ಒಳ ಮೀಸಲಾತಿ ಪರ ಸುಪ್ರೀಂ ತೀರ್ಪು: ಡಿಎಸ್ಸೆಸ್ ಸಂಭ್ರಮ

| Published : Aug 02 2024, 12:47 AM IST

ಸಾರಾಂಶ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡಬೇಕೆಂಬ ಬೇಡಿಕೆ ಪರ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿ, ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದೆಯೆಂದು ದಲಿತ ಸಂಘರ್ಷ ಸಮಿತಿಯಿಂದ ದಾವಣಗೆರೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪರಸ್ಪರರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡಬೇಕೆಂಬ ಬೇಡಿಕೆ ಪರವಾಗಿ ಸರ್ವೋಚ್ಛ ನ್ಯಾಯಾಲಯ ಗುರುವಾರ ತೀರ್ಪು ನೀಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ತೀರ್ಪು ನೀಡಿದೆ ಎಂದು ದಲಿತ ಸಂಘರ್ಷ ಸಮಿತಿಯಿಂದ ನಗರದಲ್ಲಿ ಗುರುವಾರ ಸಂಭ್ರಮಾಚರಿಸಲಾಯಿತು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಸಮಿತಿ ರಾಜ್ಯ ಸಂಚಾಲಕ ಹೆಗ್ಗೆರೆ ರಂಗಪ್ಪ ಇತರರ ನೇತೃತ್ವದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪರಸ್ಪರ ಸಿಹಿ ತಿನ್ನಿಸುವ ಮೂಲಕ ಸುಪ್ರೀಂ ಕೋರ್ಟ್‌ನ 7 ಜನ ನ್ಯಾಯಾಧೀಶರ ಪೀಠದ ತೀರ್ಪು ಸ್ವಾಗತಿಸಲಾಯಿತು.

ಇದೇ ವೇಳೆ ಮಾತನಾಡಿದ ಹೆಗ್ಗೆರೆ ರಂಗಪ್ಪ, ಒಳ ಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್ ಇಂದು ನೀಡಿದ ತೀರ್ಪು ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ತೀರ್ಪು ಆಗಿದೆ. ಈ ತೀರ್ಪು ಸ್ವಾಗತಿಸುತ್ತೆವೆ. ಪರಿಶಿಷ್ಟ ಜಾತಿಗಳೊಳಗೆ ಒಳ ಮೀಸಲಾತಿ ವರ್ಗೀಕರಣವು ಆಯಾ ರಾಜ್ಯಗಳ ಸಾಂವಿಧಾನಿಕ ಹಕ್ಕು, ಜವಾಬ್ದಾರಿಯಾಗಿದೆ. ಆರ್ಟಿಕಲ್ 341 ಅಮೆಂಡ್ಮೆಂಟ್‌ನ ಅವಶ್ಯಕತೆಯೇ ಬೀಳುವುದಿಲ್ಲವೆಂಬ ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಚಂದ್ರಚೂಡರನ್ನು ಒಳಗೊಂಡ ಏಳು ಸದಸ್ಯ ನ್ಯಾಯಾಧೀಶರ ಸಾಂವಿಧಾನಿಕ ಪೀಠವು 6ಃ1 ಬಹುಮತದ ತೀರ್ಪಿತ್ತಿದೆ ಎಂದರು.

ತೀರ್ಪಿನ ಮೂಲಕ 2004ರಲ್ಲಿ ಇ.ವಿ.ಚಿನ್ನಯ್ಯ v/s ಆಂಧ್ರ ಪ್ರದೇಶ ಪ್ರಕರಣದಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೇತೃತ್ವದ ಐದು ಜನ ಸದಸ್ಯರ ಸಾಂವಿಧಾನಿಕ ನ್ಯಾಯಪೀಠ ನೀಡಿದ್ದ ತೀರ್ಪನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಡಿಎಸ್ಸೆಸ್‌ನಿಂದ ನಾವು ಸುಮಾರು 2 ದಶಕಗಳ ಕಾಲ ಸತತ ಹೋರಾಟ ಮಾಡಿದ್ದೀವಿ. ರಾಜ್ಯ ಸಮಿತಿ ನಿರ್ಣಯದಂತೆ ಜಿಲ್ಲಾ ಕಾರ್ಯಕ್ರಮಗಳು, ತಾಲೂಕು ಕಾರ್ಯಕ್ರಮಗಳು, ರಾಜ್ಯಮಟ್ಟದ ರ್‍ಯಾಲಿಗಳು, ಪಾದಯಾತ್ರೆಗಳು ಹೀಗೆ ಹಲವಾರು ಒಳ ಮೀಸಲಾತಿ ಪರವಾಗಿ ಮಾಡಿದ ಹೋರಾಟ ಇವತ್ತಿಗೆ ಸಾರ್ಥಕ ಎಂಬಂತೆ ಕಂಡು ಬರುತ್ತಿದೆ ಎಂದು ತಿಳಿಸಿದರು.

ದಶಕಗಳ ಕಾಲ ತಮ್ಮ ಜೀವ-ಜೀವನ ಪಣಕ್ಕಿಟ್ಟು, ಹೋರಾಟ ನಡೆಸಿದ್ದ ಒಂದೆರೆಡು ತಲೆಮಾರಿನ ಒಳ ಮೀಸಲಾತಿ ಹೋರಾಟದ ಅಭಿಯಾನಕ್ಕೆ ಬಹುದೊಡ್ಡ ನ್ಯಾಯಿಕ ವಿಜಯ ಪ್ರಾಪ್ತಿಯಾದಂತಾಗಿದೆ. ಇದೇ ಸಂದರ್ಭದಲ್ಲಿ ಒಳ ಮೀಸಲಾತಿ ವಿರೋಧಿಗಳ ಆಟಕ್ಕೆ ಪೂರ್ಣ ವಿರಾಮ ಇಟ್ಟಿದೆ. ಈಗ ರಾಜ್ಯ ಸರ್ಕಾರಗಳು ಒಳ ಮೀಸಲಾತಿ ಕಲ್ಪಿಸಲು ಮರು ಮಾತಿಲ್ಲದೇ ಮುಂದಾಗಬೇಕಿದೆ. ಏಳು ಸದಸ್ಯ ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ಕೃತಜ್ಞತೆ ಅರ್ಪಿಸುತ್ತೇವೆ ಎಂದು ಹೇಳಿದರು.

ಡಿಎಸ್ಸೆಸ್‌ನ ಉಚ್ಚಂಗಿ ಪ್ರಸಾದ, ಹೂವಿನಮಡು ಅಂಜಿನಪ್ಪ, ಗುಮ್ಮನೂರು ರಾಮಚಂದ್ರಪ್ಪ, ಅಳಗವಾಡು ಬಾಬು, ಹಳಗವಾಡಿ ನಿಂಗರಾಜ, ಅಳಗವಾಡಿ ನಿಂಗರಾಜ, ಅಳಗವಾಡಿ ರವಿ ಬಾಬು, ಗುಮ್ಮನೂರು ಬಸವರಾಜ, ನಾಗನೂರು ರಾಜು, ಮುದಹದಡಿ ಮೈಲಪ್ಪ, ಚಿಕ್ಕನಹಳ್ಳಿ ಹನುಮಂತಪ್ಪ, ಬೀರೂರು ಹನುಮಂತಪ್ಪ ಇತರರು ಇದ್ದರು.