ಸಾರಾಂಶ
ನಗರಸಭೆಯ 2ನೇ ಅವಧಿಗಾಗಿ ಅಧ್ಯಕ್ಷ - ಉಪಾಧ್ಯಕ್ಷರ ಮೀಸಲಾತಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಕಟಿಸಿದ್ದು, ಒಂದೆಡೆ ಅಧ್ಯಕ್ಷ ಗಾದಿಗಾಗಿ ಪೈಪೋಟಿ ಶುರುವಾಗಿದ್ದರೆ ಮತ್ತೊಂದೆಡೆ ಅಧಿಕಾರಾವಧಿ 30 ತಿಂಗಳ ಬದಲಾಗಿ 14 ತಿಂಗಳಿಗೆ ಸೀಮಿತವಾಗಲಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದರಿಂದ ಸದಸ್ಯರು ಕಂಗಾಲಾಗಿದ್ದಾರೆ.
ನಾಗರಾಜ್ ನ್ಯಾಮತಿ
ಕನ್ನಡಪ್ರಭ ವಾರ್ತೆ ಸುರಪುರನಗರಸಭೆಯ 2ನೇ ಅವಧಿಗಾಗಿ ಅಧ್ಯಕ್ಷ - ಉಪಾಧ್ಯಕ್ಷರ ಮೀಸಲಾತಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಕಟಿಸಿದ್ದು, ಒಂದೆಡೆ ಅಧ್ಯಕ್ಷ ಗಾದಿಗಾಗಿ ಪೈಪೋಟಿ ಶುರುವಾಗಿದ್ದರೆ ಮತ್ತೊಂದೆಡೆ ಅಧಿಕಾರಾವಧಿ 30 ತಿಂಗಳ ಬದಲಾಗಿ 14 ತಿಂಗಳಿಗೆ ಸೀಮಿತವಾಗಲಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದರಿಂದ ಸದಸ್ಯರು ಕಂಗಾಲಾಗಿದ್ದಾರೆ.
ನಗರಸಭೆಯ 31 ಸದಸ್ಯರಲ್ಲಿ ಬಿಜೆಪಿ - 16, ಕಾಂಗ್ರೆಸ್ - 15 ಸದಸ್ಯರನ್ನು ಹೊಂದಿದೆ. ಮೊದಲಾವಧಿಯಲ್ಲಿ ಬಿಜೆಪಿ 30 ತಿಂಗಳ ಅವಧಿಯನ್ನು ಪೂರ್ಣಗೊಳಿಸಿತ್ತು. ಮೀಸಲಾತಿ ಪರಿಶಿಷ್ಟ ಪಂಗಡ ಮಹಿಳೆಗೆ ಬಂದಿದ್ದರಿಂದ ಅಕ್ಟೋಬರ್ 29, 2020ರಂದು ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿತ್ತು. ಏಪ್ರಿಲ್ 29, 2023 ರಂದು ಅಧಿಕಾರವಧಿ ಸಂಪನ್ನಗೊಂಡಿತ್ತು.ಅವಧಿ 14 ತಿಂಗಳು?:
ಅವಧಿ ಮುಗಿದು 16 ತಿಂಗಳು ಉರುಳಿದ್ದು, ಇನ್ನು ಉಳಿದಿರುವುದು 14 ತಿಂಗಳು ಮಾತ್ರ. 2020 ಆಕ್ಟೋಬರ್ 29ರ ಅಧಿಕಾರ ಸ್ವೀಕಾರ ದಿನದಿಂದ ಇಂದಿನ ಆಗಸ್ಟ್ 2024 ರವರೆಗೆ ಅಧಿಕಾರದ ಚಾಲ್ತಿಯಲ್ಲಿರುತ್ತದೆ. ಅಂದರೆ ಇಲ್ಲಿವರೆಗೆ 46 ತಿಂಗಳಾಗಿವೆ. ಅಲ್ಲಿಗೆ ಇನ್ನು ಉಳಿದಿರುವುದು 14 ತಿಂಗಳು ಮಾತ್ರ ಎಂಬುದಾಗಿ ನಗರಸಭೆಯ ಬಲ್ಲ ಮೂಲಗಳು ತಿಳಿಸಿವೆ.ಅವಧಿ ಚಾಲ್ತಿಯಲ್ಲಿ:
ಚುನಾವಣೆ ಆಯೋಗದ ಸಂಪೂರ್ಣ ಅವಧಿ ಐದು ವರ್ಷ. ಅಧ್ಯಕ್ಷರ ಅವಧಿ ಸ್ವೀಕಾರದ ದಿನಾಂಕದಿಂದ 5 ವರ್ಷದವರೆಗೆ ಚಾಲ್ತಿಯಲ್ಲಿರುತ್ತದೆ. ಸದಸ್ಯರಿಗೆ ಗೌರವಧನ ನೀಡುತ್ತಿದ್ದೇವೆ. ಇದರಿಂದ 14 ತಿಂಗಳು ಅವಧಿ ಮಾತ್ರ ಉಳಿದಿದೆ ಎಂದು ಹೆಸರೇಳಲಿಚ್ಛಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ನೇಮಕ ಪ್ರಕ್ರಿಯೆ ಶೀಘ್ರ:
2024, ಆಗಸ್ಟ್ ತಿಂಗಳಲ್ಲೇ ಅಧ್ಯಕ್ಷರ ಆಯ್ಕೆ ಮಾಡಿದರೆ 14 ತಿಂಗಳು ಅಧಿಕಾಕಾರಾವಧಿ ಮಾತ್ರ ಇರುತ್ತದೆ. ಮತ್ತಷ್ಟು ಮುಂದಕ್ಕೆ ಹೋದಷ್ಟು ಅವಧಿ ಕಡಿತವಾಗುತ್ತಾ ಹೋಗುತ್ತದೆ. ಆದ್ದರಿಂದ ಶೀಘ್ರವೇ ಅಧ್ಯಕ್ಷ - ಉಪಾಧ್ಯಕ್ಷರ ನೇಮಕ ಶೀಘ್ರದಲ್ಲಿಯೇ ಆಗಲಿದೆ ರಾಜಕೀಯ ವಲಯದಲ್ಲಿ ಲೆಕ್ಕಚಾರಗಳು ಜೋರಾಗಿ ನಡೆಯುತ್ತಿವೆ ಎಂಬುದು ಕೆಲ ಸದಸ್ಯರ ಮಾತಾಗಿದೆ.ರ್ಸೇರ್ಪಡೆ ಪರ್ವ:
ಉಪ ಚುನಾವಣೆ ವೇಳೆ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಕೆಲ ಸದಸ್ಯರು ಸೇರ್ಪಡೆಯಾದರೆ, ಬಿಜೆಪಿಯಿಂದ ಕಾಂಗ್ರೆಸ್ಸಿಗೆ ನಾಲ್ವರು ಸದಸ್ಯರು ಸೇರ್ಪಡೆಯಾಗಿದ್ದಾರೆ. ಈ ವಿಚಾರ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಮಾಡುವ ಸಂದರ್ಭದಲ್ಲಿ ಮುನ್ನಲೆಗೆ ಬರಲಿದೆ. ಸದಸ್ಯರು ಯಾರ ಪರವಾಗಿ ಮತ ಚಲಾಯಿಸುತ್ತಾರೆ ಎಂಬುದನ್ನು ಸಮಯ, ಅಂದಿನ ಪರಿಸ್ಥಿತಿ ನಿರ್ಧರಿಸಲಿದೆ.ಉಪಾಧ್ಯಕ್ಷ ಸ್ಥಾನ:
ನಗರಸಭೆ ಉಪಾಧ್ಯಕ್ಷ ಸ್ಥಾನವು ಎಸ್‌ಟಿ ಪುರಷರಿಗೆ ಮೀಸಲಾಗಿದ್ದರಿಂದ ಆಯ್ಕೆಯಾದ 31 ಸದಸ್ಯರಲ್ಲಿ ಓರ್ವ ಮಾತ್ರ ಎಸ್ಟಿ ಅಭ್ಯರ್ಥಿ ಇದ್ದು, ಅವರಿಗೆ ಆ ಸ್ಥಾನ ಒಲಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ.ಮಹಿಳಾ ಸದಸ್ಯರು:
ಹಿಂದುಳಿದ ವರ್ಗದ ಮಹಿಳೆಯರಿಗೆ ಅಧ್ಯಕ್ಷ ಗಾದಿ ನಿಗದಿ ಮಾಡಿದ್ದರಿಂದ ಕುರುಬ ಸಮುದಾಯದಿಂದ ಮೂವರು ಮಹಿಳೆಯರು, ಮಡಿವಾಳ ಸಮುದಾಯದಿಂದ ಓರ್ವ ಮಹಿಳೆ, ಮುಸ್ಲಿಂ ಸಮುದಾಯದಿಂದ ಮೂವರು ಮಹಿಳೆಯರಿದ್ದರೆ, ಬಿಜೆಪಿಯಿಂದ ಓರ್ವ ಮಹಿಳೆ ಮಾತ್ರ ಇದ್ದಾರೆ. ಒಟ್ಟು ಎಂಟು ಮಹಿಳೆಯರಲ್ಲಿ ಯಾರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.