ಸಾರಾಂಶ
ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್‌ದಾಸ್ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗವು ಪ.ಜಾತಿಗಳ ಸಮಗ್ರ ಸಮೀಕ್ಷೆ-೨೦೨೫ ಮೊದಲ ಹಂತದ ಸಮೀಕ್ಷೆ ಮೇ.೫ರಿಂದ ೧೭ರ ತನಕ ನಡೆಯಲಿದೆ ಎಂದು ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್‌ದಾಸ್ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗವು ಪ.ಜಾತಿಗಳ ಸಮಗ್ರ ಸಮೀಕ್ಷೆ-೨೦೨೫ ಮೊದಲ ಹಂತದ ಸಮೀಕ್ಷೆ ಮೇ.೫ರಿಂದ ೧೭ರ ತನಕ ನಡೆಯಲಿದೆ ಎಂದು ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.ಪಟ್ಟಣದ ಗುಂಡಾಂಜನೇಯ ಸ್ವಾಮಿ ದೇವಾಲಯದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ದತ್ತಾಂಶಗಳ ಸಂಗ್ರಹಣೆ ಕಾರ್ಯಕ್ಕೆ ಸೋಮವಾರ ಬೆಳಗ್ಗೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕ ಸರ್ಕಾರದ ಆದೇಶದ ಅನ್ವಯ ಪ.ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ಉದ್ದೇಶದ ಪರಿಶಿಷ್ಟ ಜಾತಿ ಪ್ರತಿಯೊಂದು ಕುಟುಂಬದ ದತ್ತಾಂಶ ಸಂಗ್ರಹಣೆಯನ್ನು ಶಿಕ್ಷಕರಿಗೆ ಈಗಾಗಲೇ ನೀಡಿರುವ ತರಬೇತಿಯಂತೆ ನಡೆಸಬೇಕು. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ, ಲಂಬಾಣಿ ಸೇರಿ ೧೦೧ ಜಾತಿಗಳು ಪ.ಜಾತಿಗೆ ಒಳಪಡುತ್ತವೆ. ಪ.ಪಂ ವ್ಯಾಪ್ತಿ ಮತ್ತು ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಸಮೀಕ್ಷೆ ನಡೆಸಲು ಕ್ರಮವಹಿಸಲಾಗಿದೆ ಎಂದು ಹೇಳಿದರು.ಗೃಹ ಸಚಿವರ ವಿಶೇಷ ಅಧಿಕಾರಿ ಡಾ.ಕೆ ನಾಗಣ್ಣ ಮಾತನಾಡಿ, ಗೃಹ ಸಚಿವ ಡಾ.ಜಿ ಪರಮೇಶ್ವರ್‌ರವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಪ.ಜಾತಿಯ ಒಳಮೀಸಲಾತಿ ದತ್ತಾಂಶ ಸಂಗ್ರಹಣೆ ಕಾರ್ಯವು ಒಳ ಮೀಸಲಾತಿ ಜಾರಿಗೆ ಬಹುಮುಖ್ಯ ಪಾತ್ರವಹಿಸುತ್ತದೆ. ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯ ಸಂಪೂರ್ಣ ವಿವರವನ್ನು ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.ಈ ವೇಳೆ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಬಿಇಓ ನಟರಾಜ್, ಪ.ಪಂ ಅಧ್ಯಕ್ಷೆ ಅನಿತಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಮಂಜುನಾಥ್, ಪ.ಪಂ ಮುಖ್ಯಾಧಿಕಾರಿ ಉಮೇಶ್, ಸದಸ್ಯರಾದ ಕೆ.ಆರ್ ಓಬಳರಾಜು, ಪ್ರದೀಪ್‌ಕುಮಾರ್, ಪುಟ್ಟನರಸಪ್ಪ, ಮಂಜುಳಾ ಗೋವಿಂದರಾಜು, ಮುಖಂಡರಾದ ದಾಡಿ ವೆಂಕಟೇಶ್, ಶಿವರಾಮ್, ಜಯರಾಮಣ್ಣ, ವೀರಕ್ಯಾತಯ್ಯ ಸೇರಿದಂತೆ ಇತರರು ಇದ್ದರು.