ಸುರ್ಜೇವಾಲ ಎಂಟ್ರಿ ಸರ್ಕಾರ ಬರ್ಬಾದ್‌ ಆಗಿರುವುದಕ್ಕೆ ಸಾಕ್ಷಿ : ರವಿಕುಮಾರ್‌

| N/A | Published : Jul 01 2025, 12:47 AM IST / Updated: Jul 01 2025, 11:12 AM IST

surjewala 1
ಸುರ್ಜೇವಾಲ ಎಂಟ್ರಿ ಸರ್ಕಾರ ಬರ್ಬಾದ್‌ ಆಗಿರುವುದಕ್ಕೆ ಸಾಕ್ಷಿ : ರವಿಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರ ದಿನದಿಂದ ದಿನಕ್ಕೆ ಹೇಗೆ ಬರ್ಬಾದ್ ಆಗುತ್ತಿದೆ ಎಂಬುದಕ್ಕೆ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರೇ ಬೆಂಗಳೂರಿಗೆ ಧಾವಿಸಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿರುವುದು ಸ್ಪಷ್ಟ ನಿದರ್ಶನ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಲೇವಡಿ ಮಾಡಿದ್ದಾರೆ.

 ಬೆಂಗಳೂರು :  ಕಾಂಗ್ರೆಸ್ ಸರ್ಕಾರ ದಿನದಿಂದ ದಿನಕ್ಕೆ ಹೇಗೆ ಬರ್ಬಾದ್ ಆಗುತ್ತಿದೆ, ಹೇಗೆ ಅಭಿವೃದ್ಧಿ ಶೂನ್ಯವಾಗುತ್ತಿದೆ ಎಂಬುದಕ್ಕೆ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರೇ ಬೆಂಗಳೂರಿಗೆ ಧಾವಿಸಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿರುವುದು ಸ್ಪಷ್ಟ ನಿದರ್ಶನ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಲೇವಡಿ ಮಾಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕರಾದ ಬಿ.ಆರ್.ಪಾಟೀಲ್, ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ ಹೀಗೆ ಅನೇಕರನ್ನು ಸುರ್ಜೇವಾಲಾ ಕರೆದಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಅಭಿವೃದ್ಧಿ ಆಗುತ್ತಿಲ್ಲ; ತಮಗೆ ಅನುದಾನ ಸಿಗುತ್ತಿಲ್ಲ, ನಾವು ಕ್ಷೇತ್ರದಲ್ಲಿ ಮುಖ ಇಟ್ಟುಕೊಂಡು ಓಡಾಡುವುದು ಹೇಗೆ, ಜನರಿಗೆ ಏನು ಉತ್ತರ ಕೊಡಬೇಕು ಎಂದು ಅಸಮಾಧಾನದಿಂದ ಮಾತನಾಡಿದ್ದಾರೆ. ಈ ಸಂಖ್ಯೆ ಹೆಚ್ಚಾಗಲಿದೆ ಎಂದು ಸುರ್ಜೇವಾಲಾ ದೌಡಾಯಿಸಿ ಬಂದಿದ್ದಾರೆ ಎಂದು ಹೇಳಿದರು.

ನಿಮ್ಮ ಸರ್ಕಾರ ಅಭಿವೃದ್ಧಿಶೂನ್ಯ ಎಂಬುದಕ್ಕೆ ಇನ್ನೇನು ಸಾಕ್ಷಿ ಬೇಕು ಸಿದ್ದರಾಮಯ್ಯನವರೇ? ತಮ್ಮ ಶಾಸಕರ ಅಹವಾಲು ಶಮನ ಮಾಡಲು ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲರೂ ವಿಫಲವಾಗಿದ್ದಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಅದಕ್ಕಾಗಿಯೇ ಸುರ್ಜೇವಾಲಾ ಬಂದಿದ್ದಾರೆ.

 ಮುಂದೆ ರಾಹುಲ್ ಗಾಂಧಿ ಕೂಡ ಬರಬೇಕಾಗಿ ಬರಬಹುದು ಎಂದರು.ಹಣ ಬರುವುದಿಲ್ಲ ಎಂಬ ಕಾರಣಕ್ಕೆ ರಾಜ್ಯದ ಗುತ್ತಿಗೆದಾರರು ರಸ್ತೆ, ಕಟ್ಟಡ ಕಾಮಗಾರಿಗೆ ಟೆಂಡರ್ ಕರೆದರೆ ಅವುಗಳಿಗೆ ಅರ್ಜಿ ಹಾಕುತ್ತಿಲ್ಲ. ಅನುದಾನ ಸಿಗುತ್ತಿಲ್ಲ ಎಂಬ ಅಸಮಾಧಾನ ಹೊಂದಿರುವ ಶಾಸಕರ ದೊಡ್ಡ ಪಟ್ಟಿಯೇ ಕಾಂಗ್ರೆಸ್ಸಿನಲ್ಲಿ ಇದೆ ಎಂದು ರವಿಕುಮಾರ್ ತಿಳಿಸಿದರು.

Read more Articles on