ಗ್ರೇಟರ್​ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಯನ್ನು ಜೂನ್​ ಅಂತ್ಯದೊಳಗೆ ಮುಗಿಸುವಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್​ ನಿರ್ದೇಶನ ನೀಡಿದೆ.

ಕನ್ನಡಪ್ರಭ ವಾರ್ತೆ ನವದೆಹಲಿ

ಗ್ರೇಟರ್​ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಯನ್ನು ಜೂನ್​ ಅಂತ್ಯದೊಳಗೆ ಮುಗಿಸುವಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್​ ನಿರ್ದೇಶನ ನೀಡಿದೆ.

ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆಯನ್ನು ಜೂನ್​ 30 ರೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿತು.

ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಮನಸಿಂಘ್ವಿ, ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ವಾರ್ಡ್‌ ವಿಂಗಡಣೆ ಮುಗಿದಿದ್ದು, ಮೀಸಲಾತಿ ಪ್ರಕ್ರಿಯೆ ಫೆಬ್ರವರಿ 28ರವರೆಗೂ ನಡೆಯಲಿದೆ. ಮೀಸಲಾತಿ ಪ್ರಕ್ರಿಯೆ ಬಳಿಕ ಚುನಾವಣೆ ನಡೆಸುವುದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ ಎಂದು ತಿಳಿಸಿದರು.

ಚುನಾವಣಾ ಆಯೋಗದ ಪರ ವಾದ ಮಂಡಿಸಿದ ವಕೀಲ ಕೆ.ಎನ್. ಫಣೀಂದ್ರ, ಫೆಬ್ರವರಿ 20ರೊಳಗೆ ಅಂತಿಮ ಮೀಸಲಾತಿ ಪಟ್ಟಿ ಹೊರ ಬರಲಿದೆ. ಮಾರ್ಚ್ 16ರೊಳಗೆ ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಬಳಿಕ, ಎಸ್‌ಎಸ್ ಎಲ್‌ಸಿ ಪರೀಕ್ಷೆಗಳಿವೆ. ಚುನಾವಣೆ ನಡೆಸಲು ಶಾಲಾ ಕೊಠಡಿಗಳು, ಶಿಕ್ಷಕರು ಅಗತ್ಯವಾಗಿ ಬೇಕಿದೆ. ಹೀಗಾಗಿ, ಮೇ ಕೊನೆಯ ವಾರದವರೆಗೂ ಅವಕಾಶ ನೀಡಬೇಕು. ಮೇ 26ರೊಳಗೆ ಜಿಬಿಎ ಚುನಾವಣೆಗೆ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅಂತಿಮವಾಗಿ ಚುನಾವಣಾ ಪ್ರಕ್ರಿಯೆ ಮುಗಿಸಲು ಎಷ್ಟು ಸಮಯ ಬೇಕು ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಪರ ವಕೀಲರು, ಜೂನ್ ವರೆಗೂ ಸಮಯ ಬೇಕಾಗಬಹುದು ಎಂದು ತಿಳಿಸಿದರು. ಇದಕ್ಕೆ ಒಪ್ಪಿದ ಸುಪ್ರೀಂಕೋರ್ಟ್, ಜೂನ್ 30ರೊಳಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಲ್ಲದೆ, ಮತ್ತೆ ಸಮಯ ಕೇಳದಂತೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತು.

ಸತತ 21 ಬಾರಿ ಅರ್ಜಿ ವಿಚಾರಣೆ

ಬಿಬಿಎಂಪಿ, ಈಗ ಜಿಬಿಎ ಸ್ವರೂಪ ಪಡೆದಿದ್ದು, ಕಳೆದ ಆರು ವರ್ಷಗಳಿಂದ ಪಾಲಿಕೆ ಜನಪ್ರತಿನಿಧಿಗಳಿಲ್ಲದೆ ಸೊರಗುತ್ತಿದೆ. ಪಾಲಿಕೆಗೆ ಚುನಾವಣೆ ನಡೆಯಬೇಕು ಎಂದು ಆಗ್ರಹಿಸಿ ಮಾಜಿ ಕಾರ್ಪೋರೇಟರ್ ಎಂ. ಶಿವರಾಜ್, ಭಾಸ್ಕರ್ ಹಾಗೂ ಅಂಬೇಡ್ಕರ್ ಸಮಿತಿಗಳು ಕಾನೂನು ಹೋರಾಟ ನಡೆಸುತ್ತಲೇ ಇವೆ. ಸುಪ್ರೀಂಕೋರ್ಟ್‌ವೊಂದರಲ್ಲೇ ಈ ಸಂಬಂಧ ಅರ್ಜಿ 21 ಬಾರಿ ವಿಚಾರಣೆಗೆ ಬಂದಿದೆ. ಅಂತಿಮವಾಗಿ 22ನೇ ಬಾರಿಗೆ, ಚುನಾವಣೆಗೆ ಮುಹೂರ್ತ ಕೂಡಿ ಬರುತ್ತಿದೆ.