ರಾಮನಗರ ಪಿಕಾರ್ಡ್ ಬ್ಯಾಂಕ್‌ ಅಭಿವೃದ್ಧಿಗೆ ಸಹಕರಿಸಿ: ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಯು.ನರಸಿಂಹಯ್ಯ

| Published : Sep 22 2024, 01:46 AM IST

ರಾಮನಗರ ಪಿಕಾರ್ಡ್ ಬ್ಯಾಂಕ್‌ ಅಭಿವೃದ್ಧಿಗೆ ಸಹಕರಿಸಿ: ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಯು.ನರಸಿಂಹಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಆರ್ಥಿಕ ನಷ್ಟದಲ್ಲಿದ್ದ ಬ್ಯಾಂಕನ್ನು ಲಾಭದತ್ತ ಕೊಂಡೊಯ್ಯಲು ಆಡಳಿತ ಮಂಡಳಿಯ ನಿರ್ದೇಶಕರ ಸಹಕಾರದಲ್ಲಿ ಶ್ರಮಿಸಲಾಗುತ್ತಿದೆ ಎಂದು ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಯು.ನರಸಿಂಹಯ್ಯ ಹೇಳಿದರು. ರಾಮನಗರದಲ್ಲಿ 023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

-2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ನರಸಿಂಹಯ್ಯ ಸಲಹೆ

-ರೈತರು ಸೌಲಭ್ಯಗಳನ್ನ ಸದ್ಬಳಸಿಕೊಳ್ಳಿ

ಕನ್ನಡಪ್ರಭ ವಾರ್ತೆ ರಾಮನಗರ

ಆರ್ಥಿಕ ನಷ್ಟದಲ್ಲಿದ್ದ ಬ್ಯಾಂಕನ್ನು ಲಾಭದತ್ತ ಕೊಂಡೊಯ್ಯಲು ಆಡಳಿತ ಮಂಡಳಿಯ ನಿರ್ದೇಶಕರ ಸಹಕಾರದಲ್ಲಿ ಶ್ರಮಿಸಲಾಗುತ್ತಿದೆ ಎಂದು ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಯು.ನರಸಿಂಹಯ್ಯ ಹೇಳಿದರು.

ನಗರದಲ್ಲಿನ ರಾಮನಗರ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ರಾಮನಗರ ಶಾಖೆಯಲ್ಲಿ ಶನಿವಾರ ನಡೆದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಯಾಂಕಿನಲ್ಲಿ ಒಟ್ಟು 1645 ಸದಸ್ಯರಿದ್ದು, ಸದಸ್ಯರಿಗೆ ಅನುಕೂಲ ಮಾಡಿಕೊಡಲು ಬ್ಯಾಂಕಿನ ವ್ಯವಹಾರಗಳನ್ನು ಕಂಪ್ಯೂಟೀಕರಣ ಮಾಡಲಾಗಿದೆ. ಕಡಿಮೆ ದರದಲ್ಲಿ ಇ-ಸ್ಟ್ಯಾಂಪ್ ವಿತರಣಾ ವ್ಯವಸ್ಥೆ, ಯಶಸ್ವಿನಿ ಯೋಜನೆ, ಭೂ ದಾಖಲೆಗಳ ಪ್ರತಿಗಳಾದ ಆರ್ ಟಿಸಿ, ಎಂ.ಆರ್.ದಾಖಲೆಗಳನ್ನು ಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ರೈತರು ಬಳಸಿಕೊಳ್ಳುವಂತೆ ಕರೆ ನೀಡಿದರು.

ರಾಮನಗರ ಪಿಕಾರ್ಡ್ ಬ್ಯಾಂಕಿನಲ್ಲಿ 3 ಕೋಟಿ 96 ಲಕ್ಷ ರು. ಸುಸ್ತಿ ಸಾಲವಿದೆ. ಅದರಲ್ಲಿ 3.53 ಲಕ್ಷ ರು. ವಸೂಲಿ ಆಗಿದೆ. ಸರ್ಕಾರದಿಂದ ಬ್ಯಾಂಕಿಗೆ 1.8 ಕೋಟಿ ರು. ಬಡ್ಡಿ ಮನ್ನಾ ಸಹಾಯಧನ ಹಣ ಬರಬೇಕಿದೆ. ಅಲ್ಲದೆ ಪ್ರಮುಖವಾಗಿ ಸಹಕಾರಿ ಕಾನೂನಿನನ್ವಯ ಸದಸ್ಯರ ಷೇರು ಧನ 1000 ರು. ಆಗಿದ್ದು ಇನ್ನೂ 825 ಸದಸ್ಯರು ತಮ್ಮ ಉಳಿಕೆ ಷೇರು ಹಣ ಪಾವತಿಸುವಂತೆ ಮನವಿ ಮಾಡಿದರು.

ಬ್ಯಾಂಕಿನ ಸದಸ್ಯರ ಜೀವನ ಮಟ್ಟ ಸುಧಾರಣೆಗಾಗಿ ಸದಸ್ಯರುಗಳಲ್ಲಿ ಮಿತವ್ಯಯ, ಉಳಿತಾಯ, ಪರಸ್ಪರ ಸಹಾಯವನ್ನು ಉತ್ತೇಜಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ನರಸಿಂಹಯ್ಯ ಹೇಳಿದರು.

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿ, ರಾಮನಗರ ಶಾಖೆಯು 2023-24 ನೇ ಸಾಲಿನಲ್ಲಿ ಶೇಕಡ 89.6ರಷ್ಟು ಸಾಲ ವಸೂಲಾತಿ ಮಾಡಿ, ರಾಜ್ಯಮಟ್ಟದಲ್ಲಿ 30ನೇ ಸ್ಥಾನ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದೆ. ಹಾಗಾಗಿ ಸೆ.23 ರಂದು ಕೇಂದ್ರ ಬ್ಯಾಂಕಿನಲ್ಲಿ ನಡೆಯುವ ಸಭೆಯಲ್ಲಿ ಪ್ರಶಂಸಾ ಫಲಕ ಪಡೆಯಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಭೆಯಲ್ಲಿ ಶಾಖಾ ವ್ಯವಸ್ಥಾಪಕ ರಾಜೇಶ್ ಎಂ.ಬಿ.ವಾರ್ಷಿಕ ವರದಿ ಮಂಡನೆ ಮಾಡಿ, 2023-24ನೇ ಸಾಲಿನ ಖರ್ಚು ವೆಚ್ಚ, 2024-25 ನೇ ಸಾಲಿನ 30.65 ಲಕ್ಷ ರು. ಬಜೆಟ್ ಗೆ ಅನುಮೋದನೆ ಕೋರಿದರು. ಈ ವಿಷಯಗಳ ಮೇಲೆ ಸದಸ್ಯರು ಚರ್ಚೆ ನಡೆಸಿ ಪ್ರತಿ ವರ್ಷ ನಷ್ಟವನ್ನು ಅನುಭವಿಸುತ್ತಿದ್ದ ರಾಮನಗರ ಪಿಕಾರ್ಡ್ ಬ್ಯಾಂಕನ್ನು ಲಾಭದತ್ತ ಕೊಂಡೊಯ್ಯುವ ಕೆಲಸ ಮಾಡಿರುವುದರಿಂದ ಸದಸ್ಯರಿಗೆ ಬ್ಯಾಂಕಿನ ಮೇಲೆ ನಂಬಿಕೆ ಹೆಚ್ಚುತ್ತಿದೆ. ಸಂಘದಲ್ಲಿ ಖರ್ಚನ್ನು ಕಡಿಮೆ ಮಾಡಿಕೊಂಡು ಸರ್ಕಾರ ಬಡ್ಡಿ ಸಹಾಯಧನ ಮತ್ತು ಸದಸ್ಯರಿಂದ ಬರಬೇಕಿರುವ ಸಾಲ ಮರುಪಾವತಿಗೆ ಕ್ರಮ ವಹಿಸಿ, ಅಲ್ಲದೆ ಸದಸ್ಯರಿಗೆ ನೀಡುತ್ತಿರುವ ಕೃಷಿ ಆಧಾರಿತ ಸಾಲ ಹೆಚ್ಚಳ ಮಾಡಿ ಎಂಬ ಸಲಹೆ ನೀಡಿದರು. ಆಡಳಿತ ಮಂಡಳಿ ಸದಸ್ಯರು ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷೆ ವಿನೋದಾ ಕೆ.ಪಟೇಲ್, ನಿರ್ದೇಶಕರಾದ ಆರ್.ಮಲ್ಲೇಶ್, ಎಂ.ಆರ್.ಶಿವಕುಮಾರಸ್ವಾಮಿ, ಶಿವಣ್ಣ, ಪುಟ್ಟಮಾರೇಗೌಡ, ಕೆ.ನಂಜಪ್ಪ, ಸಂತೋಷ್, ಸುಮಿತ್ರ, ಜಯಲಕ್ಷಮ್ಮ, ರಾಜಣ್ಣ, ಗೋವಿಂದನಾಯ್ಕ, ಕರಿಹುಚ್ಚಮ್ಮ ಮತ್ತಿತರರು ಉಪಸ್ಥಿತರಿದ್ದರು.