ಸುಪ್ರಿಂ ಮೆಟ್ಟಿಲು ಏರಿದ್ದ ಪ್ರಕರಣ ಚಿತ್ರದುರ್ಗದಲ್ಲಿ ಇತ್ಯರ್ಥ

| Published : Jul 13 2024, 01:39 AM IST / Updated: Jul 13 2024, 01:52 PM IST

ಸುಪ್ರಿಂ ಮೆಟ್ಟಿಲು ಏರಿದ್ದ ಪ್ರಕರಣ ಚಿತ್ರದುರ್ಗದಲ್ಲಿ ಇತ್ಯರ್ಥ
Share this Article
  • FB
  • TW
  • Linkdin
  • Email

ಸಾರಾಂಶ

suprime court case solve in chitradurga

 ಚಿತ್ರದುರ್ಗ :  ಅಪಘಾತ ಪ್ರಕರಣವೊಂದರಲ್ಲಿ ಹೆಚ್ಚಿನ ಪರಿಹಾರಕ್ಕೆ ಸುಪ್ರಿಂ ಕೋರ್ಟ್ ಮೆಟ್ಟಿಲು ಏರಿದ್ದ ಮಹಿಳೆಗೆ ವಿಶೇಷ ಲೋಕ ಅದಾಲತ್ ನಲ್ಲಿ ವ್ಯಾಜ್ಯ ಇತ್ಯರ್ಥ ಪಡಿಸಿಕೊಳ್ಳುವ ಭರವಸೆ ನೀಡಿದ್ದು, ಈ ಸಂಬಂಧ ಉಭಯ ಪಾರ್ಟಿಗಳ ನಡುವೆ ಸಂಧಾನವಾಗಿ ಪರಸ್ಪರ ಒಪ್ಪಿಗೆಗೆ ಸಹಿ ಹಾಕಲಾಗಿದೆ.

ಶಿವಮೊಗ್ಗ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಕಳೆದ 2018 ಸೆಪ್ಟೆಂಬರ್ 12 ರಂದು ಜರುಗಿದ ಅಪಘಾತದಲ್ಲಿ ಚಿತ್ರದುರ್ಗ ತಾಲೂಕಿನ ಬೊಗಳೇರಹಟ್ಟಿ ಗ್ರಾಮದ ರಂಗಮ್ಮ ಎಡ ಪಾದವನ್ನು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದರು. ಬಸ್ಸಿನ ಚಾಲಕನ ಅಜಾಗರೂಕ ಚಾಲನೆ ಇದಾಗಿತ್ತು.

ಪ್ರಕರಣದ ಕುರಿತು ರಂಗಮ್ಮ ಚಿತ್ರದುರ್ಗ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಾದ ವಿವಾದ ಆಲಿಸಿದ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಬಾಧಿತ ಮಹಿಳೆಗೆ ರು 2 ಲಕ್ಷ ಪರಿಹಾರ ನೀಡಲು ಆದೇಶಿಸಿತ್ತು.

ಈ ಆದೇಶ ವಿರುದ್ದ ರಂಗಮ್ಮ ಉಚ್ಚ ನ್ಯಾಯಾಲಯದಲ್ಲಿ ಪರಿಹಾರ ಮೊತ್ತ ಹೆಚ್ಚಿಸಲು ಮೇಲ್ಮನವಿ ಸಲ್ಲಿಸಿದ್ದರು. ಉಚ್ಚನ್ಯಾಯಾಲಯ, ಪ್ರಕರಣದಲ್ಲಿ ಬಾಧಿತ ಮಹಿಳೆಗೆ ರು.4,51,990 ಪರಿಹಾರ ನೀಡಲು ಆದೇಶಿಸಿತ್ತು. ಈ ಆದೇಶಕ್ಕೆ ಅಸಮಧಾನ ತೋರಿದ್ದ ರಂಗಮ್ಮ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿ ಮೇಲ್ಮನವಿ ಸಲ್ಲಿಸಿದ್ದರು. ಇನ್ನೂ ಹೆಚ್ಚಿನ ಪರಿಹಾರ ಮೊತ್ತ ಕೋರಿದ್ದರು.

ಇದೇ ಜುಲೈ 29 ರಿಂದ ಆಗಸ್ಟ್ 03 ವರೆಗೆ ನಡೆಯಲಿರುವ ವಿಶೇಷ ಲೋಕ ಅದಾಲತ್‍ನಲ್ಲಿ ಪ್ರಕರಣ ಇತ್ಯರ್ಥಗೊಳಿಸಲು, ಪಕ್ಷಗಾರರ ನಡುವೆ ರಾಜಿ ಸಂಧಾನ ಮಾಡುವಂತೆ ಸರ್ವೋಚ್ಚ ನ್ಯಾಯಾಲಯ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳುಹಿಸಿಕೊಟ್ಟಿತ್ತು. ಇದರಂತೆ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ ವಾಸುದೇವ್ ಪಕ್ಷಗಾರರಿಗೆ ಶುಕ್ರವಾರ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದಲ್ಲಿ ಕರೆಸಿ ರಾಜೀ ಸಂಧಾನಕ್ಕೆ ಮನ ವೊಲಿಸಿದರು.

ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದ ರಂಗಮ್ಮನಿಗೆ ಉಚ್ಚನ್ಯಾಯಾಲಯದ ಆದೇಶದ ರು.4,51,990 ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ರು. 3 ಲಕ್ಷ ಪರಿಹಾರ ನೀಡಲು ಕೆಎಸ್ಆರ್ ಟಿಸಿ ಅಧಿಕಾರಿಗಳಿಗೆ ಸೂಚಿಸಲಾಯಿತು. ಈ ಪರಿಹಾರ ಮೊತ್ತಕ್ಕೆ ಇಬ್ಬರೂ ಪಕ್ಷಗಾರರು ಒಪ್ಪಿಗೆ ಸೂಚಿಸಿ ರಾಜೀ ಸಂಧಾನ ಮೂಲಕ ವಿಶೇಷ ಲೋಕ ಅದಾಲತ್‍ನಲ್ಲಿ ಪ್ರಕರಣ ಬಗೆಹರಿಸಿಕೊಳ್ಳಲಿದ್ದಾರೆ.

ರಾಜೀ ಸಂಧಾನಕ್ಕೆ ಒಪ್ಪಿದ ರಂಗಮ್ಮ, ಕೆಎಸ್ಆರ್ ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಸೇರಿದಂತೆ ಉಭಯ ಪಕ್ಷಗಾರರ ವಕೀಲರಿಗೆ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಧನ್ಯವಾದ ತಿಳಿಸಿದ್ದಾರೆ.