ಸಾರಾಂಶ
ಹಾನಗಲ್ಲ: ದೇಶದ ಅಭಿವೃದ್ಧಿಯ ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಿದರೆ ಭಾರತ ಸಮರ್ಥವಾಗಿ ಮುನ್ನಡೆಯುತ್ತದೆ ಎಂಬುದನ್ನು ಜನರು ಮನಗಾಣಬೇಕು ಎಂದು ಚಿತ್ರನಟಿ ಶ್ರುತಿ ಕರೆ ನೀಡಿದರು.
ಬುಧವಾರ ತಾಲೂಕಿನ ತಿಳವಳ್ಳಿಯಲ್ಲಿ ಬಿಜೆಪಿ ಅಬ್ಯರ್ಥಿ ಬಸವರಾಜ್ ಬೊಮ್ಮಾಯಿ ಪರ ಮತಯಾಚಿಸಿ ರೋಡ್ ಶೋ ನಡೆಸಿ ಅವರು ಮಾತನಾಡಿದರು. ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಯ ಪರವಾಗಿ ಆಡಳಿತ ನಿರ್ವಹಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ ನೀಡುವ ಮೂಲಕ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಪ್ರತಿ ಮನೆಯಲ್ಲೂ ಮಹಿಳೆಯರು ಮನಸ್ಸು ಮಾಡಬೇಕು ಎಂದು ಹೇಳಿದರು.ಈ ಚುನಾವಣೆ ದೇಶದ ಭವಿಷ್ಯ ಬರೆಯುವಂಥದ್ದಾಗಿದೆ. ದೇಶವನ್ನು ನಡೆಸುವಂಥ ಶಕ್ತಿಯಿರುವವರನ್ನು ಬೆಂಬಲಿಸಬೇಕು. ೬೦ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಮಾಡಿದ ಸಾಧನೆಯನ್ನು ಪ್ರಧಾನಿ ಮೋದಿ ಕೇವಲ ೧೦ ವರ್ಷಗಳಲ್ಲಿ ಹಿಂದಿಕ್ಕಿ ಜಾಗತಿಕ ಮಟ್ಟದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಇಡೀ ವಿಶ್ವದ ಪ್ರಗತಿಪರ ರಾಷ್ಟ್ರಗಳೆಲ್ಲವೂ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಮೆಚ್ಚಿಕೊಳ್ಳುತ್ತಿವೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಆನಂತರ ಮಹಿಳೆಯರಿಗೆ ನೀಡಿದಷ್ಟು ಯೋಜನೆಗಳನ್ನು ಹಿಂದಿನ ಯಾವುದೇ ಸರ್ಕಾರ ಕೊಟ್ಟಿರಲಿಲ್ಲ ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮೇ ೭ರಂದು ನಡೆಯುವ ಲೋಕಸಭಾ ಚುನಾವಣೆ ದೇಶದ ಭವಿಷ್ಯವನ್ನು ಬರೆಯುವ ಮಹತ್ವದ ಚುನಾವಣೆಯಾಗಿದೆ. ಈ ದೇಶ ಉಳಿದರೆ ಮಾತ್ರ ನಮ್ಮ ನಗರ, ರಾಜ್ಯ ಉಳಿಯಲು ಸಾಧ್ಯವಿದೆ. ದೇಶದ ೧೪೦ ಕೋಟಿ ಜನತೆಯನ್ನು ಒಟ್ಟಾಗಿ ಕರೆದೊಯ್ಯುವಂಥ ನಾಯಕತ್ವ ಗುಣಗಳುಳ್ಳ ನಾಯಕರನ್ನು ಆಯ್ಕೆ ಮಾಡಬೇಕಾಗಿದೆ ಎಂದರು.ಚೆನ್ನಮ್ಮ ಬೊಮ್ಮಾಯಿ, ಮಾಜಿ ಸಚಿವ ಮನೋಹರ ತಹಶೀಲ್ದಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ಬಿಜೆಪಿ ಅಧ್ಯಕ್ಷ ಮಹೇಶ ಕಮಡೊಳ್ಳಿ, ಜೆಡಿಎಸ್ ಅಧ್ಯಕ್ಷ ಆರ್.ಬಿ. ಪಾಟೀಲ, ಗಣ್ಯರಾದ ಮಾಲತೇಶ ಸೊಪ್ಪಿನ, ಭೋಜರಾಜ ಕರೂದಿ, ರಾಜಶೇಖರಗೌಡ ಕಟ್ಟೇಗೌಡರ, ಕೃಷ್ಣ ಈಳಗೇರ, ಬಸವರಾಜ ಹಾದಿಮನಿ, ನಿಂಗಪ್ಪ ಗೊಬ್ಬೇರ, ರಾಜು ಗೌಳಿ, ಶಿವಲಿಂಗಪ್ಪ ತಲ್ಲೂರ ಇತರರು ಪಾಲ್ಗೊಂಡಿದ್ದರು.