ಜಿಲ್ಲಾಡಳಿತದಿಂದ ಪ್ರತಿಭಟನೆಗಳನ್ನು ಹತ್ತಿಕ್ಕುವ ಕೆಲಸ

| Published : Sep 10 2024, 01:32 AM IST

ಸಾರಾಂಶ

ರಾಮನಗರ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆಗಳಿಗೆ ನಿಷೇಧ ಹೇರುವ ಮೂಲಕ ರಾಮನಗರ ಜಿಲ್ಲಾಧಿಕಾರಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಈ ಕೂಡಲೇ ಜಿಲ್ಲಾಧಿಕಾರಿ ತಮ್ಮ ಈ ಆದೇಶವನ್ನು ಹಿಂದಕ್ಕೆ ಪಡೆದು, ಮೊದಲಿನಂತೆ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಬೇಕು. ಇಲ್ಲದಿದಲ್ಲಿ ಈ ವಿಚಾರದ ಕುರಿತು ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ರಾಮನಗರ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆಗಳಿಗೆ ನಿಷೇಧ ಹೇರುವ ಮೂಲಕ ರಾಮನಗರ ಜಿಲ್ಲಾಧಿಕಾರಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಈ ಕೂಡಲೇ ಜಿಲ್ಲಾಧಿಕಾರಿ ತಮ್ಮ ಈ ಆದೇಶವನ್ನು ಹಿಂದಕ್ಕೆ ಪಡೆದು, ಮೊದಲಿನಂತೆ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಬೇಕು. ಇಲ್ಲದಿದಲ್ಲಿ ಈ ವಿಚಾರದ ಕುರಿತು ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೈತ, ಕನ್ನಡ ಹಾಗೂ ದಲಿತಪರ ಸಂಘಟನೆಗಳು ಕರೆ ನೀಡಿದ್ದ ಅನಿರ್ಧಿಷ್ಟಾವಧಿ ಸತ್ಯಾಗ್ರಹದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜಿಲ್ಲಾಧಿಕಾರಿಯು ಆಯಾ ಜಿಲ್ಲೆಯ ಮೊದಲ ಸೇವಕರಾಗಿರುತ್ತಾರೆ. ರೈತ ಹೋರಾಟಗಾರಾದ ನಂಜುಂಡಸ್ವಾಮಿ ಅವರು ಪ್ರತಿಪಾದಿಸಿದಂತೆ ಡಿಸಿಯು ಜಿಲ್ಲೆಯ ಮೊದಲ ಕೂಲಿಕಾರರಾಗಿದ್ದಾರೆ. ನಾನೊಬ್ಬ ಜಿಲ್ಲೆಯ ಮೊದಲ ಕ್ಲರ್ಕ್ ಎಂಬುದನ್ನು ಮರೆತಿರುವ ಇಲ್ಲಿನ ಜಿಲ್ಲಾಧಿಕಾರಿ ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ರೈತರು ಹಾಗೂ ಸಾರ್ವಜನಿಕರ ತೆರಿಗೆ ಹಣದಿಂದ ಅಧಿಕಾರಿಗಳಿಗೆ ವೇತನ ನೀಡಲಾಗುತ್ತಿದೆ. ಅದರೆ, ಇದು ಅಧಿಕಾರಶಾಹಿಗಳಿಗೆ ನೆನಪಿಲ್ಲ. ರೈತರು, ಬಡವರ ಕುರಿತು ಅವರಿಗೆ ಕಾಳಜಿ ಇಲ್ಲವಾಗಿದೆ. ಹಾಗಾಗಿ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಬ್ರಿಟಿಷರ ಕಾಲದಲ್ಲೂ ಸಹ ಸತ್ಯಗ್ರಹಕ್ಕೆ ಗೌರವ ನೀಡಲಾಗುತ್ತಿತ್ತು. ಅದಕ್ಕೆ ಎಲ್ಲಾ ರೀತಿಯ ಭದ್ರತೆಯನ್ನು ಒದಗಿಸುತ್ತಿತ್ತು. ಆದರೆ, ನಮ್ಮವರ ಆಡಳಿತದಲ್ಲಿ ಸತ್ಯಾಗ್ರಹಕ್ಕೆ ಅಗೌರವ ತೋರಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಂತಿಯುವಾಗಿ ಚಳವಳಿ ಹಮ್ಮಿಕೊಳ್ಳುವುದು. ಸತ್ಯಾಗ್ರಹ ನಡೆಸುವುದು ಸಾರ್ವಜನಿಕರ ಮೂಲಭೂತ ಹಕ್ಕು. ಕುಂಟು ನೆಪವೊಡ್ಡಿ ಈ ಹಕ್ಕನ್ನು ಮೊಟಕುಗೊಳಿಸಲು ಜಿಲ್ಲಾಧಿಕಾರಿಗೆ ಹಾಗೂ ಸರಕಾರಕ್ಕೆ ಅಧಿಕಾರ ಇಲ್ಲ. ಕೂಡಲೇ ಈ ನಿಷೇಧವನ್ನು ವಾಪಸ್ಸು ಪಡೆಯಬೇಕು. ಡಿಸಿ ಹೊರಡಿಸಿರುವ ಈ ಹೋರಾಟಗಾರರ ವಿರೋಧಿ ನಿಷೇಧಾಜ್ಞೆಯನ್ನು ತಕ್ಷಣವೇ ರದ್ದುಗೊಳಿಸಬೇಕು. ಇಲ್ಲವಾದರೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ರೈತ ಮುಖಂಡ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ರೈತರು ಮಳೆ ಚಳಿ ಹಾಗೂ ಬಿಸಿಲು ಎನ್ನದೆ ಹೊಲದಲ್ಲಿ ದುಡಿಯುತ್ತೇವೆ. ನಾವು ಬೆಳೆ ಆಹಾರವನ್ನು ತಿಂದು ಜನತೆಯಿಂದ ಲಂಚವನ್ನು ವಸೂಲಿ ಮಾಡಿ ಅಧಿಕಾರಿಗಳು ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ. ಪ್ರತಿಭಟನೆ ನಿರತ ಮಹಿಳೆಯರಿಗೆ ಕನಿಷ್ಟ ಡಿಸಿ ಕಚೇರಿಯಲ್ಲಿನ ಶೌಚಾಲಯ ಬಳಸಲು ಅವಕಾಶ ಇಲ್ಲ ಎಂದರೆ ಹೇಗೆ. ಅಧಿಕಾರಿಗಳು ಕನಿಷ್ಠ ಮಾನವೀಯತೆ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಡಿಸಿ ಪ್ರತಿಭಟನೆ ನಿಷೇಧಿಸುವ ಬದಲು ತಮ್ಮ ಕಚೇರಿಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ನಿಲ್ಲಿಸಬೇಕು. ರೈತರಿಗೆ ತೊಂದರೆಯಾದರೆ ನಾವು ಪ್ರತಿಭಟನೆ ನಡೆಸುತ್ತೇವೆ. ಸಂಘಟನೆಗಳು ಸಲ್ಲಿಸಿರುವ ವಿವಿಧ ೩೨ ಬೇಡಿಕೆಗಳನ್ನು ಜಿಲ್ಲಾಡಳಿತ ಶೀಘ್ರವೇ ಈಡೇರಿಸಬೇಕು. ಇಲ್ಲವಾದರೆ, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಕೆ.ಮಲ್ಲಯ್ಯ, ಚಿಲೂರು ಮುನಿರಾಜು, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ನರಸಿಂಹಮೂರ್ತಿ, ಪುನೀತ್ ರಾಜ್ ಇತರರಿದ್ದರು.

ಕೋಟ್‌...........

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಗಳಿಗೆ ನಿಷೇಧ ಹೇರಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ. ಜಿಲ್ಲಾಡಳಿತ ಹೋರಾಟದ ವಿರುದ್ಧ ೧೪೪ ಸೆಕ್ಷನ್ ಜಾರಿ ಮಾಡಿದೆ. ಇದನ್ನು ವಾಪಸ್ಸು ಪಡೆಯದಿದ್ದರೆ ಗೋಬ್ಯಾಕ್ ಚಳವಳಿ ಹಮ್ಮಿಕೊಳ್ಳಲಾಗುತ್ತದೆ.

-ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ರೈತ ಸಂಘ

ಕೋಟ್.............

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಿಷೇಧಾಜ್ಞೆ ಹೊರಡಿಸಿರುವುದು ಸರ್ಕಾರ 5 ಗ್ಯಾರಂಟಿ ಜತೆಗೆ ಮತ್ತೊಂದು ಗ್ಯಾರಂಟಿ ನೀಡಿದಂತಾಗಿದೆ. ಈ ವಿಚಾರದಲ್ಲಿ ಜಿಲ್ಲಾಡಳಿತ ಅವಿವೇಕತನದಿಂದ ನಡೆದುಕೊಳ್ಳುತ್ತಿದೆ. ರೈತರು ಕನ್ನಡ ಹಾಗೂ ದಲಿತಪರ ಹೋರಾಟಗಾರರು ಸರ್ಕಾರದ ಯಾವುದೇ ವಸ್ತುಗಳನ್ನು ಹಾನಿ ಮಾಡಿಲ್ಲ.

-ಶಿವುಗೌಡ, ರಾಜ್ಯ ಉಸ್ತುವಾರಿ, ಕರವೇ ಸ್ವಾಭಿಮಾನಿ ಬಣ

ಕೋಟ್.............

ಜಿಲ್ಲಾಡಳಿತ ಪ್ರತಿಭಟನೆಗಳನ್ನು ಹತ್ತಿಕ್ಕಲು ಸಕಲ ಪ್ರಯತ್ನ ಮಾಡುತ್ತಿದೆ. ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲು ಡಿಸಿ ಕಚೇರಿಗೆ ಅಲೆದಲೆದು ನಮ್ಮ ಚಪ್ಪಲಿ ಸವೆದಿದೆ. ಸಮಸ್ಯೆ ಪರಿಹಾರ ನೀಡುವ ಬದಲು ಜಿಲ್ಲಾಡಳಿತ ಹೋರಾಟವನ್ನು ನಿಷೇಧದ ಮೂಲಕ ಹತ್ತಿಕ್ಕಲು ಮುಂದಾಗಿದೆ. ಇದೇ ರೀತಿ ಮುಂದುವರಿದರೆ ಜಿಲ್ಲಾಡಳಿತದ ವಿರುದ್ಧ ಗೆರಿಲ್ಲಾ ಮಾದರಿ ಹೋರಾಟ ನಡೆಸಬೇಕಾಗುತ್ತದೆ.

-ಕುಮಾರಸ್ವಾಮಿ, ರಾಜ್ಯ ಸಲಹೆಗಾರ, ಜಯಕರ್ನಾಟಕ ಜನಪರ ವೇದಿಕೆ

ಕೋಟ್............

ರಾಮನಗರ ಜಿಲ್ಲಾಧಿಕಾರಿ ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ. ಹೋರಾಟದ ವಿಚಾರವಾಗಿ ಹೊರಡಿಸಿರುವ ನಿಷೇಧಾಜ್ಞೆಯನ್ನು ತಕ್ಷಣವೇ ವಾಪಸ್ಸು ಪಡೆಯಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ಉಗ್ರ ಹೋರಾಟ ನಡೆಸಬೇಕಾಗುತ್ತದೆ.

-ಎಂಎನ್‌ಆರ್ ರಾಜು, ಅಧ್ಯಕ್ಷ, ಕರವೇ(ಪ್ರವೀಣ್ ಶೆಟ್ಟಿ ಬಣ)