ಪುಸ್ತಕ ವಿತರಣೆಯಿಂದ ವಿದ್ಯಾರ್ಥಿಗಳಿಗೆ ಆಸರೆ

| Published : Dec 13 2023, 01:00 AM IST

ಸಾರಾಂಶ

ಡಾ.ಎಚ್‌.ಎಫ್‌.ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನದ ಪುಸ್ತಕ ಪಂಚಮಿ ವಾರ್ಷಿಕೋತ್ಸವದಲ್ಲಿ ಜಿ.ಕೊಟ್ರೇಶ ಅಭಿಮತ

ಡಾ.ಎಚ್‌.ಎಫ್‌.ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನದ ಪುಸ್ತಕ ಪಂಚಮಿ ವಾರ್ಷಿಕೋತ್ಸವದಲ್ಲಿ ಜಿ.ಕೊಟ್ರೇಶ ಅಭಿಮತ

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಸಿದವರಿಗೆ ಅನ್ನ ಕೊಟ್ಟರೆ ಒಂದು ಹೊತ್ತಿನ ಪ್ರಸಾದವಾಗುತ್ತದಷ್ಟೇ. ಆದರೆ, ಅನ್ನದ ಜಾಗದಲ್ಲಿ ಪುಸ್ತಕಗಳ ಬಡ ಮಕ್ಕಳಿಗೆ ನೀಡಿದರೆ ಅದು ಜೀವನ ಸಾಧನೆ, ನಿರಂತರ ಪ್ರಸಾದಕ್ಕೆ ಆಸರೆಯಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಜಿ.ಕೊಟ್ರೇಶ ತಿಳಿಸಿದರು.

ನಗರದ ಈಶ್ವರಮ್ಮ ಪ್ರೌಢಶಾಲೆಯಲ್ಲಿ ಮಂಗಳವಾರ ಡಾ.ಎಚ್‌.ಎಫ್‌.ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಜಿಲ್ಲಾ ಘಟಕ, ಧಾರವಾಡದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಈಶ್ವರಮ್ಮ ಶಾಲಾ ಆಡಳಿತ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಪಂಚಮಿಯ 14ನೇ ವಾರ್ಷಿಕೋತ್ಸವ-2023 ಹಾಗೂ ಪುಸ್ತಕ ವಾಚನ ಸಹಾಯಕ ಯೋಜನೆಯ 21 ಶಾಲೆಗಳ ಫಲಾನುಭವಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಷ್ಠಾನದ ಪುಸ್ತಕ ಪಂಚಮಿ ಕಾರ್ಯಕ್ರಮ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿಸುವ ಕಾರ್ಯಕ್ರಮ. ವಿದ್ಯಾರ್ಜನೆಗೆ ಅವಕಾಶ ಸಿಕ್ಕಾಗ ಮಕ್ಕಳ ಉನ್ನತಿಯಾಗಲಿದೆ. ಇದರಿಂದ ವ್ಯಕ್ತಿಯಿಂದ ವ್ಯಕ್ತಿಗೆ ಜ್ಞಾನಪ್ರಸಾರವಾಗಲಿದೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ವ್ಯತ್ಯಾಸವಿರುತ್ತದೆ ಎಂದು ತಿಳಿಸಿದರು.

ಪುಸ್ತಕ ವಿತರಣೆ, ಶೈಕ್ಷಣಿಕ ನೆರವು ನೀಡಿ ವಿದ್ಯಾಭ್ಯಾಸಕ್ಕೆ ಸಹಾಯ ಸಿಕ್ಕಾಗ ವಿದ್ಯಾರ್ಥಿಗಳು ಉನ್ನತ ಪ್ರಗತಿ ಸಾಧಿಸಲು ಸಾಧ್ಯ. ಅಂತಹದ್ದೊಂದು ಕೆಲಸವನ್ನು ಡಾ.ಎಚ್.ಎಫ್‌.ಕಟ್ಟೀಮನಿ ಪ್ರತಿಷ್ಠಾನ ಮಾಡುತ್ತಿರುವುದು ಶ್ಲಾಘನೀಯ. ಪ್ರತಿಷ್ಟಾನವು ಈ ಸಲ 21 ಶಾಲೆಗಳ 54 ಮಕ್ಕಳಿಗೆ ಪುಸ್ತಕ ವಿತರಿಸುತ್ತಿದ್ದು, ಇಂತಹ ಮಕ್ಕಳ ಜ್ಞಾನಮಟ್ಟದ ಬೆಳ‍ಣಿಗೆಗೆ ಸಹಾಯಕವಾಗಿ ನಿಘಂಟು, ವ್ಯಾಕರಣ ಸೇರಿ ಹಲವಾರು ಪುಸ್ತಕ ನೀಡುತ್ತಿರುವುದು ಅನುಕರಣೀಯ ಎಂದು ಕೊಟ್ರೇಶ್ ಶ್ಲಾಘಿಸಿದರು.

ಮಕ್ಕಳಿಗೆ ನೆರವಿನ ಹಸ್ತ:

ಪ್ರತಿಷ್ಠಾನದ ಸಹ ಸಂಚಾಲಕ, ಮಕ್ಕಳ ತಜ್ಞ ಡಾ.ಸಿ.ಆರ್‌.ಬಾಣಾಪುರ ಮಠ ಮಾತನಾಡಿ, 15 ವರ್ಷದ ಹಿಂದೆ ಕಟ್ಟಿಮನಿ ಪ್ರತಿಷ್ಠಾನ ಆರಂಭವಾಗಿದ್ದು, ಕಟ್ಟಿಮನೆ ತಮ್ಮ ತಾತ. ಶಾಲೆಗಳಿಲ್ಲದ ಗ್ರಾಮಗಳಲ್ಲಿ ಶಾಲೆ ಸ್ಥಾಪಿಸಿ, ಬಡ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂಬ ಆಸೆ ತಾತನವರಿಗೆ ಇತ್ತು. ಅಂತಹ ಹಿರಿಯರ ಸ್ಮರಣಾರ್ಥ ಪ್ರತಿಷ್ಠಾನ ಸ್ಥಾಪಿಸಿ, ಮಕ್ಕಳಿಗೆ ನೆರವಿನ ಹಸ್ತ ಚಾಚಲಾಗುತ್ತಿದೆ. ಒಬ್ಬ ವಿದ್ಯಾರ್ಥಿಗೆ 520 ರು. ಮೌಲ್ಯದ ಪುಸ್ತಕ ನೀಡಲಾಗುತ್ತಿದೆ. ಅಮೆರಿಕ ಸೇರಿ ವಿವಿಧೆಡೆ ದಾನಿಗಳಿಂದ ಧನಸಹಾಯ ಹರಿದು ಬರುತ್ತಿದ್ದು, ಅದನ್ನು ಮಕ್ಕಳಿಗಾಗಿ ಬಳಸಲಾಗುತ್ತಿದೆ ಎಂದರು.

ಶಾಲಾ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಎ.ಆರ್.ಉಷಾ ರಂಗನಾಥ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯರಾದ ಕೆ.ಎಸ್.ಪ್ರಭು ಕುಮಾರ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ, ದಾನಿ ಕಿರುವಾಡಿ ಗಿರಿಜಮ್ಮ, ಪ್ರತಿಷ್ಠಾನ ಸಂಚಾಲಕ ಪ್ರಕಾಶ ಬೂಸ್ನೂರು, ಸಹ ಸಂಚಾಲಕ ವಿ.ಸಿ.ಪುರಾಣಿಕ್‌, ಶಾಲಾ ಆಡಳಿತ ಮಂಡಳಿಯ ಸುಜಾತಾ, ಕನ್ನಡ ಶಿಕ್ಷಕಿ ಶ್ರೀದೇವಿ ಇತರರಿದ್ದರು. ಕಳೆದ ವರ್ಷದ ಫಲಾನುಭವಿ ಮಕ್ಕಳು ತಮ್ಮ ಅನಿಸಿಕೆ ಹಂಚಿಕೊಂಡರು.

ಮಕ್ಕಳಲ್ಲಿ ಕೀಳರಿಮೆ ಹುಟ್ಟು ಹಾಕದಿರಿ

ಪಾಲಕರಾಗಲೀ, ಶಿಕ್ಷಕರಾಗಲೀ ಮಕ್ಕಳಲ್ಲಿ ಜಾಣ-ದಡ್ಡ ಅಂತಾ ಪಟ್ಟ ಕಟ್ಟಬೇಡಿ. ಹೀಗೆ ಮಾಡಿದರೆ ಮಕ್ಕಳಲ್ಲಿ ಕೀಳರಿಮೆ ನೀವೇ ಹುಟ್ಟು ಹಾಕಿದಂತಾಗುತ್ತದೆ. ಮನೆಯಲ್ಲಿ ಹೆತ್ತವರು ಸಂಜೆ ಕನಿಷ್ಟ 1 ಗಂಟೆ ಕಾಲ ಮೊಬೈಲ್‌, ಟಿವಿ ಬಂದ್ ಮಾಡಿ, ನಿಮ್ಮ ಮಕ್ಕಳನ್ನು ಓದಿಸಲು ಕುಳಿತರೆ, ಮಕ್ಕಳ ಭವಿಷ್ಯ ಉಜ್ವಲವಾಗಲಿದೆ. ಜಿ.ಕೊಟ್ರೇಶ, ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ಉಪ ನಿರ್ದೇಶಕ