ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡರು, ಶನಿವಾರ ತಮ್ಮ ಕ್ಷೇತ್ರ ಹೊನಸಿಗೆರೆ ಶಾಲೆಯ ಮಕ್ಕಳೊಂದಿಗೆ ಬಿಸಿಯೂಟ ಸೇವನೆ ಮಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಶಾಲಾ ಮಕ್ಕಳ ಬಿಸಿಯೂಟಕ್ಕೆ ಹುಳು ಬಿದ್ದಿರುವ ತೊಗರಿ ಬೇಳೆ ಸರಬರಾಜು ಮಾಡಲಾಗುತ್ತಿದೆ ಎಂದು ಇತ್ತೀಚೆಗೆ ವಿಧಾನಸಭಾ ಕಲಾಪದಲ್ಲಿ ಧ್ವನಿ ಮಾಡಿ ಸರ್ಕಾರದ ಗಮನ ಸೆಳೆದಿದ್ದ ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡರು, ಶನಿವಾರ ತಮ್ಮ ಕ್ಷೇತ್ರ ಹೊನಸಿಗೆರೆ ಶಾಲೆಯ ಮಕ್ಕಳೊಂದಿಗೆ ಬಿಸಿಯೂಟ ಸೇವನೆ ಮಾಡಿದರು.

ಬಿಸಿಯೂಟದ ರಚಿ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಶಾಸಕರು, ವಿದ್ಯಾರ್ಥಿಗಳಿಗೆ ನಿತ್ಯಾ ಇದೇ ಗುಣಮಟ್ಟದ ಆಹಾರ ನೀಡುವಂತೆ ಸಿಬ್ಬಂದಿಗೆ ಸೂಚಿಸಿದರು. ಮಾಜಿ ಸಂಸದ ದಿ.ಎಸ್.ಮಲ್ಲಿಕಾರ್ಜುನಯ್ಯ ಅವರ ಹುಟ್ಟೂರಾದ ಹೊನಸಿಗೆರೆಯ ಈ ಶಾಲೆಯಲ್ಲಿ ಶಾಸಕರು ಮೊದಲು ಎಸ್‌ಡಿಎಂಸಿ ಸಭೆ ನಡೆಸಿ ಕುಂದುಕೊರತೆ ಪರಿಶೀಲಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಊಟ, ಬಾಳೆ ಹಣ್ಣು ಸವಿದರು.

ಬೆಂಗಳೂರಿನ ಜಿಂದಾಲ್ ಕಂಪನಿಯ ಸಿಎಸ್‌ಆರ್ ನಿಧಿಯಡಿ ಅಭಿವೃದ್ಧಿಯಾಗಿರುವ ಈ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಆಗಿನ ರಾಜ್ಯಪಾಲರಾದ ವಜೂಭಾಯಿ ವಾಲಾ ಹಾಗೂ ಅಂದಿನ ಶಿಕ್ಷಣ ಸಚಿವ ತನ್ವೀರ್ ಸೇಠ್ ಭಾಗವಹಿಸಿದ್ದರು. ಶಾಸಕರು ಹೊನಸಿಗೆರೆ ಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.