ಸಾರಾಂಶ
ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಸೈಟು ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿಗೆ ಬಿಗ್ ರಿಲೀಫ್ ಸಿಕ್ಕಿದೆ.
ನವದೆಹಲಿ : ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಸೈಟು ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿಗೆ ಬಿಗ್ ರಿಲೀಫ್ ಸಿಕ್ಕಿದೆ. ಮುಡಾ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಇ.ಡಿ, (ಜಾರಿ ನಿರ್ದೇಶನಾಲಯ) ನೀಡಿದ್ದ ಸಮನ್ಸ್ ಅನ್ನು ವಜಾಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಅಲ್ಲದೆ, ಇ.ಡಿ,ಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ನ್ಯಾಯಪೀಠದಲ್ಲಿ ಸೋಮವಾರ ಪ್ರಕರಣದ ವಿಚಾರಣೆ ನಡೆಯಿತು. ಮುಡಾ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ನೀಡಿದ್ದ ಸಮನ್ಸ್ ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ, ಇ.ಡಿ. ಸಲ್ಲಿಸಿದ್ದ ಮೇಲ್ಮನವಿಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯಿತು. ಇ.ಡಿ.ಯ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿತು.
ಇದರೊಂದಿಗೆ ಪ್ರಕರಣದಲ್ಲಿ ಸಿಎಂ ಪತ್ನಿ ತನಿಖೆ ಕುಣಿಕೆಯಿಂದ ಸಂಪೂರ್ಣ ಪಾರಾದಂತಾಗಿದೆ.
ಇ.ಡಿ.ಗೆ ಕೋರ್ಟ್ ತರಾಟೆ:
ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್, ಇ.ಡಿ.ಯನ್ನು ತರಾಟೆಗೆ ತೆಗೆದುಕೊಂಡಿದ್ದು, ಇ.ಡಿ.ಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.
ಜಾರಿ ನಿರ್ದೇಶನಾಲಯದ ಮೇಲ್ಮನವಿಯನ್ನು ಪರಿಗಣಿಸಲು ನಿರಾಕರಿಸಿದ ನ್ಯಾ.ಗವಾಯಿ, ‘ರಾಜಕೀಯವಾದ ಹೋರಾಟಗಳು ಚುನಾವಣೆಯಲ್ಲಿ ನಡೆಯಲಿ. ನಿಮ್ಮನ್ನು ಯಾಕೆ ರಾಜಕೀಯವಾಗಿ ಬಳಸಿಕೊಳ್ಳಬೇಕು. ದುರಾದೃಷ್ಟವಶಾತ್ ಮಹಾರಾಷ್ಟ್ರದಲ್ಲಿ ನನಗೆ ಕೆಲವು ಅನುಭವಗಳಾಗಿವೆ. ನಾನು ಬಾಯಿ ತೆರೆಯವಂತೆ ಮಾಡಬೇಡಿ. ಇ.ಡಿ ವಿರುದ್ಧ ಕಟುವಾಗಿ ಮಾತನಾಡಬೇಕಾಗುತ್ತದೆ. ದೇಶಾದ್ಯಂತ ಇ.ಡಿಯ ಈ ರೀತಿಯ ಕಾರ್ಯವೈಖರಿ ಮುಂದುವರಿಯಬಾರದು’ ಎಂದು ಕಟು ನುಡಿಗಳಿಂದ ನುಡಿದರು.ಹೈಕೋರ್ಟ್‌ನ ಏಕಸದಸ್ಯ ಪೀಠದ ತೀರ್ಪಿನಲ್ಲಿ ನಮಗೆ ಯಾವುದೇ ಲೋಪ ಕಾಣುತ್ತಿಲ್ಲ. ಹೀಗಾಗಿ, ಇ.ಡಿ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ ಎಂದು ತಿಳಿಸಿದರು. ಇದರಿಂದಾಗಿ ಮುಡಾ ಕೇಸ್ಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಇ.ಡಿಗೆ ಭಾರೀ ಹಿನ್ನಡೆ ಆಗಿದೆ. ಇ.ಡಿ ಪರವಾಗಿ ಅಡಿಷನಲ್ ಸಾಲಿಸೆಟರ್ ಜನರಲ್ ಎಸ್.ವಿ.ರಾಜೇ ಹಾಜರಿದ್ದರು.
ಪ್ರಕರಣವೇನು?:
ಮುಡಾದಿಂದ ಸಿದ್ದರಾಮಯ್ಯನವರ ಪತ್ನಿಗೆ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿತ್ತು. ಸಿಎಂ ಪತ್ನಿಗೆ 50-50 ಅನುಪಾತದಡಿ ನಿವೇಶನ ಹಂಚಿಕೆ ಮಾಡುವಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ಅಂದಾಜು 5 ಸಾವಿರ ಕೋಟಿಯಷ್ಟು ಭಾರೀ ಅಕ್ರಮ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು.
ಮೂಲ ನಿವೇಶನ (ಮೈಸೂರು ತಾಲೂಕಿನ ಕೆಸರೆ ಗ್ರಾಮದಲ್ಲಿ 3.16 ಎಕರೆ ಭೂಮಿ)ಕ್ಕೆ ಪರಿಹಾರವಾಗಿ, ಪ್ರತಿಷ್ಠಿತ ಬಡಾವಣೆಯಲ್ಲಿ (ಮೈಸೂರಿನ ವಿಜಯನಗರ ಬಡಾವಣೆಯ 3 ಮತ್ತು 4ನೇ ಹಂತಗಳಲ್ಲಿ) 14 ನಿವೇಶನಗಳನ್ನು ಪಡೆಯಲಾಗಿದೆ. ಇದಕ್ಕಾಗಿ ಸಿದ್ದರಾಮಯ್ಯನವರು ತಮ್ಮ ಪ್ರಭಾವ ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ 2025ರ ಫೆಬ್ರವರಿಯಲ್ಲಿ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಸಿದ್ದರಾಮಯ್ಯ, ಪಾರ್ವತಿ, ಸಿದ್ದರಾಮಯ್ಯನವರ ಬಾವ ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರಿಗೆ ಕ್ಲೀನ್ ಚೀಟ್ ನೀಡಿದ್ದರು. ಇವರ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ತಿಳಿಸಿದ್ದರು.
ಈ ಮಧ್ಯೆ, 2024ರ ಸೆಪ್ಟೆಂಬರ್ 30ರಂದು ಸಿಎಂ ಮತ್ತು ಇತರರ ವಿರುದ್ಧ ಇ.ಡಿ. (ಮನಿ ಲಾಂಡರಿಂಗ್ ಆ್ಯಕ್ಟ್, 2002ರನ್ವಯ) ದೂರು ದಾಖಲಿಸಿಕೊಂಡಿತ್ತು. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಪಾರ್ವತಿ ಹಾಗೂ ಬೈರತಿ ಸುರೇಶ್ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಆರೋಪಪಟ್ಟಿಯಲ್ಲಿ ಬೈರತಿ ಸುರೇಶ್ ಅವರ ಹೆಸರು ಇಲ್ಲದಿದ್ದರೂ, ಅವರಿಗೆ ಸಮನ್ಸ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದರು. ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ನ್ಯಾ.ಎಂ.ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆಗೆ ಬಂದಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಆರಂಭದಲ್ಲಿ ಇ.ಡಿ ಸಮನ್ಸ್‌ಗೆ ತಡೆಯಾಜ್ಞೆ ನೀಡಿ, ನಂತರ ಅಂತಿಮವಾಗಿ 2025ರ ಮಾರ್ಚ್‌ನಲ್ಲಿ (ಮಾರ್ಚ್ 7) ಇ.ಡಿ ನೀಡಿದ್ದ ಸಮನ್ಸ್‌ನ್ನು ರದ್ದುಗೊಳಿಸಿತ್ತು. ಈ ತೀರ್ಪು ಪ್ರಶ್ನಿಸಿ, ಇ.ಡಿ, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಮುಡಾ ಕೇಸಲ್ಲಿ ಸಿಎಂ ಸಿದ್ದು ಪತ್ನಿಗೆ ಸುಪ್ರೀಂ ಬಿಗ್ ರಿಲೀಫ್
- ಇ.ಡಿ. ತನಿಖೆ ಕುಣಿಕೆಯಿಂದ ಪಾರ್ವತಿ ಸಿದ್ದರಾಮಯ್ಯ, ಸಚಿವ ಬೈರತಿ ಪಾರು
- 14 ಮುಡಾ ನಿವೇಶನ ಹಂಚಿಕೆ ಕೇಸಲ್ಲಿ ಇ.ಡಿ. ಸಮನ್ಸ್ ರಾಜಕೀಯ ಪ್ರೇರಿತ
- ಹೈಕೋರ್ಟ್ ಆದೇಶ ಅನುಮೋದಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಇ.ಡಿ.ಗೆ ಸುಪ್ರೀಂ ಚಾಟಿ
- ರಾಜಕೀಯವಾಗಿ ಹೋರಾಟಗಳು ಚುನಾವಣೆಯಲ್ಲಿ ನಡೆಯಲಿ. ಇಲ್ಲಿ ಬೇಡ
- ಜಾರಿ ನಿರ್ದೇಶನಾಲಯವನ್ನು ಏಕೆ ರಾಜಕೀಯವಾಗಿ ಬಳಸಿಕೊಳ್ಳಬೇಕು?
- ದುರಾದೃಷ್ಟವಶಾತ್ ಮಹಾರಾಷ್ಟ್ರದಲ್ಲಿ ನನಗೆ ಕೆಲವು ಅನುಭವಗಳಾಗಿವೆ.
- ನಾನು ಬಾಯಿ ತೆರೆಯವಂತೆ ಮಾಡಬೇಡಿ. ಕಟುವಾಗಿ ಮಾತಾಡಬೇಕಾಗುತ್ತೆ
- ದೇಶಾದ್ಯಂತ ಇ.ಡಿ. ಈ ರೀತಿಯ ಕಾರ್ಯವೈಖರಿ ಮುಂದುವರಿಸಬಾರದು
- ಹೈಕೋರ್ಟ್‌ನ ಏಕಸದಸ್ಯ ಪೀಠದ ತೀರ್ಪಿನಲ್ಲ ಯಾವುದೇ ಲೋಪ ಕಾಣುತ್ತಿಲ್ಲ
- ಹೀಗಾಗಿ ಪಾರ್ವತಿ ಅವರ ವಿರುದ್ಧದ ಇ.ಡಿ. ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ