ಸಾರಾಂಶ
ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಿಂದ ಯಾವುದೇ ಜಾತಿ ಧರ್ಮಕ್ಕೆ ತೊಂದರೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಿಂದ ಯಾವುದೇ ಜಾತಿ ಧರ್ಮಕ್ಕೆ ತೊಂದರೆ ಕೊಡುವ ಪ್ರಶ್ನೆ ಇಲ್ಲ. ಇದು ಜನರ ಆತ್ಮಸಾಕ್ಷಿಗೆ ಬಿಟ್ಟಿರುವ ವಿಷಯ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಹೇಳಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯಬೇಕಾಗಿದೆ. ಅದರ ಆಧಾರದಲ್ಲಿ ಯಾವ ಯಾವ ಸಮುದಾಯಕ್ಕೆ ಏನು ಯೋಜನೆ ರೂಪಿಸಬೇಕೆಂದು ಚಿಂತಿಸಬೇಕಾಗಿದೆ. ಇದು ಸರ್ಕಾರದ ಉದ್ದೇಶ. ಅದಕ್ಕಾಗಿ ಈ ಸಮೀಕ್ಷೆ ಅನುಕೂಲ ಆಗಲಿದೆ. ಸಮೀಕ್ಷೆಯಲ್ಲಿ 1.75 ಲಕ್ಷ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮೀಕ್ಷೆಯಿಂದ ರಾಜ್ಯದ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಅನುಕೂಲ ಆಗಲಿದೆ. ಸಮೀಕ್ಷೆ ಸಂದರ್ಭ ಇಂತಹದ್ದೇ ಜಾತಿ, ಧರ್ಮ ನಮೂದಿಸಿ ಅಂತ ಸರ್ಕಾರ ಹೇಳಿಲ್ಲ. ಅದು ಪ್ರತಿಯೊಬ್ಬರ ಮನಸ್ಸಿಗೆ ಬಿಟ್ಟಿದ್ದು. ಅವರ ಮನಸ್ಸಿನಲ್ಲಿರುವ ಜಾತಿ ಧರ್ಮಗಳನ್ನು ದಾಖಲಿಸುತ್ತಾರೆ. ಬಿಜೆಪಿಯವರಿಗೆ ಗೊಂದಲ ಸೃಷ್ಟಿವುದೇ ಕೆಲಸ. ಅಭಿವೃದ್ಧಿ ಕೆಲಸಗಳನ್ನು ಹಾಳು ಮಾಡುವುದೇ ಅವರ ಉದ್ದೇಶ. ಜನರು ಈಗ ಬುದ್ಧಿವಂತರಿದ್ದಾರೆ. ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಜನರು ಸರಿಯಾದ ಉತ್ತರ ಕೊಡುತ್ತಾರೆ ಎಂದರು.ವಿರೋಧ ವ್ಯಕ್ತಪಡಿಸಿಲ್ಲ:
ಸಮೀಕ್ಷೆಯಲ್ಲಿ ವಿವಿಧ ಜಾತಿಗಳ ಮುಂದೆ ಕ್ರಿಶ್ಚಿಯನ್ ಪದ ಬಳಸಿರುವುದಕ್ಕೆ ಸಚಿವ ಸಂಪುಟದಲ್ಲಿ ವಿರೋಧ ಇದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಕಾಂತರಾಜು ವರದಿ ಸಂದರ್ಭದಲ್ಲಿ ಸಾಕಷ್ಟು ಜನರು ಎಸ್.ಸಿ. ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಎಂದು ಬರೆಸಿದ್ದರು. ಸಮೀಕ್ಷೆಯಲ್ಲಿ ಅಧಿಕಾರಿಗಳು ಕೇಳದಿದ್ದರೂ ಜನರೇ ಬರೆಸಿದ್ದರು. ಹಿಂದುಳಿದ ವರ್ಗಗಳ ಆಯೋಗದ ಆಯುಕ್ತರು ಕ್ರಿಶ್ಚಿಯನ್ ಪದ ಸೇರಿಸಲು ಅವಕಾಶ ನೀಡಿದರೆ ಒಳ್ಳೆಯದೆಂದು ಸಲಹೆ ಮಾಡಿದ್ದರು. ಹೀಗಾಗಿ ಈ ಸಮೀಕ್ಷೆ ಸಂದರ್ಭ ಅದನ್ನು ಸೇರಿಸಿದ್ದೆವು. ಆದರೆ ಎಲ್ಲರೂ ಅದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹೀಗಾಗಿ ಆ ಪದವನ್ನು ಬೇಡ ಎಂದು ಕೈಬಿಡಲಾಗಿದೆ. ಅದನ್ನು ಕೈಬಿಟ್ಟ ಮೇಲೂ ಅದರ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ವಿರೋಧ ಪಕ್ಷದವರು ಅದನ್ನೇ ರಾಜಕೀಯಕ್ಕಾಗಿ ಗೊಂದಲ ಮಾಡಿದ್ದಾರೆ ಎಂದು ಹೇಳಿದರು.