ಸಾರಾಂಶ
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆಯಲ್ಲಿ ಮಿತಿಮೀರಿರುವ ಬೀದಿ ನಾಯಿ ಹಾಗೂ ದನಗಳ ಹಾವಳಿ ನಿಯಂತ್ರಿಸುವಲ್ಲಿ ಸಂಪೂರ್ಣ ವೈಫಲ್ಯ ಕಾಣುತ್ತಿರುವ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ವಿವಿಧ ತಾಲೂಕಾಡಳಿತಗಳು ಮತ್ತು ಗ್ರಾಪಂಗಳಿಗೆ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನವನ್ನು ಪಾಲಿಸುವ ಹೊಸ ಸವಾಲು ಎದುರಾಗಿದೆ.
ಶಾಲೆ-ಕಾಲೇಜು,ಆಸ್ಪತ್ರೆಗಳು, ಬಸ್ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಂತಹ ಸರ್ಕಾರಿ ಸಾಂಸ್ಥಿಕ ಪ್ರದೇಶಗಳಲ್ಲಿ ಬೀದಿ ನಾಯಿ, ದನಗಳನ್ನು ತೆರವುಗೊಳಿಸಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಇಷ್ಟೇ ಅಲ್ಲದೇ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ ವೇಗಗಳಿಂದ ಬೀದಿ ಪ್ರಾಣಿಗಳು ಸಂರಕ್ಷಿಸಲು ಸಹ ಕ್ರಮ ವಹಿಸಲು ತಿಳಿಸಿರುವುದು, ಯಾವ ರೀತಿ ನಿಭಾಯಿಸಬೇಕು ಎನ್ನುವ ಗೊಂದಲವನ್ನು ಅಧಿಕಾರಿಗಳಲ್ಲಿ ಸೃಷ್ಠಿಸುವಂತೆ ಮಾಡಿದೆ.ಸಮಸ್ಯೆ ದೊಡ್ಡದು: ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕುಗಳ ನಗರ, ಪಟ್ಟಣ, ಗ್ರಾಮೀಣ ಭಾಗದಲ್ಲಿ ಬೀದಿ ನಾಯಿಗಳ ಹಾಗೂ ಬೀದಿ ದನಗಳ ಹಾವಳಿ ಹೆಚ್ಚಾಗಿದೆ. ರಾಯಚೂರಿನಲ್ಲಂತೂ ಸಮಸ್ಯೆ ಅತ್ಯಂತ ದೊಡ್ಡದಾಗಿಯೇ ಇದೆ. ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ 35 ವಾರ್ಡ್ ಗಳ ಜನವಸತಿ ಪ್ರದೇಶಗಳ ಜೊತೆಗೆ ಬಹುತೇಕ ಎಲ್ಲ ಮುಖ್ಯರಸ್ತೆ, ವೃತ್ತ, ಬಡಾವಣೆಗಳು, ಗಲ್ಲಿ ಹಾಗೂ ಇತರೆ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಜನಸಂಖ್ಯೆಯಷ್ಟೇ ಹೆಚ್ಚಿದೆ. ಹಗಲು-ರಾತ್ರಿ ಎನ್ನದೇ ಕಣ್ಣಾಡಿಸಿದರೆ ಬೀದಿ ನಾಯಿಗಳು ಅಸಂಖ್ಯೆಯಲ್ಲಿ ಕಾಣುತ್ತವೆ, ರಾತ್ರಿಯಾದರೆ ಸಾಕು ಬಡಾವಣೆ, ರಸ್ತೆಗಳ ಮೇಲೆ ಬೀದಿನಾಯಿಗಳೇ ತಮ್ಮ ಆಡಳಿತವನ್ನು ನಡೆಸುತ್ತಿರುತ್ತವೆ. ಅದೇ ರೀತಿ ರಾತ್ರಿ ವೇಳೆ ಬಿಡಾಡಿದನಗಳು ನಗರದ ರಸ್ತೆಗಳಲ್ಲಿ ತಮ್ಮ ಆಶ್ರಯದ ತಾಣಗಳನ್ನಾಗಿಸಿಕೊಂಡಿರುತ್ತವೆ. ಇದರಿಂದಾಗಿ ವಾಹನ ಸವಾರರು, ಪಾದಾಚಾರಿಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಲೇ ಇರುತ್ತದೆ.
ಅನಾಹುತಗಳು ಅಷ್ಟಿಷ್ಟಲ್ಲ: ಬೀದನಾಯಿ ಹಾಗೂ ದನಗಳಿಂದಾಗಿ ಜನರು ತಮ್ಮ ನಿದ್ದೆಯನ್ನು ಕಳೆದುಕೊಂಡಿದ್ದಾರೆ. ಅವುಗಳು ಮಾಡಿರುವ ಅನಾಹುತಗಳು ಅಷ್ಟಿಷ್ಟಲ್ಲವೆಂದೇ ಹೇಳಬಹುದು. ಬೀದಿನಾಯಿ ದಾಳಿಗೆ ರಾಯಚೂರಿನಲ್ಲಿ ಒಬ್ಬ ಯುವತಿ ಮೃತಪಟ್ಟಿದ್ದಾಳೆ. ಚಿಕ್ಕ ಮಕ್ಕಳು ಸೇರಿದಂತೆ 20ರಿಂದ 30ಮಂದಿಗೆ ಗಾಯಗಳಾಗಿರುವ ಘಟನೆಗಳು ಇತ್ತೀಚೆಗೆ ನಡೆದಿವೆ. ಗುಂಪಾಗಿ ಕಾಣಿಸಿಕೊಳ್ಳುವ ನಾಯಿಗಳು ಜನರ ಮೇಲೆ ಎರಗುವ ದೃಶ್ಯಗಳಂತು ನಿತ್ಯ ಸಾಮಾನ್ಯವಾಗಿಬಿಟ್ಟಿದೆ. ರಸ್ತೆ ಮೇಲೆ ಮಲಗುವ ಬಿಡಾಡಿ ದನಗಳಿಂದಾಗಿ ಹಲವಾರು ಅಪಘಾತಗಳಾಗಿ ಅನೇಕರು ಗಾಯಗೊಂಡಿರುವ ಪ್ರಕರಣಗಳು ಸಹ ಘಟಿಸಿವೆ.ಪರಿಣಾಮಕಾರಿ ಕ್ರಮವಿಲ್ಲ: ಬೀದಿನಾಯಿ ಹಾಗೂ ದನಗಳ ಹಾವಳಿಯಿಂದಾಗಿ ಜನರು ರೋಸಿ ಹೋಗಿದ್ದಾರೆ. ಅವುಗಳ ದಾಳಿಯಾದ ಸಮಯದಲ್ಲಿ ತಾತ್ಕಾಲಿಕವಾಗಿ ಎಚ್ಚೆತ್ತುಕೊಳ್ಳುವ ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆಯನ್ನು ಮಾಡಿ ಕೈ ಬಿಡುತ್ತಿದ್ದಾರೆಯೇ ಹೊರತು ಅವುಗಳ ಸಂಪೂರ್ಣ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಕ್ರಮವನ್ನು ವಹಿಸಿಲ್ಲ. ಜನಪ್ರತಿನಿಧಿಗಳ, ಜನರ ಒತ್ತಡಕ್ಕೆ ಮಣಿದು ಕ್ರಮ ಕೈಗೊಂಂಡರೂ ಸಹ ಪ್ರಾಣಿದಯಾ ಸಂಘವು ಮಧ್ಯಪ್ರವೇಶಿಸುತ್ತಿರುವುದರಿಂದ ಏನು ಮಾಡಬೇಕು ಎಂದು ತೋಚದ ಸ್ಥಿತಿಯಲ್ಲಿ ಆಡಳಿತ ವರ್ಗ ಮುಳುಗಿದೆ.
ಇದೀಗ 8 ವಾರದಲ್ಲಿ ಆಶ್ರಯ ತಾಣಗಳಿಗೆ ಬೀದಿ ನಾಯಿ, ದನ, ಪ್ರಾಣಿಗಳ ಸ್ಥಳಾಂತರಕ್ಕೆ ದೇಶದ ಎಲ್ಲ ರಾಜ್ಯಗಳ ಸರ್ಕಾರಗಳಿಗೆ ಹಾಗೂ ಸ್ಥಳೀಯ ಆಡಳಿತ, ಹೆದ್ದಾರಿ ಅಧಿಕಾರಿಗಳಿಗೆ ಸುಪ್ರೀಂ ಖಡಕ್ ಆದೇಶ ಹೊರಡಿಸಿರುವುದನ್ನು ಜನಸಾಮಾನ್ಯರು ಸಂಪೂರ್ಣವಾಗಿ ಸ್ವಾಗತಿಸಿದ್ದು, ತಕ್ಷಣ ಕ್ರಮ ವಹಿಸಬೇಕು ಎಂದು ಜಿಲ್ಲಾಡಳಿತ, ಪಾಲಿಕೆ ಹಾಗೂ ಆಯಾ ಆಡಳಿತ ವರ್ಗಗಳಿಗೆ ಒತ್ತಾಯಿಸುತ್ತಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))