ಸಾರಾಂಶ
-ಯೋಗೇಶ್ವರ್‌ಗೆ ಬಿಜೆಪಿ ಹೈಕಮಾಂಡ್‌ನಿಂದ ಬುಲಾವ್ -ಉಪಚುನಾವಣೆ ಟಿಕೆಟ್ ಕುರಿತು ಚರ್ಚೆ ಸಾಧ್ಯತೆ?ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಸಮಾನ ಮನಸ್ಕರ ವೇದಿಕೆ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಬೆಂಬಲಿಗರು ಆ.೧೧ರಂದು ಆಯೋಜಿಸಿದ್ದ "ನಮ್ಮ ಶಾಸಕ-ನಮ್ಮ ಆಯ್ಕೆ " ಸಮಾವೇಶ ರದ್ದು ಮಾಡಲಾಗಿದೆ. ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಿ.ಪಿ.ಯೋಗೇಶ್ವರ್ ಅವರಿಗೆ ದೆಹಲಿ ಹೈಕಮಾಂಡ್‌ನಿಂದ ಬುಲಾವ್ ಬಂದ ಹಿನ್ನೆಲೆಯಲ್ಲಿ ಸಮಾವೇಶವನ್ನು ರದ್ದುಗೊಳಿಸಲಾಗಿದೆ ಎನ್ನಲಾಗಿದೆ.ಚನ್ನಪಟ್ಟಣ ಉಪಚುನಾವಣೆಯ ಎನ್‌ಡಿಎ ಟಿಕೆಟ್‌ಗಾಗಿ ಮೈತ್ರಿ ಪಕ್ಷದಲ್ಲಿ ಹಗ್ಗಜಗ್ಗಾಟ ನಡೆಯುತ್ತಿದ್ದು, ಚುನಾವಣೆಯಲ್ಲಿ ಯೋಗೇಶ್ವರ್ ಸ್ಪರ್ಧಿಸಲೇಬೇಕೆಂದು ಅವರ ಬೆಂಬಲಿಗರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಆ.೧೧ರಂದು ನಗರದಲ್ಲಿ ಬೃಹತ್ ಸಮಾವೇಶ ಆಯೋಜಿಸಲು ಸಿದ್ಧತೆ ನಡೆಸಿದ್ದರು. ಆದರೆ, ಟಕೆಟ್ ವಿಚಾರಕ್ಕೆ ಸಂಬಂಧಿಸಿ ಮಾತುಕತೆ ನಡೆಸಲು ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಯೋಗೇಶ್ವರ್‌ಗೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಸಮಾವೇಶ ಮುಂದೂಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜೆಡಿಎಸ್‌ನಿಂದಲೂ ಪಟ್ಟು:ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್ ಶಾಸಕರು ಪ್ರತಿನಿಧಿಸುತ್ತಿದ್ದರು. ಹಿಂದೆ ಎಚ್.ಡಿ.ಕುಮಾರಸ್ವಾಮಿ ಇಲ್ಲಿಂದ ಶಾಸಕರಾಗಿದ್ದರು. ಇದರ ಜತೆಗೆ ರಾಜ್ಯದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ಎದುರಾಗಿದ್ದು, ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂದು ಜೆಡಿಎಸ್ ಮುಖಂಡರು ಪಟ್ಟುಹಿಡಿದಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ತಮ್ಮ ಶಕ್ತಿ ತೋರಿಸಲು, ವಿರೋಧಿಗಳು ಹಾಗೂ ಸ್ವಪಕ್ಷೀಯರಿಗೆ ಸಂದೇಶ ರವಾನಿಸುವ ನಿಟ್ಟಿನಲ್ಲಿ ಯೋಗೇಶ್ವರ್ ಅಭಿಮಾನಿಗಳ ಮೂಲಕ ಸಮಾವೇಶ ನಡೆಸಲು ಮುಂದಾಗಿದ್ದರು. ಮೈತ್ರಿ ಟಿಕೆಟ್ ಸಿಗದಿದ್ದರೆ, ಪಕ್ಷೇತರರಾಗಿಯೂ ಸ್ಪರ್ಧಿಸಲು ಸಿದ್ಧ ಎಂಬ ಸಂದೇಶ ರವಾನಿಸುವ ಉದ್ದೇಶ ಇದರ ಹಿಂದಿತ್ತು ಎನ್ನಲಾಗಿದೆ.
ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿದ್ದ ಮೈಸೂರು ಚಲೋ ಪಾದಯಾತ್ರೆ ಚನ್ನಪಟ್ಟಣ ಪ್ರವೇಶಿಸಿದ ವೇಳೆ ಬಹಿರಂಗ ವೇದಿಕೆಯಲ್ಲಿ ಸಮಾನ ಮನಸ್ಕರ ಸಮಾವೇಶ ಕುರಿತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದರು. ಟಿಕೆಟ್ ವಿಚಾರ ಹಾದಿಬೀದಿಯಲ್ಲಿ ತೀರ್ಮಾನ ಮಾಡಲು ಆಗುವುದಿಲ್ಲ, ಅದನ್ನು ಎರಡು ಪಕ್ಷದ ನಾಯಕರು ಕೂತು ತೀರ್ಮಾನಿಸುತ್ತಾರೆ ಎಂದಿದ್ದರು.ಇದರ ಬೆನ್ನಲ್ಲೇ ಯೋಗೇಶ್ವರ್ ಅವರಿಗೆ ಬಿಜೆಪಿ ವರಿಷ್ಠರು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಚನ್ನಪಟ್ಟಣ ಟಿಕೆಟ್ ವಿಚಾರ ದೆಹಲಿ ಅಂಗಳ ತಲುಪಿದ್ದು, ಟಿಕೆಟ್ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಸಿಪಿವೈ ಚುನಾವಣಾ ತಯಾರಿಚನ್ನಪಟ್ಟಣ ಉಪಚುನಾವಣೆಯಲ್ಲಿ ಈ ಬಾರಿ ಶತಾಯಗತಾಯ ಸ್ಪರ್ಧಿಸಲೇಬೇಕು ಎಂದು ಯೋಗೇಶ್ವರ್ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಯಾರಿ ನಡೆಸಿದ್ದಾರೆ. ಎನ್‌ಡಿಎ ಟಿಕೆಟ್ ತಮಗೆ ದೊರೆಯಲಿದೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ಗ್ರೀನ್ ಸಿಗ್ನಲ್ ಸಹ ಸಿಕ್ಕಿದೆ ಎಂದು ಕೆಲ ದಿನಗಳ ಹಿಂದೆ ಯೋಗೇಶ್ವರ್ ಘೋಷಿಸಿದ್ದರು. ಆದರೆ, ಆನಂತರ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎಂಬಂತಹ ಬೆಳವಣಿಗೆಗಳು ನಡೆದಿದ್ದವು. ಇದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.