ಸುರೇಶ್ ನಾಮಪತ್ರ ಸಲ್ಲಿಕೆ: ಭಾರೀ ಶಕ್ತಿ ಪ್ರದರ್ಶನ

| Published : Mar 29 2024, 12:52 AM IST

ಸಾರಾಂಶ

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆಗೂ ಮುನ್ನ ನಗರದಲ್ಲಿ ನಡೆದ ಅದ್ಧೂರಿ ಮೆರವಣಿಗೆಯು ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆಗೂ ಮುನ್ನ ನಗರದಲ್ಲಿ ನಡೆದ ಅದ್ಧೂರಿ ಮೆರವಣಿಗೆಯು ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಬಾಲಕೃಷ್ಣ, ರಂಗನಾಥ್ , ಬಿ.ಶಿವಣ್ಣ, ಎಸ್.ರವಿ, ಮಾಜಿ ಸಚಿವ ಎಚ್ .ಎಂ.ರೇವಣ್ಣ, ಮಾಜಿ ಶಾಸಕ ಕೆ.ರಾಜು, ಮುಖಂಡ ಡಿ.ಉಮಾಪತಿ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದದ್ದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ತುಂಬಿದರು.

ಬೆಳಿಗ್ಗೆ 11.45ರ ಸುಮಾರಿಗೆ ಜೂನಿಯರ್ ಕಾಲೇಜು ಮೈದಾನದ ಬಳಿಯ ಪಿಡಬ್ಲ್ಯೂ ವೃತ್ತದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ತನ್ನ ಕಲೆ ಪ್ರದರ್ಶಿಸುತ್ತಾ ಸಾಗಿದವು. ಅವುಗಳ ಹಿಂದೆ ಸುಮಾರು 20ರಿಂದ 25 ಸಾವಿರ ಕಾರ್ಯಕರ್ತರು ಕಾಂಗ್ರೆಸ್ ಬಾವುಟಗಳನ್ನುಹಿಡಿದು ಹೆಜ್ಜೆ ಹಾಕುತ್ತಾ ಸಾಗಿದರು. ಈ ಮೂಲಕ ಕಾಂಗ್ರೆಸ್ ಪಕ್ಷ ಹೋರಾಟಕ್ಕೆ ಪಂಥಾಹ್ವಾನ ನೀಡುವ ಸ್ಪಷ್ಟ ಸಂದೇಶವನ್ನು ಬಿಜೆಪಿ - ಜೆಡಿಎಸ್ ಮೈತ್ರಿಕೂಟಕ್ಕೆ ರವಾನಿಸಿತು.

ಅಭ್ಯರ್ಥಿ ಸುರೇಶ್ ಅವರಿಗೆ ಕಾರ್ಯಕರ್ತರು ಮಾರ್ಗಮಧ್ಯೆ ಅಲ್ಲಲ್ಲಿ ಪುಷ್ಪಾರ್ಚನೆಯ ಮೂಲಕ ಸ್ವಾಗತ ಮಾಡಿದರು. ತೆರೆದ ವಾಹನದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆಯು ಸಾಗಿತು. ವಿನಾಯಕ ನಗರ ಬಡಾವಣೆಯ ಅಭಯ ಆಂಜನೇಯ ದೇಗುಲದ ಬಳಿ ಮೆರವಣಿಗೆ ಆಗಮಿಸುತ್ತಿದ್ದಂತೆ ಕ್ರೇನ್‌ ಬಳಸಿ ಬೃಹದಾಕಾರದ ಹಾರವನ್ನು ಹಾಕಿದರು.

ರಸ್ತೆಯ ಎರಡೂ ಕಡೆಗಳಲ್ಲಿ ಸಾವಿರಾರು ಕಾರ್ಯಕರ್ತರು ಧ್ವಜಗಳನ್ನು ಬೀಸುತ್ತಾ ಬಿರು ಬಿಸಿಲನ್ನೂ ಲೆಕ್ಕಿಸದೇ ನಡೆದರು. ಜಿಲ್ಲಾ ಸಂಕೀರ್ಣದ ಭವನದ ಮುಂಭಾಗದಲ್ಲಿ ಮೆರವಣಿಗೆ ಮುಕ್ತಾಯಗೊಂಡಿತು.

ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಗ್ಗೆಯಿಂದಲೇ ಕಾರ್ಯಕರ್ತರು ನೆರೆದಿದ್ದರು. ಡೊಳ್ಳು, ವೀರಗಾಸೆ, ಕಂಸಾಳೆ, ಗೊಂಬೆಗಳ ಕುಣಿತವು ಮೆರವಣಿಗೆಗೆ ಮತ್ತಷ್ಟು ಕಳೆ ತಂದುಕೊಟ್ಟಿತು.

ಬೆಂಗಳೂರು-ಮೈಸೂರು ಹೆದ್ದಾರಿ ಉದ್ದಕ್ಕೂ ಕಾರ್ಯಕರ್ತರು ಜಮಾಯಿಸಿದ್ದರಿಂದ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.30 ಗಂಟೆಯವರೆಗೂ ವಾಹನಗಳ ಸಂಚಾರಕ್ಕೆ ಅಡಚಣೆ ಆಗಿತ್ತು. ಪೊಲೀಸರು ವಾಹನ ಸಂಚಾರ ಸುಗಮಗೊಳಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂದಿತು.

ಕನಕಪುರ, ಮಾಗಡಿ, ಚನ್ನಪಟ್ಟಣ, ರಾಮನಗರ, ಕುಣಿಗಲ್, ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ಕ್ಷೇತ್ರದಿಂದ ಜನಸಾಗರವೇ ಹರಿದು ಬಂದಿತು. ಆಂಜನೇಯ ದೇಗುಲದ ಬಳಿ ನಾಯಕರಿಗೆ ವೇದಿಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕರ್ತರು ಬಿಸಿಲಲ್ಲಿಯೇ ನಿಂತು ನಾಯಕರ ಮಾತುಗಳನ್ನು ಆಲಿಸಿದರು.

ಬಾಕ್ಸ್‌.........

ನಾಮಪತ್ರ ಸಲ್ಲಿಕೆಗೂ ಮುನ್ನ ಡಿಕೆಸು ಟೆಂಪಲ್ ರನ್ :

ನಾಮಪತ್ರ ಸಲ್ಲಿಕೆಗು ಮುನ್ನ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಬೆಂಗಳೂರಿನ ಸದಾಶಿವನಗರದಲ್ಲಿ ಸಹೋದರ ಡಿ.ಕೆ.ಶಿವಕುಮಾರ್ ಹಾಗೂ ಅತ್ತಿಗೆ ಉಷಾ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ತಮ್ಮ ಮನೆದೇವರು ಕನಕಪುರದ ಕೆಂಕೇರಮ್ಮನಿಗೆ ಮೊದಲ ಪೂಜೆ ಸಲ್ಲಿಸಿ ದೇವಿಯ ಹಾಗೂ ತಾಯಿ ಗೌರಮ್ಮನವರ ಆಶೀರ್ವಾದ ಪಡೆದರು. ನಂತರ ಸಾತನೂರು ಬಳಿಯ ಕಬ್ಬಾಳಮ್ಮ ದೇವಸ್ಥಾನಕ್ಕೂ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಹೋದರ ಡಿ.ಕೆ.ಶಿವಕುಮಾರ್, ಅತ್ತಿಗೆ ಉಷಾ, ಪುತ್ರಿ ಐಶ್ವರ್ಯ, ಶಾಸಕರಾದ ರಂಗನಾಥ್, ಎಸ್.ರವಿ ಮತ್ತಿರರಿದ್ದರು.

ಅಲ್ಲಿಂದ ರಾಮನಗರಕ್ಕೆ ಆಗಮಿಸಿದ ಡಿ.ಕೆ.ಸುರೇಶ್ ಅವರು ಅರ್ಕಾವತಿ ನದಿ ದಂಡೆಯಲ್ಲಿರುವ ಪೀರನ್ ಷಾ ವಲಿ ದರ್ಗಾ ಮತ್ತು ನಗರದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.ಬಾಕ್ಸ್‌.........

ಸಿಎಂ ಸಿದ್ದು - ಡಿಸಿಎಂ ಡಿಕೆಶಿ ಗೈರು:

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಅವರ ಮೆರವಣಿಗೆ ಹಾಗೂ ನಾಮಪತ್ರ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೈರಾಗಿದ್ದರು.

ಬೆಳಗ್ಗೆಯೇ ರಾಮನಗಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕ ಇಕ್ಬಾಲ್ ಹುಸೇನ್ ಕಚೇರಿಯಲ್ಲಿ ನಾಯಕರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದರು. ಇನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಕಪುರದಿಂದ ರಾಮನಗರಕ್ಕೆ ತಡವಾಗಿ ಆಗಮಿಸಿದರು. ಸುರೇಶ್ ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರೆ, ಈ ಇಬ್ಬರು ನಾಯಕರು ವೇದಿಕೆ ಕಾರ್ಯಕ್ರಮಕ್ಕೆ ತೆರಳಿದರು.

28ಕೆಆರ್ ಎಂಎನ್‌ 1,2,3.ಜೆಪಿಜಿ

1,2.ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ಸಹಸ್ರಾರು ಜನರು ಪಾಲ್ಗೊಂಡಿರುವುದು.

3.ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆಗು ಮುನ್ನ ತಾಯಿ ಗೌರಮ್ಮ ಅವರಿಂದ ಆಶೀರ್ವಾದ ಪಡೆಯುತ್ತಿರುವುದು.