ಸುರೇಶ್ ಗೌಡ ಫಲಾಯನವಾದಿ ರಾಜಕಾರಣಿ: ಗೌರಿಶಂಕರ್

| Published : Feb 09 2025, 01:18 AM IST

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಆಗಲಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಾಗಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಪದೇ ಪದೇ ಪರಮೇಶ್ವರ್ ಅವರನ್ನು ಟೀಕಿಸುವ ಮೂಲಕ ಅವರ ತೇಜೋವಧೆಗೆ ಯತ್ನಿಸುತ್ತಿರುವುದು ಗ್ರಾಮಾಂತರ ಶಾಸಕರಿಗೆ ಶೋಭ ತರುವುದಿಲ್ಲ.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರ ಬಗ್ಗೆ ತೀರ ಹಗುರವಾಗಿ ಮಾತನಾಡುವುದನ್ನೇ ಚಟವಾಗಿ ಮಾಡಿಕೊಂಡಿರುವ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ, ಪ್ರಚಾರಕ್ಕಾಗಿ ಸರಕಾರವನ್ನು ಹೀಯಾಳಿಸುವುದನ್ನು ಕೈಬಿಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ತಾಕೀತು ಮಾಡಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಸುರೇಶ್ ಗೌಡ ಪದೇ ಪದೇ ಸರಕಾರ ಸತ್ತು ಹೋಗಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿಯೇ ಜಿಲ್ಲೆಯಲ್ಲಿ ಎರಡು ಬೃಹತ್ ಫಲಾನುಭವಿಗಳ ಸಮಾವೇಶ ನಡೆದಿದೆ. ಸುಮಾರು 1500 ಕೋಟಿ ರು. ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸವಲತ್ತುಗಳ ವಿತರಣೆ ಮಾಡಲಾಗಿದೆ. ಆ ಸಮಾರಂಭಗಳಲ್ಲಿ ಸ್ವತಃ ಶಾಸಕರೇ ಉಪಸ್ಥಿತರಿದ್ದು, ಹತ್ತಿರದಿಂದ ನೋಡಿದ್ದರೂ ಟೀಕಿಸುವುದು ತರವಲ್ಲ ಎಂದರು.

ಜಿಲ್ಲೆಗೆ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಸುಮಾರು 3500 ಕೋಟಿ ರು.ಗಳ ಅನುದಾನ ನೀಡಲಾಗಿದೆ. ಮಹಾತ್ಮಗಾಂಧಿ ಕ್ರೀಡಾಂಗಣ, ದೇವರಾಜ ಅರಸು ಬಸ್ ನಿಲ್ದಾಣ ನಿರ್ಮಾಣಕ್ಕೆ ಸರಕಾರದಿಂದ ಹಣ ನೀಡಲಾಗಿದೆ. ಹಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಸಿದ್ಧಾರ್ಥ ಕಾಲೇಜಿಗೆ ಬಂದು ಹೋಗುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಹೇಳಿಕೆ ನೀಡುವ ಸುರೇಶಗೌಡರು, ಬೆಳಗಾದ ತಕ್ಷಣ ಡಾ.ಜಿ.ಪರಮೇಶ್ವರ್ ಮನೆಗೆ ಹೋಗಿ ಕುಳಿತಿರುತ್ತಾರೆ. ಪದೇ ಪದೇ ಈ ರೀತಿಯ ಅವಹೇಳನಕಾರಿ ಹೇಳಿಕೆಯನ್ನು ಕೈಬಿಡದಿದ್ದರೆ ನಾವು ಕೂಡ ನಿಮಗೆ ಘೇರಾವ್ ಹಾಕುವ ಕಾಲ ದೂರವಿಲ್ಲ. ನಮ್ಮ ಕಾರ್ಯಕರ್ತರ ತಾಳ್ಮೆಗೂ ಮಿತಿ ಇದೆ ಎಂದು ನುಡಿದರು.

ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿಯೇ ಸಾಕಷ್ಟು ಸಮಸ್ಯೆಗಳಿವೆ. ತುಮಕೂರು ವಿಶ್ವವಿದ್ಯಾಲಯಕ್ಕೆ ಸರಿಯಾಗಿ ಮೂಲಭೂತ ಸೌಕರ್ಯಗಳಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ. ಹೈನುಗಾರರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಮೊದಲು ಶಾಸಕರು ಆ ಕಡೆಗೆ ಗಮನ ಹರಿಸಲಿ ಎಂದರು.

ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಆರ್ ಡಿಪಿಆರ್‌ಗೆ ಮತ್ತು ಕಂದಾಯ ಇಲಾಖೆಗೆ ಎರಡು ಪ್ರಶಸ್ತಿಗಳು ಬಂದಿವೆ. ಶಾಸಕ ಸುರೇಶ್ ಗೌಡರು ಪ್ರಚಾರದ ಹುಚ್ಚಿಗೆ ಬಿದ್ದು ಅಸಂಬದ್ಧ ಹೇಳಿಕೆ ನೀಡುವುದನ್ನು ಕೈಬಿಡಬೇಕು. ಹೊಂದಾಣಿಕೆ ರಾಜಕಾರಣ ಮಾಡುವ ನಿಮ್ಮಿಂದ ಕಾಂಗ್ರೆಸ್ ಪಕ್ಷ ಬುದ್ದಿ ಹೇಳಿಸಿಕೊಳ್ಳುವ ಮಟ್ಟದಲ್ಲಿ ಇಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೇಲಿನ ನಿಮ್ಮ ರೋಷಾವೇಷ ಕಡಿಮೆಯಾಗಲು ಕಾರಣ ಏನೆಂಬುದನ್ನು ಜನತೆಯ ಮುಂದಿಡಿ ಎಂದರು.

ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ತುಮಕೂರು ಗ್ರಾಮಾಂತರ ಶಾಸಕರಾಗಿರುವ ಬಿ.ಸುರೇಶಗೌಡ ಓರ್ವ ಫಲಾಯನವಾದಿ ರಾಜಕಾರಣಿ. 2023ರ ವಿಧಾನಸಭಾ ಚುನಾವಣೆಯ ವೇಳೆ ಮತದಾರರಿಗೆ ನೀಡಿದ ಒಂದು ಭರವಸೆಯನ್ನೂ ಈಡೇರಿಸಕ್ಕಾಗದ ನರಸತ್ತ ಶಾಸಕ ಸುರೇಶ್ ಗೌಡ ಎಂದು ವಾಗ್ದಾಳಿ ನಡೆಸಿದರು.

ನನ್ನ ಕಾಲದಲ್ಲಿ ಮಂಜೂರಾದ ಜೆಜೆಎಂ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುತ್ತಿರುವುದು ಬಿಟ್ಟರೆ ಒಂದು ನೈಯಾ ಪೈಸೆ ಅನುದಾನವನ್ನೂ ತಂದಿಲ್ಲ. ಕುಂಭಮೇಳಕ್ಕೆ ಹೋಗಿ ಪುಣ್ಯಸ್ನಾನ ಮಾಡಿ ಬಂದ ಮೇಲಾದರೂ ಬದಲಾಗಿದ್ದಾರೆ ಎಂದುಕೊಂಡಿದ್ದೆ, ಆದರೆ ಅವರು ಮತ್ತೆ ಹಳೆಯ ಚಾಳಿಯನ್ನೇ ಮುಂದುವರಿಸಿದ್ದಾರೆ. ಅವರ ಹಳೆಯ ಚಾಳಿಯನ್ನು ಬಿಡುವಂತೆ ಮಾಡಲು ರಾಜ್ಯ ಸರಕಾರ ಟಿ.ನರಸೀಪುರ ತಾಲೂಕಿನ ತಿರುಮಕೂಡಲದಲ್ಲಿ ಹಮ್ಮಿಕೊಂಡಿರುವ ಕುಂಭಮೇಳಕ್ಕೆ ನಾನೇ ಕರೆದುಕೊಂಡು ಹೋಗುತ್ತೇನೆ ಎಂದು ಕುಟುಕಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಆಗಲಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಾಗಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಪದೇ ಪದೇ ಪರಮೇಶ್ವರ್ ಅವರನ್ನು ಟೀಕಿಸುವ ಮೂಲಕ ಅವರ ತೇಜೋವಧೆಗೆ ಯತ್ನಿಸುತ್ತಿರುವುದು ಗ್ರಾಮಾಂತರ ಶಾಸಕರಿಗೆ ಶೋಭ ತರುವುದಿಲ್ಲ ಎಂದರು.

150 ಕೋಟಿ ರು. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಎತ್ತಿನ ಹೊಳೆ ಯೋಜನೆಗೆ 350 ಕೋಟಿ ರು. ಹೆಚ್ಚುವರಿ ಅನುದಾನ ನೀಡಿದೆ. ತುಮಕೂರು ನಗರಕ್ಕೆ 200 ಕೋಟಿ ರು. ವಿಶೇಷ ಅನುದಾನ ನೀಡಲಾಗಿದೆ. ನೀವೇ ಗುದ್ದಲಿ ಪೂಜೆ ನೆರವೇರಿಸಿದ ಬೆಳ್ಳಾವಿ ಸರಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ಅನುದಾನ ನೀಡಿದ್ದು ಯಾರು? ಕೈದಾಳದ ಚನ್ನಕೇಶವ ದೇವಾಲಯವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ನೀಲ ನಕ್ಷೆ ತಯಾರಾಗಿದೆ. ಇವೆಲ್ಲ ಅಭಿವೃದ್ಧಿ ಕಾರ್ಯಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ ಎಂದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್, ತುಮಕೂರು ಗ್ರಾಮಾಂತರದಲ್ಲಿ ಅಭಿವೃದ್ಧಿ ಎಂಬುದೇ ಸ್ತಬ್ಧವಾಗಿದೆ.ಮೊದಲು ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಲಿ ಎಂದು ತಾಕೀತು ಮಾಡಿದರು.

ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್, ಸುಲ್ತಾನ್ ಮೊಹಮದ್, ಆರ್.ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್,ಫೈಯಾಜ್, ಷಣ್ಮುಗಪ್ಪ ಸೇರಿ ಹಲವರು ಉಪಸ್ಥಿತರಿದ್ದರು.