2025, 12:21 AM IST

ಬೆಂಬಲ ಬೆಲೆ ಆರ್ಥಿಕ ಸದೃಢತೆಗೆ ಸಹಕಾರಿ: ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ರೈತರ ಉತ್ಪನ್ನಗಳಿಗೆ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸುವ ಮೂಲಕ ಆರ್ಥಿಕವಾಗಿ ಸದೃಢವಾಗಿರಲು ನೆರವಾಗಿದೆ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದ್ದಾರೆ.

ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟನೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರೈತರ ಉತ್ಪನ್ನಗಳಿಗೆ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸುವ ಮೂಲಕ ಆರ್ಥಿಕವಾಗಿ ಸದೃಢವಾಗಿರಲು ನೆರವಾಗಿದೆ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದ್ದಾರೆ.

ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ರಾಜ್ಯ ಸಹಕಾರ ಮಹಾ ಮಂಡಲದ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆ ಡಿಎಫ್.ಎ.ಕ್ಯೂ ಗುಣ ಮಟ್ಟದ ರಾಗಿ ಖರೀದಿ ಕೇಂದ್ರವನ್ನು ಎಪಿಎಂಸಿ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಹಣವಿಲ್ಲದೆ ಬದುಕಬಹುದು, ಆಹಾರವಿಲ್ಲದೆ ಬದುಕಲು ಸಾಧ್ಯವಿಲ್ಲ. ದೇಶದ ಜೀವಾಳವಾಗಿರುವ ರೈತರ ಬದುಕನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಸರ್ಕಾರ ಬೆಂಬಲ ಬೆಲೆ ಮೂಲಕ ಆಹಾರ ಪದಾರ್ಥಗಳನ್ನು ಖರೀದಿಸುತ್ತಿದೆ. ಮುಂದಿನ ದಿನಗಳಲ್ಲಿ ತರಕಾರಿ ಸೇರಿದಂತೆ ರೈತರ ಎಲ್ಲಾ ಉತ್ಪನ್ನಗಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬೇಕೆಂದು ಒತ್ತಾಯಿಸಿದರು.ಕೃಷಿ ಅವಲಂಬಿತ ಕೃಷಿ ಪ್ರಧಾನ ದೇಶ ಭಾರತದಲ್ಲಿ ಜನಸಂಖ್ಯೆಯ ಶೇ.70 ರಷ್ಟು ರೈತ ಸಮುದಾಯ ಮತ್ತು ರೈತ ಕೃಷಿ ಕಾರ್ಮಿಕರನ್ನು ಹೊಂದಿದೆ ಎಂದ ಅವರು, ಈ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ರಾಜ್ಯಾದ್ಯಂತ 8 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿಗೆ ಅನುಮತಿ ನೀಡಿದೆ ಎಂದು ಹೇಳಿದರು.ಪ್ರತೀ ಕ್ವಿಂಟಾಲ್‌ ರಾಗಿಗೆ ₹4290 ಗಳನ್ನು ನಿಗಧಿ ಮಾಡಲಾಗಿದ್ದು, ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್‌ ರಾಗಿ ಖರೀದಿಸಲು ಅವಕಾಶವಿದೆ. ಈ ಸಂಬಂಧ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಇಂದು ರಾಗಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.ಜಿಲ್ಲೆಯಾದ್ಯಂತ 18,071 ರೈತರಿಂದ 2,08,500 ಕ್ವಿಂಟಾಲ್ ನೋಂದಣಿಯಾಗಿದ್ದು, ಈ ಪೈಕಿ ಚಿಕ್ಕಮಗಳೂರು ರಾಗಿ ಖರೀದಿ ಕೇಂದ್ರದಲ್ಲಿ 945 ರೈತರು ನೋಂದಾಯಿಸಿದ್ದು, ಸುಮಾರು 15 ಸಾವಿರ ಕ್ವಿಂಟಾಲ್‌ ರಾಗಿ ಖರೀದಿಸಲಾಗುವುದು. ಕಳೆದ ಸಾಲಿನಲ್ಲಿ 1150 ರೈತರಿಂದ 25,969 ಕ್ವಿಂಟಾಲ್‌ ರಾಗಿ ನೋಂದಣಿಯಾಗಿದ್ದು, ಈ ಪೈಕಿ 741 ರೈತರಿಂದ 15,715.50 ಕ್ವಿಂಟಾಲ್‌ ರಾಗಿಯನ್ನು ಖರೀದಿಸಲಾಗಿದೆ ಎಂದು ಹೇಳಿದರು.ಪ್ರಸ್ತುತ ಸಾಲಿನಲ್ಲಿ ರೈತರು ನೋಂದಣಿ ಮತ್ತು ರಾಗಿ ಮಾರಾಟ ಮಾಡುವಾಗ ಕಡ್ಡಾಯವಾಗಿ ಎರಡು ಬಾರಿ ಬಯೋಮೆಟ್ರಿಕ್ ನೀಡಬೇಕೆಂದು ವಿನಂತಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಪಿಎಂಸಿ ಸಹಾಯಕ ನಿರ್ದೇಶಕ ವಿಶ್ವನಾಥರೆಡ್ಡಿ ಮಾಡನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ. ಸರ್ಕಾರದ ಆದೇಶದಂತೆ ಬೆಂಬಲ ಬೆಲೆ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರದ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದರು.ಸಮರ್ಪಕ, ಪಾರದರ್ಶಕ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಅಧಿಕಾರಿಗಳಿಗೆ ಕ್ರಮವಹಿಸುವಂತೆ ಸೂಚಿಸಿದ ಅವರು, ರೈತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಎಪಿಎಂಸಿ ಕಾರ್ಯದರ್ಶಿ ಅಭಿನಂದನ್, ಆಹಾರ ಸಂಸ್ಕರಣೆ ಇಲಾಖೆಯ ಜನಾರ್ಧನ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ಶಾಖಾ ವ್ಯವಸ್ಥಾಪಕರಾದ ಚೇತನ್ ಉಪಸ್ಥಿತರಿದ್ದರು. ಮೋಹನ್‌ರಾವ್ ಸ್ವಾಗತಿಸಿದರು. 9 ಕೆಸಿಕೆಎಂ 4ಚಿಕ್ಕಮಗಳೂರಿನ ಎಪಿಎಂಸಿ ಆವರಣದಲ್ಲಿ ಶಾಸಕ ಎಚ್‌.ಡಿ. ತಮ್ಮಯ್ಯ ಅವರು ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿದರು. ವಿಶ್ವನಾಥ್‌ ರೆಡ್ಡಿ, ಅಭಿನಂದನ್‌, ಜನಾರ್ಧನ್‌, ಚೇತನ್‌ ಇದ್ದರು.