ಸಾರಾಂಶ
ಸುರಪುರ : ಭಾರಿ ಬಿರುಗಾಳಿ ಮಳೆಗೆ 28ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಅಪಾರ ಪ್ರಮಾಣದಲ್ಲಿ ಬೆಳೆಗಳಿಗೆ ಹಾನಿಯಾಗಿದೆ.
ತಾಲೂಕಿನ ಲಕ್ಷ್ಮಿಪುರ, ಏವೂರು, ಚನ್ನಪಟ್ಟಣ, ತಿಪ್ಪನಟಗಿ, ಸುರಪುರ, ದೇವಿಕೇರಾ, ರಕ್ಮಾಪುರ, ಅರಕೇರಾ, ಹೂವಿನಾಳ ಸೇರಿದಂತೆ ವಿವಿಧೆಡೆ 28ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ.
ಮಳೆಗಾಲದಲ್ಲಿ ರಭಸದಿಂದ 57.4 ಮಿ.ಮೀ. ಮಳೆಯಾಗಿದೆ. ಅರಳಹಳ್ಳಿ ಗ್ರಾಮದಲ್ಲಿ ಶಾಂತಮ್ಮ ಅಯ್ಯಣ್ಣ ಅವರಿಗೆ 3 ಎಕರೆಯಲ್ಲಿ ಹತ್ತಿ ಮಳೆಗೆ ಸಂಪೂರ್ಣವಾಗಿ ಹಾಳಾಗಿದೆ. ಇದರಿಂದ ಸಾಲ ಸೂಲ ಮಾಡಿ ಬೆಳೆ ಮಳೆಗೆ ನಾಶವಾಗಿದೆ ಎಂದು ಜಮೀನು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಭತ್ತದ ಗದ್ದೆಗಳು, ತೊಗರಿ, ಶೇಂಗಾದ ಜಮೀನುಗಳಲ್ಲಿ ಜಲಾವೃತವಾಗಿವೆ. ಇನ್ನೆರಡು ದಿನ ಹೀಗೆ ಮಳೆ ಬಂದರೆ ಬೆಳೆಗಳು ನಾಶವಾಗುತ್ತವೆ. ಈಗಾಗಲೇ ನಷ್ಟವಾಗಿರುವ ಬೆಳೆಗಳ ಸರ್ವೇ ಮಾಡಿ ಪರಿಹಾರ ಕಲ್ಪಿಸಬೇಕು ಎಂದು ರೈತ ಸಂಘಟನೆಯ ಮುಖಂಡರು ಮನವಿ ಮಾಡಿದ್ದಾರೆ.
ಮಳೆ ಪ್ರಮಾಣ: ಸುರಪುರ-57.6 ಮಿ.ಮೀ., ಕೆಂಭಾವಿ-9.4, ಮಿ.ಮೀ., ಕಕ್ಕೇರಾ-2.6 ಮಿ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.