ನಿಗಮ ಮಂಡಳಿ ಅತೃಪ್ತಿ ಶಮನಕ್ಕೆ ಸುರ್ಜೇವಾಲಾ ಯತ್ನ

| Published : Jan 22 2024, 02:17 AM IST

ಸಾರಾಂಶ

ಸ್ಥಾನಮಾನ ಒಲ್ಲದ ಕಾರ್ಯಕರ್ತರ ಹೆಸರುಗಳನ್ನು ನಿಗಮ ಮಂಡಳಿಗಳ ನೇಮಕಾತಿಗೆ ಹೈಕಮಾಂಡ್‌ ಸೇರಿಸಿದ್ದರಿಂದ ಉಂಟಾಗಿದ್ದ ಅಸಮಾಧಾನ ಶಮನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್‌ರೊಂದಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಭಾನುವಾರ ಎರಡು ಹಂತದ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ, ಬೆಂಗಳೂರು ಸ್ಥಾನಮಾನ ಒಲ್ಲದ ಕಾರ್ಯಕರ್ತರ ಹೆಸರುಗಳನ್ನು ನಿಗಮ ಮಂಡಳಿಗಳ ನೇಮಕಾತಿಗೆ ಹೈಕಮಾಂಡ್‌ ಸೇರಿಸಿದ್ದರಿಂದ ಉಂಟಾಗಿದ್ದ ಅಸಮಾಧಾನ ಶಮನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್‌ರೊಂದಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಎರಡು ಹಂತದ ಸಭೆ ನಡೆಸಿದ್ದಾರೆ. ಶನಿವಾರ ರಾತ್ರಿ ಮತ್ತು ಭಾನುವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ನಿಗಮ ಮಂಡಳಿ ನೇಮಕಾತಿ ಪಟ್ಟಿಗೆ ಕಾರ್ಯಕರ್ತರ ಹೆಸರು ಮತ್ತು ಅವರಿಗೆ ನೀಡಬೇಕಾದ ನಿಗಮಗಳನ್ನು ನಿರ್ಧರಿಸುವ ಹೊಣೆಯನ್ನು ರಾಜ್ಯ ನಾಯಕರಿಗೇ ಬಿಡುವ ಮೂಲಕ ಗೊಂದಲ ಬಗೆಹರಿಸುವ ಪ್ರಯತ್ನ ನಡೆಸಿದ್ದಾರೆ. ಅಲ್ಲದೆ, ಜ.26ಕ್ಕೆ ಮತ್ತೊಂದು ಸುತ್ತಿನ ಸಭೆ ನಡೆಸಿ ಪಟ್ಟಿ ಅಂತಿಮಗೊಳಿಸುವುದಾಗಿ ಹೇಳಿ ದೆಹಲಿಗೆ ಮರಳಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ನಿಗಮ ಮಂಡಳಿ ನೇಮಕಾತಿಗೆ ರಾಜ್ಯ ನಾಯಕರು ಅಖೈರುಗೊಳಿಸಿ ಕಳುಹಿಸಿದ್ದ 36 ಶಾಸಕರು ಮತ್ತು 39 ಕಾರ್ಯಕರ್ತರ ಪಟ್ಟಿಯನ್ನು ಅಂತಿಮಗೊಳಿಸುವಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಬ್ಬರಿಗೂ ವಲ್ಲದ ವಿವಿಧ ಕಾರ್ಯಕರ್ತರ ಹೆಸರುಗಳನ್ನು ಸೇರಿಸಿ ಕಳುಹಿಸಿದ್ದರು ಎನ್ನಲಾಗಿದೆ. ಇದರಿಂದ ರಾಜ್ಯನಾಯಕರು ಅಸಮಾಧಾನಗೊಂಡಿದ್ದರಿಂದ ಪಟ್ಟಿ ಪ್ರಕಟವಾಗುವುದು ತಡವಾಗಿತ್ತು. ಈ ಹಿನ್ನೆಲೆಯಲ್ಲಿ ಸುರ್ಜೇವಾಲ ಅವರು ಇಬ್ಬರೂ ನಾಯಕರೊಂದಿಗೆ ಸಭೆ ನಡೆಸಿ ನಿಗಮ ಮಂಡಳಿ ಪಟ್ಟಿಗೆ ಕಾರ್ಯಕರ್ತರು ಮತ್ತು ಅವರಿಗೆ ನೀಡಬೇಕಾದ ನಿಗಮಗಳ ಪಟ್ಟಿಯನ್ನು ತಾವೇ ಅಂತಿಮಗೊಳಿಸುವಂತೆ ಸೂಚಿಸಿದ್ದಾರೆ. ಜ.26ಕ್ಕೆ ಮತ್ತೆ ರಾಜ್ಯಕ್ಕೆ ಬರುತ್ತೇನೆ. ಅಂದು ತಾವು ಅಂತಿಮಗೊಳಿಸಿದ ಪಟ್ಟಿ ಮತ್ತು ನಿಗಮಗಳನ್ನು ಪರಿಶೀಲಿಸಿ ಪಟ್ಟಿ ಪ್ರಕಟಿಸುವ ಬಗ್ಗೆ ತೀರ್ಮಾನ ಮಾಡೋಣ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಸುರ್ಜೇವಾಲ ಅವರೊಂದಿಗಿನ ಸಭೆಯಲ್ಲಿ ಕೆಪಿಸಿಸಿಗೆ ನೂತನ ಕಾರ್ಯಾಧ್ಯಕ್ಷರ ನೇಮಕಾತಿ ವಿಚಾರದಲ್ಲೂ ವಿಳಂಬವಾಗುತ್ತಿರುವ ಬಗ್ಗೆ ರಾಜ್ಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಗಳಲ್ಲಿ ಪ್ರಮುಖ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ದೃಷ್ಟಿಯಿಂದ ವಿನಯ್‌ ಕುಲಕರ್ಣಿ (ಪಂಚಮಸಾಲಿ), ಕುಮಾರ್‌ ಸೊರಕೆ (ಬಿಲ್ಲವ), ಜಿ.ಸಿ.ಚಂದ್ರಶೇಕರ್‌ (ಒಕ್ಕಲಿಗ), ರಾಯಚೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಸಂತ ಕುಮಾರ್‌ (ಪರಿಶಿಷ್ಟ ಜಾತಿ) ಅವರ ಹೆಸರನ್ನು ರಾಜ್ಯದಿಂದ ಕಳುಹಿಸಲಾಗಿದೆ. ಇನ್ನು ದಲಿತ ಸಮುದಾಯದ ಪ್ರಾತಿನಿಧ್ಯದ ಹೆಸರನ್ನು ಖಾಲಿ ಬಿಡಲಾಗಿದೆ. ಅದನ್ನು ಹೈಕಮಾಂಡ್‌ ತೀರ್ಮಾನಿಸಬೇಕು.

ಆದರೆ, ಇದುವರೆಗೆ ಎಐಸಿಸಿ ಅಧ್ಯಕ್ಷರು ಕಾರ್ಯಾಧ್ಯಕ್ಷರ ನೇಮಕಾತಿ ವಿಚಾರದಲ್ಲಿ ತೀರ್ಮಾನ ಮಾಡಿಲ್ಲ. ಈ ವಿಳಂಬದ ಪರಿಣಾಮ ಲೋಕಸಭಾ ಚುನಾವಣೆ ಮೇಲೆ ಬೀರುತ್ತದೆ ಎಂದು ಸಭೆಯಲ್ಲಿ ರಾಜ್ಯನಾಯಕರು ಬೇಸರ ವ್ಯಕ್ತಪಡಿಸಿದರು. ಆದಷ್ಟು ಬೇಗ ಕಾರ್ಯಾಧ್ಯಕ್ಷರ ನೇಮಕ ಮಾಡಲು ಮನವಿ ಮಾಡಿದರು ಎಂದು ತಿಳಿದು ಬಂದಿದೆ.