ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಗಿತ್ತು.ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಅಭಿವೃದ್ಧಿ ಪರ ಕೆಲಸ ಮಾಡಬೇಕು, ಸುರಪುರ ಮತ್ತು ಹುಣಸಗಿ ಅವಳಿ ತಾಲೂಕುಗಳ ಅಭಿವೃದ್ಧಿಗೆ ಪ್ರತಿಯೊಬ್ಬ ಅಧಿಕಾರಿಯು ಮುತುವರ್ಜಿ ವಹಿಸಬೇಕು, ತಾತ್ಸಾರ ವಹಿಸಿದರೆ ಸಹಿಸುವುದಿಲ್ಲ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ಅವಳಿ ತಾಲೂಕಿನಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ವಿವಿಧಡೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ವಿವಿಧೆಡೆ ನೀರು ಪೂರೈಕೆಗಾಗಿ ಪೈಪ್ ಹಾಕಲು ಗುಂಡಿಗಳನ್ನು ಅಗೆದಿದ್ದಾರೆ. ಆದರೆ, ಅವುಗಳನ್ನು ಮುಚ್ಚದೇ ಹಾಗೆ ಬಿಟ್ಟಿದ್ದಾರೆ. ಇದರಿಂದ ಸಂಚಾರಕ್ಕೆ ಮತ್ತು ಜನರಿಗೆ ತೀವ್ರವಾದ ತೊಂದರೆ ಆಗಿದೆ ಎಂದು ಸಂಬಂಧಪಟ್ಟ ನಗರ ನೀರು ಸರಬರಾಜು ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.ತಾಲೂಕಿನಲ್ಲಿ ಕ್ಷಯರೋಗದ ಲಕ್ಷಣಗಳು ತೀವ್ರವಾಗುತ್ತದೆ. ಇದನ್ನು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಬೇಕು ಹಾಗೂ ಸಮಾಜಿಕ ಜಾಲಗಳನ್ನು ಬಳಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು. ಆಸ್ಪತ್ರೆಗೆ ಬೇಕಾದಂತಹ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಒದಗಿಸಿಕೊಡಲು ಕೂಡಲೇ ಮೇಲಾಧಿಕಾರಿಗಳೊಂದಿಗೆ ಮಾತನಾಡಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ ಅಪೌಷ್ಟಿಕತೆಯ 102 ಮಕ್ಕಳಿದ್ದಾರೆ ಎಂಬ ಮಾಹಿತಿಯಿದೆ. ಮಕ್ಕಳ ಆರೋಗ್ಯವೃದ್ಧಿಯಲ್ಲಿ ಗುಣಮಟ್ಟದ ಆಹಾರವನ್ನು ನೀಡಬೇಕು. ಮಕ್ಕಳ ಜೀವನಕ್ಕೆ ಹಾನಿಯಾದಂತಹ ಆಹಾರವನ್ನು ಪೂರೈಸಿದರೆ ಕ್ರಮ ಎದುರಿಸಲು ಸಿದ್ಧರಾಗಬೇಕು. ಅಂಗನವಾಡಿಗಳಿಗೆ ಎಲ್ಲಿ ಸ್ವಂತ ಕಟ್ಟಡವಿಲ್ಲವೋ ಅವುಗಳ ಕುರಿತು ಮಾಹಿತಿ ನೀಡಬೇಕು. ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರನ್ನು ನೇಮಕಾತಿಯನ್ನು ಸರ್ಕಾರಿ ನಿಯಮಾನುಸಾರ ಮಾಡಬೇಕು ಎಂದು ಸಿಡಿಪಿಒಗೆ ಸೂಚಿಸಿದರು.ಸರ್ಕಾರಿ ಕಚೇರಿಗಳು, ಶಾಲಾವರಣ, ಸ್ಮಶಾನ, ಗೋಮಾಳ, ಸರ್ಕಾರಿ ಭೂಮಿ ಸಂಬಂಧಿಸಿದಂತೆ ಸಸಿಗಳನ್ನು ನೆಡಲು ಆಯಾ ಇಲಾಖೆಗಳ ಅಧಿಕಾರಿಗಳ ಅನುಮತಿ ಪಡೆದುಕೊಳ್ಳಬೇಕು ಎಂದು ಸಾಮಾಜಿಕ ವಲಯ ಅರಣ್ಯ ಅಧಿಕಾರಿಗೆ ಸೂಚಿಸಿದರು.
ಪ್ರಸಕ್ತ ಸಾಲಿನಲ್ಲಿ ನಿರಂತರವಾಗಿ ಮಳೆಯಾಗಿದ್ದು, ರಾಜ್ಯ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳು ಹಾನಿಗೊಳಗಾಗಿವೆ. ಈಗಾಗಲೇ ಅಧಿಕಾರಿಗಳು 4.39 ಕೋಟಿ ರು.ಗಳು ಹಾನಿಯಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ವರದಿ ನೀಡಲು ಪಿಡಬ್ಲ್ಯಡಿ ಎಇಇ ಅವರಿಗೆ ಸೂಚಿಸಿದರು.ತಾಲೂಕಿನ ಜೆಸ್ಕಾಂ ಇಲಾಖೆಯ ಹುಣಸಗಿ ತಾಲೂಕಿನಲ್ಲಿ ಗೃಹ ಜ್ಯೋತಿ ಫಲಾನುಭವಿಗಳು 17,792 ಅರ್ಜಿ ಸಲ್ಲಿಸಿದ್ದು, 17 ಸಾವಿರ ಅರ್ಹರನ್ನು ನೋಂದಾಯಿಸಲಾಗಿದೆ. ಸುರಪುರದಲ್ಲಿ 18,412 ಫಲಾನುಭವಿಗಳು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ್ದು, 17000 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. 1840 ಫಲಾನುಭವಿಗಳ ಬಾಕಿ ಇದೆ. ಈ ಕುರಿತು ಕೂಡಲೇ ಅವರನ್ನು ಫಲಾನುಭವಿಗಳನ್ನು ಮಾಡಬೇಕು ಎಂದು ಎಎಇಗಳಿಗೆ ಸೂಚಿಸಿದರು. ಅಲ್ಪಸಂಖ್ಯಾತ, ಪಂಚಾಯತ್ ರಾಜ್, ಲ್ಯಾಂಡ್ ಆರ್ಮಿ, ಕೆಎಸ್ಸಾರ್ಟಿಸಿ, ನಿರ್ಮಿತಿ ಕೇಂದ್ರ, ಕಾರ್ಮಿಕ, ಮೈನಾರಿಟಿ, ಕೈಗಾರಿಕೆ, ಕಾರ್ಮಿಕ, ಆಹಾರ ಇಲಾಖೆ ಸೇರಿದಂತೆ ಕೆಬಿಜೆನ್ನೆಲ್ ಕೊಡೇಕಲ್, ನಾರಾಯಣಪುರ, ಕಕ್ಕೇರಾ, ಹನಾಪುರದ ಎಇಇ ಮಾಹಿತಿ ನೀಡಿದರು.
ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಬಸವರಾಜ ಸಜ್ಜನ್, ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೊಡಿ ಸೇರಿದಂತೆ ಹುಣಸಗಿ ಮತ್ತು ಸುರಪುರ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.