ಅಭಿವೃದ್ಧಿಗೆ ವೇಗ ಹೆಚ್ಚಿಸಲು ಸುರೇಶ್‌ ಬೆಂಬಲಿಸಿ

| Published : Apr 25 2024, 01:00 AM IST

ಅಭಿವೃದ್ಧಿಗೆ ವೇಗ ಹೆಚ್ಚಿಸಲು ಸುರೇಶ್‌ ಬೆಂಬಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಆರಂಭವಾಗಿರುವ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡಲು, ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಹಾಗೂ ಕನ್ನಡಿಗರ ಅಸ್ಮಿತೆ ಕಾಪಾಡಲು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರಿಗೆ ಆಶೀರ್ವಾದ ಮಾಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸೈಯದ್ ಜಿಯಾವುಲ್ಲಾ ಮತದಾರರಲ್ಲಿ ಮನವಿ ಮಾಡಿದರು.

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಆರಂಭವಾಗಿರುವ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡಲು, ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಹಾಗೂ ಕನ್ನಡಿಗರ ಅಸ್ಮಿತೆ ಕಾಪಾಡಲು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರಿಗೆ ಆಶೀರ್ವಾದ ಮಾಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸೈಯದ್ ಜಿಯಾವುಲ್ಲಾ ಮತದಾರರಲ್ಲಿ ಮನವಿ ಮಾಡಿದರು.

ನಗರ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಮತಯಾಚಿಸಿದ ಅವರು, ಅಭಿವೃದ್ಧಿಯಲ್ಲಿ ಕ್ಷೇತ್ರ ಹಿಂದೆ ಬೀಳಬಾರದು ಎಂಬ ಉದ್ದೇಶದಿಂದ ಸುರೇಶ್ ಅವರು ಕೃಷಿ, ನೀರಾವರಿ, ರಸ್ತೆ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವಾರು ಮೂಲಸೌಕರ್ಯಗಳನ್ನು ಸುಧಾರಿಸಿ, ಕ್ಷೇತ್ರದ ಪ್ರಗತಿಗಾಗಿ ಹಗಲಿರುಳು ದುಡಿದಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಮತದಾರರು ಶಕ್ತಿ ತುಂಬಬೇಕು ಎಂದರು.

ಮೂರು ಬಾರಿ ಸಂಸದರಾಗಿರುವ ಡಿ.ಕೆ.ಸುರೇಶ್ ನರೇಗಾ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಿದಕ್ಕಾಗಿ ರಾಷ್ಟ್ರಮಟ್ಟದ ಪ್ರಶಸ್ತಿಯೂ ಲಭಿಸಿದೆ. ಈವರೆಗೆ 300ಕ್ಕೂ ಹೆಚ್ಚು ಕುಡಿಯುವ ನೀರಿನ ಘಟಕ, 80 ಅತ್ಯಾಧುನಿಕ ವಿಶೇಷ ವಿನ್ಯಾಸದ ಸುಸಜ್ಜಿತ ಬಸ್ ತಂಗುದಾಣ, 3094 ಕೆರೆ ಮತ್ತು ಗೋಕಟ್ಟೆ ಅಭಿವೃದ್ಧಿ, 9001 ಚರಂಡಿ ನಿರ್ಮಾಣ, 785 ಆಟದ ಮೈದಾನ, 75,304 ದನದ ಕೊಟ್ಟಿಗೆ, 6667 ಕುರಿ ಶೆಡ್ಡು, 4045 ಕೋಳಿ ಶೆಡ್ಡು, 617 ಕಲ್ಯಾಣಿ, 3012 ಚೆಕ್ ಡ್ಯಾಂ ಹಾಗೂ 27,928 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಸಿದ್ದಾರೆ ಎಂದು ಹೇಳಿದರು.

ರಾಮನಗರದಲ್ಲಿ ಸೂಪರ್ ಸ್ಪೆಷಾಲಿಟಿ ಜಿಲ್ಲಾಸ್ಪತ್ರೆ, ಕನಕಪುರದ ಶಿವನಹಳ್ಳಿಯಲ್ಲಿ ಮೆಗಾ ಮಿಲ್ಕ್ ಡೇರಿ, ಚನ್ನಪಟ್ಟಣದ ಕಣ್ವ ಬಳಿ ಮಿಲ್ಕ್ ಪೌಡರ್ ಘಟಕ, ವಂದಾರಗುಪ್ಪೆ ಬಳಿ ಹೈಟೆಕ್ ರೇಷ್ಮೆ ಮಾರುಕಟ್ಟೆ, ಕ್ರೀಡಾಂಗಣ, ನಿವೇಶನ ರಹಿತರಿಗೆ ಮನೆಗಳನ್ನು ಮಂಜೂರಾತಿ ಮಾಡಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಕಲ್ಪಿಸಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಮಾದರಿ ಶಾಲೆಗಳ ನಿರ್ಮಾಣದ ಗುರಿ ಹೊಂದಿದ್ದಾರೆ. ಕೆರೆಗಳನ್ನು ತುಂಬಿಸುವ ಸತ್ತೇಗಾಲ ಯೋಜನೆ, ರಾಮನಗರ ಟೌನ್ ಗೆ 24 ಗಂಟೆ ನೀರು ಪೂರೈಸುವ ನೆಟ್ಕಲ್ ಯೋಜನೆ, ಮಾಗಡಿಯಲ್ಲಿ ಶ್ರೀರಂಗ ಏತ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಸುರೇಶ್ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಕೊರೋನಾ ಸಂಕಷ್ಟದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸಿ ರೈತರಿಗೆ ನೆರವಾದರು. ಸೋಂಕಿತರನ್ನು ಭೇಟಿಯಾಗಿ ಧೈರ್ಯ ತುಂಬಿದರು. ಆಕ್ಸಿಜನ್, ಮೆಡಿಕಲ್ ಕಿಟ್ ಹಾಗೂ ರೆಮ್ಡಿಸಿವಿರ್ ಇಂಜೆಕ್ಷನ್ ಒದಗಿಸಲು ಸಹಾಯ ಮಾಡಿದರು. ಕೊರೋನಾದಿಂದ ಮೃತಪಟ್ಟವರಿಗೆ ಗೌರವಾನ್ವಿತವಾಗಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಜನರು ಕಷ್ಟದಲ್ಲಿದ್ದಾಗ ಅ‍ವರೊಂದಿಗೆ ನಿಲ್ಲುವವನೇ ನಿಜವಾದ ಜನ ನಾಯಕ ಎಂಬುದನ್ನು ಸುರೇಶ್ ನಿರೂಪಿಸಿ ತೋರಿಸಿದ್ದಾರೆ ಎಂದು ಜಿಯಾವುಲ್ಲಾ ಬಣ್ಣಿಸಿದರು.

ಕ್ಷೇತ್ರದ ಅಭಿವೃದ್ಧಿ ಮಾತ್ರವಲ್ಲದೆ ನಾಡಿನ ಹಿತಾಸಕ್ತಿಗಾಗಿಯೂ ಸುರೇಶ್ ಅವರು ಧ್ವನಿಯಾದವರು. ತೆರಿಗೆ, ಬರ ಪರಿಹಾರ ವಿಚಾರದಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯವಾದಾಗ ಲೋಕಸಭೆ ಒಳಗೆ ಮತ್ತು ಹೊರಗೆ ಹೋರಾಡಿದವರು. ಇದರ ಪರಿಣಾಮ ಸುಪ್ರೀಂ ಕೋರ್ಟಿನಿಂದ ನ್ಯಾಯ ಸಿಕ್ಕಿತು. ಇದಕ್ಕೆ ಸುರೇಶ್ ಅವರ ಹೋರಾಟ ಎಂಬುದನ್ನು ಕನ್ನಡಿಗರು ಮರೆಯಬಾರದು ಎಂದು ಜಿಯಾವುಲ್ಲಾ ಹೇಳಿದರು.

ಮನೆ ಮಗನನ್ನು ಆಶೀರ್ವದಿಸಿ:

ಸಂಸದರ ನಿಧಿ ಮಾತ್ರವಲ್ಲ ರಾಜ್ಯ ಸರ್ಕಾರದಿಂದಲೂ ಸಾಕಷ್ಟು ಅನುದಾನ ತಂದು ರಾಮನಗರ ಟೌನಿನ ಅಭಿವೃದ್ಧಿಗೂ ಸುರೇಶ್ ಶ್ರಮಿಸುತ್ತಿದ್ದಾರೆ. ಕಳೆದ 25 ವರ್ಷಗಳಿಂದ ರಾಮನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಆ ಕುಟುಂಬದವರು ಕುಡಿಯುವ ನೀರು, ರಸ್ತೆ, ಚರಂಡಿಯಂತಹ ಕನಿಷ್ಠ ಮೂಲಸೌಲಭ್ಯಗಳನ್ನು ಕಲ್ಪಿಸಿರಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಕೇವಲ 9 ತಿಂಗಳ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಸುಮಾರು 800 ಕೋಟಿ ರುಪಾಯಿ ಅನುದಾನ ನೀಡಿದೆ. ಇದರಲ್ಲಿ

ರಾಮನಗರ ಟೌನಿನ ರಸ್ತೆಗಾಗಿ 82 ಕೋಟಿ, ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ 5 ಕೋಟಿ, ಅರ್ಕಾವತಿ ನದಿ ಪ್ರದೇಶದಲ್ಲಿ ವಾಕ್ ಪಾತ್ ಮಾಡಲು 156 ಕೋಟಿ , ಅಲ್ಪಸಂಖ್ಯಾತರ ಪ್ರದೇಶಗಳ ಅಭಿವೃದ್ಧಿಗೆ 12.50 ಕೋಟಿ ಹಾಗೂ ಮಳೆ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿಗೆ 5.40 ಕೋಟಿ ರುಪಾಯಿ ಅನುದಾನ ಬಿಡುಗಡೆಯಾಗಿದ್ದು, ಈ ಎಲ್ಲ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆದಿವೆ. ನೆನಗುದಿಗೆ ಬಿದ್ದಿದ್ದ ರಾಜೀವ್ ಗಾಂಧಿ ಆರೋಗ್ಯ ವಿವಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. 100 ಎಕರೆ ಜಾಗ ಗುರುತಿಸಿ ಬಡವರಿಗೆ ನಿವೇಶನ ಒದಗಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದರು.

ಕಳೆದ 10 ವರ್ಷಗಳಲ್ಲಿ ನಗರ ಪ್ರದೇಶದ ವಾರ್ಡು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸ್ಥಳದಲ್ಲಿಯೇ ಪರಿಹಾರ ದೊರಕಿಸಿದ್ದಾರೆ. ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ. ಈ ಕಾರಣದಿಂದಾಗಿಯೇ ಡಿ.ಕೆ.ಸುರೇಶ್ ಅವರಿಗೆ ಬಿಜೆಪಿ ಸರ್ಕಾರವೇ ಮಾದರಿ ಸಂಸದ ಎಂಬ ಬಿರುದು ನೀಡಿದೆ ಎಂದು ಹೇಳಿದರು.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುವ ಮೂಲಕ ಮಾದರಿ ರಾಮನಗರ ನಿರ್ಮಾಣಕ್ಕೆ ಸಹಕಾರ ನೀಡುತ್ತಿದೆ. ಮತದಾರರು ಸಂಸತ್ ಚುನಾವಣೆಯಲ್ಲಿ ಭಾವನಾತ್ಮಕ ಮಾತುಗಳಿಗೆ ಮಾರು ಹೋಗದೆ ಹಾಗೂ ಸುಳ್ಳು, ಅಪಪ್ರಚಾರಕ್ಕೆ ಕಿವಿಗೊಡದೆ ರಾಮನಗರದ ಸಮಗ್ರ ಅಭಿವೃದ್ಧಿಗಾಗಿ ಡಿ.ಕೆ.ಸುರೇಶ್ ಅವರನ್ನು ಬೆಂಬಲಿಸುವಂತೆ ಜಿಯಾವುಲ್ಲಾ ಜನರಲ್ಲಿ ಮನವಿ ಮಾಡಿದರು.

ಈ ವೇಳೆ ನಗರಸಭೆ ಸದಸ್ಯ ಸೈಯದ್ ಅಕ್ಲಿಂ, ವಕ್ಫ್ ಬೋರ್ಡ್ ಸಲಹಾ ಸಮಿತಿ ಮಾಜಿ ಮೋಸಿನ್ ಷರೀಫ್ , ಮುಖಂಡರಾದ ಎಂ.ಡಿ.ಅಫ್ರೋಜ್, ಮೊಹಮ್ಮದ್ ಇಸ್ಮಾಯಿಲ್, ಮೊಹಮ್ಮದ್ ನಸ್ರುಲ್ಲಾ, ಅಬ್ದುಲ್ ಸಮದ್ ಇತರರು ಹಾಜರಿದ್ದರು.

ಕೋಟ್ ............

ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಯಬೇಕಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದ್ದು, ಕೇಂದ್ರದಲ್ಲಿಯೂ ಇಂಡಿಯಾ ಕೂಟ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ. ಸಂಸದ ಡಿ.ಕೆ.ಸುರೇಶ್ ರವರು ಕ್ಷೇತ್ರದ ಜನರೊಂದಿಗೆ ನೇರವಾಗಿ ಸಂಪರ್ಕ ಇಟ್ಟುಕೊಂಡವರು. ಇಂತಹ ಅಭ್ಯರ್ಥಿ ಯಾವ ಸಂದರ್ಭದಲ್ಲಿಯೂ ಸಿಕ್ಕಿಲ್ಲ.

ಸುರೇಶ್ ರವರು ಮರು ಆಯ್ಕೆಯಾಗುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗಲಿದೆ.

-ಸೈಯದ್ ಜಿಯಾವುಲ್ಲಾ, ಉಪಾಧ್ಯಕ್ಷರು, ಕೆಪಿಸಿಸಿ

24ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ಟೌನಿನಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಜಿಯಾವುಲ್ಲಾ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು.