ಜಿಲ್ಲೆಯಲ್ಲಿ ೯೬೨ ಕೆರೆಗಳ ಸರ್ವೇ: ಡೀಸಿ ಡಾ.ಕುಮಾರ್

| Published : Jan 21 2024, 01:32 AM IST

ಸಾರಾಂಶ

ಕಾವೇರಿ ಹಾಗೂ ಹೇಮಾವತಿ ನಾಲಾ ವ್ಯಾಪ್ತಿಗೆ ಬರುವ ಕೆರೆಗಳ ಒತ್ತುವರಿ ತೆರವುಗೊಳಿಸಲು ಬೇಕಿರುವ ಅನುದಾನದ ಬಗ್ಗೆ ಯೋಜನೆ ಸಿದ್ಧಪಡಿಸಿ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿ. ಅನುದಾನವನ್ನು ಹಂತ, ಹಂತವಾಗಿ ಬಿಡುಗಡೆ ಮಾಡಲಾಗುವುದು.

ಒತ್ತುವರಿ ತೆರವುಗೊಳಿಸಿ ಈಗಲೇ ಸಂರಕ್ಷಿಸಿಕೊಳ್ಳಲು ಸೂಚನೆ । ಮತ್ತೆ ಸರ್ವೇಗೆ ಬರೆದರೆ ಇಲಾಖೆಯವರೇ ಹಣ ಕಟ್ಟುವಂತೆ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ವಿವಿಧ ಇಲಾಖೆ ವ್ಯಾಪ್ತಿಗೆ ಬರುವ ೯೬೨ ಕೆರೆಗಳ ಸರ್ವೇ ನಡೆಸಲಾಗಿದೆ. ಇಲಾಖೆಯವರು ಒತ್ತುವರಿ ತೆರವುಗೊಳಿಸಿ ಸಂರಕ್ಷಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಕೆರೆಗಳ ಸರ್ವೇ ನಡೆಸಿ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ. ಅವುಗಳನ್ನು ಸಂರಕ್ಷಿಸುವುದು ಆಯಾ ಇಲಾಖೆಗಳ ಜವಾಬ್ದಾರಿಯಾಗಿದೆ. ಪುನಃ ಒತ್ತುವರಿಯಾಗಿ ಸರ್ವೇ ಮಾಡಿಕೊಡುವಂತೆ ಪತ್ರ ಬರೆದರೆ ಆಯಾ ಇಲಾಖೆಯವರು ಹಣ ಪಾವತಿಸಿ ಸರ್ವೇ ಮಾಡಿಸಿಕೊಳ್ಳಬೇಕು ಎಂದರು.

ಕಾವೇರಿ ಹಾಗೂ ಹೇಮಾವತಿ ನಾಲಾ ವ್ಯಾಪ್ತಿಗೆ ಬರುವ ಕೆರೆಗಳ ಒತ್ತುವರಿ ತೆರವುಗೊಳಿಸಲು ಬೇಕಿರುವ ಅನುದಾನದ ಬಗ್ಗೆ ಯೋಜನೆ ಸಿದ್ಧಪಡಿಸಿ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿ. ಅನುದಾನವನ್ನು ಹಂತ, ಹಂತವಾಗಿ ಬಿಡುಗಡೆ ಮಾಡಲಾಗುವುದು. ಪ್ರತಿ ತಿಂಗಳೂ ಒತ್ತುವರಿ ತೆರವುಗೊಳಿಸಿ ನಿಗದಿತ ಗುರಿ ಸಾಧಿಸುವಂತೆ ಸೂಚಿಸಿದರು.

ನರೇಗಾ ಯೋಜನೆಯಡಿ ಕೆರೆಗಳನ್ನು ಸುಂದರಗೊಳಿಸುವ ಕಾಮಗಾರಿಗಳನ್ನು ಆದ್ಯತೆ ಮೇಲೆ ತೆಗೆದುಕೊಳ್ಳಬೇಕು. ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಕೆರೆಗಳ ಸುತ್ತ ಒತ್ತುವರಿ ತೆರವುಗೊಳಿಸುವುದು. ಟ್ರೆಂಚ್ ನಿರ್ಮಾಣ ಮಾಡಿದ ನಂತರ ಕೆರೆಗಳ ಸುತ್ತ ಗಿಡಗಳನ್ನು ನೆಡಲು ಕ್ರಮವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಧನುಷ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಜಿಲ್ಲಾ ಭೂ ಸ್ವಾಧೀನಾಧಿಕಾರಿ ಉಮೇಶ್ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.