ಸಾರಾಂಶ
ಸುಕಾಲಪೇಟೆಯಿಂದ ತಿಮ್ಮಾಪುರಕ್ಕೆ ಹೋಗುವ ರಸ್ತೆಯನ್ನು ಕೆಲವರು ಹಾಳು ಮಾಡಿ ರೈತರು ತಿರುಗಾಡದಂತೆ ಮಾಡಿದ್ದಾರೆ. ಈ ರಸ್ತೆ ಕಂದಾಯ ಇಲಾಖೆ ನಕಾಶೆಯಲ್ಲಿದೆ
ಸಿಂಧನೂರು: ಸುಕಾಲಪೇಟೆಯಿಂದ ತಿಮ್ಮಾಪುರಕ್ಕೆ ಹೋಗುವ ರಸ್ತೆಯನ್ನು ಕೆಲವರು ಹಾಳು ಮಾಡಿ ರೈತರು ತಿರುಗಾಡದಂತೆ ಮಾಡಿದ್ದಾರೆ. ಈ ರಸ್ತೆ ಕಂದಾಯ ಇಲಾಖೆ ನಕಾಶೆಯಲ್ಲಿದ್ದು, ನೂರಾರು ವರ್ಷಗಳಿಂದ ರೈತರು ಇದೇ ರಸ್ತೆ ಮೇಲೆ ತಿರುಗಾಡುತ್ತಾ ಬಂದಿದ್ದಾರೆ. ಆದರೆ ಈಚೆಗೆ ಕೆಲವರು ಈ ರಸ್ತೆಯನ್ನು ಹದಗೆಡಿಸಿ ತಿರುಗಾಡಲು ಬಾರದಂತೆ ಮಾಡಿದ್ದಾರೆ. ಕೂಡಲೇ ಸರ್ವೇ ನಡೆಸಿ ದಾರಿ ಸಮಸ್ಯೆ ಬಗೆಹರಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಒತ್ತಾಯಿಸಿದರು.
ಸುಕಾಲಪೇಟೆ ಗ್ರಾಮಸ್ಥರೊಂದಿಗೆ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ರಸ್ತೆಯನ್ನು ಕರ್ನಾಟಕ ಸರ್ಕಾರದ ಕಾಡಾ ಇಲಾಖೆಯಿಂದ ಮತ್ತು ಎಂ.ಪಿ.ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಸ.ನಂ.20ರ ಮಾಲೀಕರಾದ ಪೊಲೀಸ್ ಕಾನ್ಸಟೇಬಲ್ ಅವರ ತಾಯಿ ಲಕ್ಷ್ಮೀ ಈರಪ್ಪ, ಸ.ನಂ.44ರ ಹನುಮಂತ ಹಿರೇಮಲ್ಲಯ್ಯ ಹಾಗೂ ಸ.ನಂ.44ರ ಕರಿಯಪ್ಪ ನರಸಪ್ಪ ಎನ್ನುವವರು ಸೇರಿ ರಸ್ತೆ ಕೆಡಿಸಿ ತಿರುಗಾಡದಂತೆ ಮಾಡಿದ್ದಾರೆ. ಇದರಿಂದಾಗಿ ನೂರಾರು ರೈತರಿಗೆ ತೊಂದರೆಯಾಗಿದೆ. ಕೂಡಲೇ ತಹಸೀಲ್ದಾರರು ಮುತುವರ್ಜಿ ವಹಿಸಿ ದಾರಿ ಸಮಸ್ಯೆ ಒಂದು ವಾರದೊಳಗೆ ಬಗೆಹರಿಸಬೇಕೆಂದು ಕೋರಿದ್ದಾರೆ. ಸುಕಾಲಪೇಟೆ ರೈತರಾದ ಜಿ.ಈರೇಶ, ಹನುಮಂತ, ಬಿ.ನರಸಪ್ಪ, ಹೆಚ್.ಶರಣಪ್ಪ, ಶೇಖರಪ್ಪ, ಮಾಳಪ್ಪ, ನಾಗರಾಜ, ತಿಪ್ಪಣ್ಣ ಸೇರಿದಂತೆ ಅನೇಕರು ಇದ್ದರು.