ಸಮೀಕ್ಷೆ: ಜಿಲ್ಲೆಯ ನ್ಯಾಮತಿ ತಾಲೂಕಿಗೆ ಮೊದಲ ಸ್ಥಾನ: ತಹಸೀಲ್ದಾರ್‌ ಕವಿರಾಜ್‌

| Published : Oct 05 2025, 01:00 AM IST

ಸಮೀಕ್ಷೆ: ಜಿಲ್ಲೆಯ ನ್ಯಾಮತಿ ತಾಲೂಕಿಗೆ ಮೊದಲ ಸ್ಥಾನ: ತಹಸೀಲ್ದಾರ್‌ ಕವಿರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯವ್ಯಾಪಿ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯ ತಾಲೂಕಿನಲ್ಲಿ ಪ್ರಗತಿಯಲಿದ್ದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕು ಮೊದಲ ಸ್ಥಾನದಲ್ಲಿದೆ ಎಂದು ತಹಸೀಲ್ದಾರ್‌ ಎಂ.ಪಿ.ಕವಿರಾಜ್‌ ಮೆಚ್ಚುಗೆ ವ್ಯಕ್ತಪಡಿಸಿ ಶಿಕ್ಷಕರ ಕಾರ್ಯವೈಖರಿಯನ್ನು ಪ್ರಶಂಸಿದ್ದಾರೆ.

ಕನ್ನಡಪ್ರಭ ವಾರ್ತೆ ನ್ಯಾಮತಿ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯವ್ಯಾಪಿ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯ ತಾಲೂಕಿನಲ್ಲಿ ಪ್ರಗತಿಯಲಿದ್ದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕು ಮೊದಲ ಸ್ಥಾನದಲ್ಲಿದೆ ಎಂದು ತಹಸೀಲ್ದಾರ್‌ ಎಂ.ಪಿ.ಕವಿರಾಜ್‌ ಮೆಚ್ಚುಗೆ ವ್ಯಕ್ತಪಡಿಸಿ ಶಿಕ್ಷಕರ ಕಾರ್ಯವೈಖರಿಯನ್ನು ಪ್ರಶಂಸಿದ್ದಾರೆ.

ನ್ಯಾಮತಿ ತಹಸೀಲ್ದಾರ್‌ ಕಚೇರಿಯಲ್ಲಿ ತಾಲೂಕಿನಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಪ್ರಶಂಸಾ ಪತ್ರ ನೀಡಿ ಮಾತನಾಡಿದರು.

ತಾಲೂಕಿನಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ 218 ಜನರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷಾ ತರಬೇತಿ ನೀಡಿದ್ದು ತಾಂತ್ರಿಕ ಸಮಸ್ಯೆಗಳ ನಡುವೆಯೂ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ತಾಲೂಕಿನಲ್ಲಿ 23654 ಮನೆಗಳಿದ್ದು ಅವುಗಳಲ್ಲಿ ಮಂಗಳವಾರ ಮಧ್ಯಾಹ್ನಕ್ಕೆ 15202 ಮನೆಗಳ ಸಮೀಕ್ಷಾ ಕಾರ್ಯ ಆಗಿದ್ದು ಶೇ.64.27 ಸಮೀಕ್ಷೆ ನಡೆಸಲಾಗಿದೆ ಎಂದು ಹೇಳಿದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಚೆನ್ನಾಗಿ ನಡೆಯುತ್ತಿದ್ದು ನಮ್ಮ ಗಣತಿದಾರರು ಸಕ್ರಿಯರಾಗಿದ್ದಾರೆ. ಎಲ್ಲರೂ ಕೂಡ ಬೆಳಿಗ್ಗೆಯಿಂದಲೇ ಫೀಲ್ಡ್‌ನಲ್ಲಿರುತ್ತಾರೆ. ಕುಗ್ರಾಮಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯಿದ್ದು ಇಂತಹ ಗ್ರಾಮಗಳಲ್ಲಿ ನಮ್ಮ ಗಣತಿದಾರರು ಜನರ ಮನವೊಲಿಸಿ ನೆಟ್‌ವರ್ಕ್‌ ಸಿಗುವ ಸ್ಥಳಕ್ಕೆ ಕರೆಸಿಕೊಂಡು ಸಮೀಕ್ಷೆ ಕಾರ್ಯವನ್ನು ಮುಗಿಸಿದ್ದಾರೆ. ತಾಲೂಕಿನಲ್ಲಿ ಎಲ್ಲಾ ಶಿಕ್ಷಕರು ಆಸಕ್ತಿವಹಿಸಿ ಮನೆ ಮನೆಗೆ ತೆರಳಿ ಜವಾಬ್ದಾರಿಯಿಂದ ಸಮೀಕ್ಷೆ ಕಾರ್ಯ ಮಾಡುತ್ತಿರುವುದರಿಂದ ನಾವು ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ, ಗ್ರಾಮೀಣ ಭಾಗದಲ್ಲಿ ಈ ಸಮೀಕ್ಷೆ ಕಾರ್ಯಕ್ಕೆ ಯಾರೊಬ್ಬರು ನಿರಾಕರಣೆ ಮಾಡಿರುವುದು ಕಂಡು ಬಂದಿಲ್ಲ ಎಂದು ಹೇಳಿದರು.

ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ ಪಿಡಿಒಗಳು, ಮೊದಲ ಹಂತದ ನೌಕರರು ಸೇರಿದಂತೆ ಕೊನೆಯ ಹಂತದ ನೌಕರರು ಸಮೀಕ್ಷಾ ಕಾರ್ಯದಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುವ ಮೂಲಕ ಸಹಕಾರ ನೀಡಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಇತರೆ ಚುನಾವಣೆ ಹಾಗೂ ಗಣತಿಯ ಸಮೀಕ್ಷೆಯಲ್ಲೂ ಹೊಂದಾಣಿಕೆಯಿಂದ ಕೆಲಸಗಳನ್ನು ಮಾಡೋಣವೆಂದು ಹೇಳಿದರು.

ಸಮಾಜಿಕ, ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಅವದಿಗೆ ಮೊದಲೆ ಸಮೀಕ್ಷೆಯನ್ನು ಪೂರ್ಣಗೊಳಿಸಿದ ಶಿಕ್ಷಕರಾದ ಬಿ.ಜಿ.ಚೈತ್ರಾತಿಪ್ಪೇಸ್ವಾಮಿ, ಕೆ.ಗಾಯಿತ್ರಿ, ಬಿ.ಸಿ.ದೇವರಾಜ್‌, ಎಂ.ಸಿ.ಚನ್ನೇಶ್‌ಗೆ ತಹಸೀಲ್ದಾರ್‌ ಕವಿರಾಜ್‌ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.

ಶಿಕ್ಷಣ ಇಲಾಖೆಯ ಮುದ್ದನಗೌಡ, ಎಂ.ತಿಪ್ಪೇಸ್ವಾಮಿ, ಪ್ರಸನ್ನಕುಮಾರ್‌, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ರಾಮಪ್ಪ, ಬಿಸಿಎಂ ವಸತಿ ಶಾಲೆಯ ಸೀಮಾ ಮತ್ತಿತರರು ಇದ್ದರು.