ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಜಿಲ್ಲೆಯಲ್ಲಿ ಹಲವು ರೈತರ ಜಮೀನುಗಳು, ಕೆಐಎಡಿಬಿಗೆ ಸೇರಿದ ಜಮೀನು ಹಾಗೂ ತಾಲೂಕಿನಲ್ಲಿ ೨೪ ಕೆರೆಗಳು ಪರಿಭಾವಿತ ಅರಣ್ಯಕ್ಕೆ ಸೇರಿರುವುದರಿಂದ ಈ ವಿಚಾರವಾಗಿ ಸುಪ್ರೀಂ ಕೋರ್ಟಿಗೆ ಮೊರೆ ಹೋಗುವುದಾಗಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.ನಗರದ ತಾಪಂ ಕಚೇರಿಯಲ್ಲಿ ತಾಲೂಕಿನ ಮಸ್ತೇನಹಳ್ಳಿ ೨ನೇ ಹಂತದ ಕೈಗಾರಿಕಾ ಪ್ರದೇಶಾಭಿವೃದ್ದಿ ಯೋಜನೆ ಕುರಿತು ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ರೈತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಬದಲಿ ಜಮೀನು ನೀಡಲು ಆಗ್ರಹಮಾರಪ್ಪಲ್ಲಿ ಗ್ರಾಮಕ್ಕೆ ಸೇರಿದ ೧೫ ರೈತರ ಜಮೀನುಗಳು ಕೆಐಎಡಿಬಿಗೆ ಹೋಗಿದ್ದು, ಸದರಿ ರೈತರು ಜಮೀನಿಗೆ ಕೆಐಡಿಬಿಯಿಂದ ಹಣ ಪಡೆಯದ ಕಾರಣ ಕೆಐಎಡಿಬಿ ರೈತರು ಪ್ರತಿ ಎಕರೆಗೆ ೧೦ ಗುಂಟೆಯಂತೆ ಜಮೀನು ಬದಲಿ ಕೊಟ್ಟಿದ್ದು ಆ ಜಮೀನು ಸಹಾ ಡೀಮ್ಡ್ ಫಾರೆಸ್ಟಿಗೆ ಸೇರಿರುವುದರಿಂದ ನಮಗೆ ಬದಲಿ ಜಮೀನು ಕೊಡುವುವವರೆವಿಗೂ ನಮ್ಮ ಜಮೀನುಗಳನ್ನು ಬಿಡುವುದಿಲ್ಲವೆಂದು ಸಚಿವರಿಗೆ ಲಿಖಿತ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಕೆಐಎಡಿಬಿಗೆ ಸೇರಿರುವ ಜಮೀನುಗಳನ್ನು ಕಾರ್ಖಾನೆಗಳಿಗೆ ಬಿಟ್ಟುಕೊಟ್ಟು ಅವುಗಳು ಬೆಳೆಯಲು ಅವಕಾಶ ಮಾಡಿಕೊಡಿ. ಇದರಿಂದ ಈ ಭಾಗದಲ್ಲಿ ಕೈಗಾರಿಕಾಭಿವೃದ್ಧಿಯಾಗುವುದರಿಂದ ರೈತರ ಮಕ್ಕಳಿಗೆ ಉದ್ಯೋಗವಕಾಶಗಳು ದೊರೆಯುತ್ತವೆ. ಕಳೆದೊಂದು ವರ್ಷದಿಂದ ಎಲ್ಲಾ ರೀತಿಯ ಮಾಹಿತಿಯನ್ನು ಕಲೆಹಾಕಿದ್ದು ಇದರ ಬಗ್ಗೆ ಸುಪ್ರೀಂ ಕೋರ್ಟಿಗೆ ಹೋಗಲಾಗುವುದು. ನ್ಯಾಯಾಲಯದಲ್ಲಿ ವಿವಾದ ಬಗೆಹರಿದ ನಂತರ ನಿಮಗೆ ಬರಬೇಕಾದ ಜಮೀನುಗಳನ್ನು ಕೊಡಿಸಿಕೊಡುತ್ತೇವೆಂದು ರೈತರಿಗೆ ಭರವಸೆಯಿತ್ತರು.ಪರಿಹಾರ ಕೊಡಿಸುವ ಭರವಸೆ
ಕಾನೂನು ಬದ್ದವಾಗಿ ರೈತರು ಎಷ್ಟು ಜಮೀನಿನಲ್ಲಿ ಅನುಭವದಲ್ಲಿ ಇರುತ್ತಾರೋ ಅಷ್ಟು ಜಮೀನಿಗೆ ಪರಿಹಾರ ಹಣ ಕೊಡಿಸುವ ಜವಾಬ್ದಾರಿ ನನ್ನದಾಗಿದ್ದು ಮಾರಪ್ಪಲ್ಲಿ, ಮಲ್ಕಾಪುರ ರೈತರ ಜಮೀನುಗಳ ವಿಸ್ತೀರ್ಣ ವ್ಯತ್ಯಾಸ ಇದ್ದಲ್ಲಿ ರೈತರ ಒಪ್ಪಿಗೆ ಪಡೆದು ಅವುಗಳನ್ನು ಕೂಡಲೇ ಸರಿಪಡಿಸಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಿಕೊಡಲಾಗುವುದೆಂದರು.೧ನೇ ಹಂತ ಮತ್ತು ೨ನೇ ಹಂತದ ಭೂ ಸ್ವಾಧೀನದ ಹಂತದಲ್ಲಿ ಕೆಲವೊಂದು ಲೋಪದೋಷಗಳಾಗಿದ್ದು ೨೦೦೮ರಲ್ಲೇ ನಾನು ಶಾಸಕನಾಗಿದ್ದಾಗ ಮಸ್ತೇನಹಳ್ಳಿ ಪ್ರದೇಶದಲ್ಲಿ ಕೈಗಾರಿಕಾಭಿವೃದ್ಧಿಗೆ ಒತ್ತು ನೀಡಿ ಪ್ರದೇಶವನ್ನು ಗುರುತಿಸಿದ್ದೆ. ಆದರೆ ನಂತರದ ವಿದ್ಯಮಾನಗಳಿಂದ ೨೦೧೩ರಲ್ಲಿ ಶಾಸಕರಾದವರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡದ ಪರಿಣಾಮ ಇಂದಿಗೂ ಅದು ಕುಂಟುತ್ತಾ ಸಾಗಿದೆಯೆಂದರು.
ಪರಿಹಾರ ಮೊತ್ತ ಹೆಚ್ಚಿಸಲು ಕ್ರಮರೈತರಿಗೆ ನೀಡಲಾಗಿರುವ ಪರಿಹಾರದ ಹಣವು ಕಡಿಮೆಯಿರುವುದಾಗಿ ಹೇಳಿದ್ದು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಅದನ್ನು ಪರಿಶೀಲನೆ ನಡೆಸಿ ಪರಿಹಾರದ ಮೊತ್ತವನ್ನು ಹೆಚ್ಚಿಸುವಂತಹ ಕೆಲಸ ಮಾಡಹುದಾಗಿದ್ದು ಪ್ರಥಮ ಹಂತದಲ್ಲಿ ೧ ಎಕರೆಗೆ ೨೫ ಲಕ್ಷ ರೂಗಳಿಗೆ ಸೀಮಿತವಾಗಿತ್ತು ನಂತರ ರೈತರು ತಮ್ಮ ಜಮೀನು ಫಲವತ್ತತೆಯಿದ್ದ ಕೂಡಿದ್ದು ನೀಡಲಾಗುವ ಪರಿಹಾರ ಏನೇನೂ ಸಾಲದಾಗಿದೆಯೆಂದಾಗ ದ್ವಿತೀಯ ಹಂತದಲ್ಲಿ ೩೫ ಲಕ್ಷಗಳಿಗೆ ಏರಿಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಪಿ.ರವೀಂದ್ರ, ಸಿಇಒ ಪ್ರಕಾಶ್ ನಿಟ್ಟಾಲಿ, ಉಪವಿಭಾಗಾಧಿಕಾರಿ ಅಶ್ವಿನ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಎನ್.ಎಂ.ಜಗದೀಶ್ ಜಿಲ್ಲಾ ಕಚೇರಿಯ ಲತಾ, ಜಿಲ್ಲಾ ವಿಕಲಚೇತನರ ಪುನಸರ್ವಸತಿ ಕೇಂದ್ರ ಮನೋತಜ್ಞ ಮೋಹನ್, ತಹಸೀಲ್ದಾರ್ ಸುದರ್ಶನ್ ಯಾದವ್, ತಾ.ಪಂ. ಇಒ ಎಸ್.ಆನಂದ್, ಸಿಡಿಪಿಒ ಮಹೇಶ್‌ಬಾಬು, ಪೌರಾಯುಕ್ತ ಜಿ.ಎನ್.ಚಲಪತಿ, ಎಂಆರ್‌ಡಬ್ಲ್ಯೂ ಮಂಜುನಾಥ್, ಪಂಚಾಯತಿಯ ವಿಆರ್‌ಡಬ್ಲ್ಯೂ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.