ಪುರುಷ ಪ್ರಧಾನ ಸಮಾಜದಿಂದ ಮಹಿಳಾ ಸ್ವಾತಂತ್ರ್ಯ ಹತ್ತಿಕ್ಕುವ ಕಾರ್ಯ: ನ್ಯಾಯಾಧೀಶ ಅಮೋಲ್ ಹಿರಿಕುಡೆ

| Published : Dec 25 2024, 12:46 AM IST / Updated: Dec 25 2024, 12:47 AM IST

ಪುರುಷ ಪ್ರಧಾನ ಸಮಾಜದಿಂದ ಮಹಿಳಾ ಸ್ವಾತಂತ್ರ್ಯ ಹತ್ತಿಕ್ಕುವ ಕಾರ್ಯ: ನ್ಯಾಯಾಧೀಶ ಅಮೋಲ್ ಹಿರಿಕುಡೆ
Share this Article
  • FB
  • TW
  • Linkdin
  • Email

ಸಾರಾಂಶ

ಪುರುಷ ಪ್ರಧಾನ ಸಮಾಜ ಮಹಿಳಾ ಸ್ವಾತಂತ್ರ್ಯ ಹತ್ತಿಕ್ಕುತ್ತ ಬಂದಿದೆ ಎಂದು ನ್ಯಾಯಾಧೀಶ ಅಮೋಲ್ ಹಿರಿಕುಡೆ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ‘ಮಹಿಳಾ ಸಬಲೀಕರಣ’ ಎಂಬ ಪದವು ಮಹಿಳೆ ಸಾಕಷ್ಟು ಶಕ್ತಿ ಶಾಲಿಯಲ್ಲ ಎಂಬುದನ್ನು ಸೂಚಿಸುತ್ತದೆ. ಇದೊಂದು ಸಂಚಿತ ಪ್ರಜ್ಞೆಯಾಗಿದ್ದು ಕುಟುಂಬ ನಿರ್ಮಿತ ಅಡೆತಡೆಗಳನ್ನು ಮುಂದೊಡ್ಡಿ ಮಹಿಳೆ ಅನುಭವಿಸುತ್ತಿರುವ ನೋವಿನ ಹಿಂದಿನ ಸತ್ಯವನ್ನು ಹೊರ ತೆಗೆಯಲು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡಲು ಕಾನೂನಿನ ರಕ್ಷಣೆ ಅವಶ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅಮೋಲ್ ಹಿರಿಕುಡೆ ಅಭಿಪ್ರಾಯ ವ್ಯಕ್ತಪಡಿಸಿದರು.

ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಕಂದಾಯ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಬ್ಯಾಡಗಿ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮದಡಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಪ್ರಚುರಪಡಿಸಿದ ವಿಧಾನ ಸೆ ಸಮಾಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪುರುಷ ಪ್ರಧಾನ ಸಮಾಜ ಮಹಿಳಾ ಸ್ವಾತಂತ್ರ್ಯ ಹತ್ತಿಕ್ಕುತ್ತ ಬಂದಿದೆ. ಮಹಿಳೆಗೆ ಶಿಕ್ಷಣ, ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ, ಜೀವನದ ಭದ್ರತೆ ಕೊಡಿಸಲು ಕಳೆದ ಸಾವಿರಾರು ವರ್ಷಗಳಿಂದ ಹೋರಾಟಗಳು ನಡೆಯುತ್ತ ಬಂದಿವೆ. ಅಸಮಾನತೆಯ ಪ್ರಪಾತದಲ್ಲಿ ಬಿದ್ದಿದ್ದ ಮಹಿಳೆಯರನ್ನು ಮೇಲೆತ್ತುವ ಗಮನಾರ್ಹ ಕೆಲಸ ಮಾಡಬೇಕಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗವು ಗುರುತಿಸುತ್ತ ಬಂದಿರುವ ಮಹಿಳೆಯರು ಇಂದಲ್ಲ ನಾಳೆ ಪ್ರಪಂಚದಲ್ಲಿಯೇ ಮಹಿಳಾ ಸಬಲತೆಗೆ ಸಾಕ್ಷಿಯಾದರೂ ಆಶ್ಚರ್ಯವಿಲ್ಲ ಎಂದರು.

ರಾಷ್ಟ್ರೀಯ ಮಹಿಳಾ ಆಯೋಗ ಕಾಯಿದೆ:

ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ಶ್ರೀ ಸುರೇಶ ವಗ್ಗನವರ ಮಾತನಾಡಿ, ರಾಷ್ಟ್ರೀಯ ಮಹಿಳಾ ಆಯೋಗ ಕಾಯಿದೆ (30 ಆಗಸ್ಟ್ 1990) ಶಿಫಾರಸಿನ ಮೇರೆಗೆ ಆಯೋಗ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಂಡಿತು, ಮಹಿಳೆಯರಿಗೆ ಸಂವಿಧಾನಾತ್ಮಕ ಮತ್ತು ಕಾನೂನು ರಕ್ಷಣೆಗಳನ್ನು ಶಾಸನ ಬದ್ಧಗೊಳಿಸಲಾಯಿತು. ವರದಿಯಡಿ ಮಹಿಳಾ ಸಬಲೀಕರಣಕ್ಕಾಗಿ ತೊಡಕಾಗಿದ್ದ ಬಾಲ್ಯವಿವಾಹ ಮತ್ತು ವರದಕ್ಷಿಣೆ ನಿಷೇಧ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಕಠಿಣ ಶಿಕ್ಷೆಗಳನ್ನು ಪ್ರಕಟಿಸಿ ಶಿಕ್ಷಾರ್ಹ ಅಪರಾಧವಾಗಿ ಪರಿವರ್ತಿಸಲಾಯಿತು. ಉದ್ಯೋಗಕ್ಕಾಗಿ ಕಡ್ಡಾಯ ಶಿಕ್ಷಣ ಸೇರಿದಂತೆ ಮಹಿಳಾ ಮೀಸಲಾತಿ ಅಳವಡಿಸಿದೆ ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎನ್. ಬಾರ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ತಹಸೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಶೇಖರ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಿ.ಜಿ. ಹಿರೇಮಠ ಕಾರ್ಯದರ್ಶಿ ಎಂ.ಪಿ. ಹಂಜಗಿ, ಸಹ ಕಾರ್ಯದರ್ಶಿ ಎನ್.ಬಿ. ಬಳಿಗಾರ, ಭಾರತಿ ಕುಲಕರ್ಣಿ, ಎಂ.ಎಸ್. ಕೊಪ್ಪದ, ಎಸ್.ಎಚ್. ಗುಂಡಪ್ಪನವರ, ಎಸ್.ಎಚ್. ಕಾಟೇನಹಳ್ಳಿ, ಎಸ್.ಎಸ್. ಮುಡೂರು, ಎಸ್,ಎಸ್. ಕೊಣ್ಣೂರು, ಯಶೋಧರಾ ಅರ್ಕಾಚಾರಿ, ಸಿ.ಸಿ. ದಾನಣ್ಣನವರ ಸೇರಿದಂತೆ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಮತ್ತು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.