ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಸಮೀಕ್ಷೆ: ಹಾಲಪ್ಪ ಆಚಾರ್

| Published : Sep 23 2025, 01:04 AM IST

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಸಮೀಕ್ಷೆ: ಹಾಲಪ್ಪ ಆಚಾರ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ನಡೆಯುತ್ತಿರುವುದು ಜಾತಿ ಗಣತಿಯಲ್ಲ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎಂದು ಕೆಲವು ಸಚಿವರು ಹೇಳಿದರೆ, ಮತ್ತೆ ಕೆಲವು ಸಚಿವರು ಇನ್ನೇನನ್ನೋ ಹೇಳುತ್ತಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಕಿಡಿಕಾರಿದ್ದಾರೆ.

ಕೊಪ್ಪಳ: ಕಳೆದೆರಡು ವರ್ಷಗಳಿಂದ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡದ ರಾಜ್ಯ ಸರ್ಕಾರ ತನ್ನ ಆಡಳಿತ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಮಾನ್ಯತೆಯೇ ಇಲ್ಲದ ಜಾತಿ ಸಮೀಕ್ಷೆ ಮಾಡುತ್ತಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವುದು ಜಾತಿ ಗಣತಿಯಲ್ಲ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎಂದು ಕೆಲವು ಸಚಿವರು ಹೇಳಿದರೆ, ಮತ್ತೆ ಕೆಲವು ಸಚಿವರು ಇನ್ನೇನನ್ನೋ ಹೇಳುತ್ತಾರೆ. ಅಷ್ಟೇ ಅಲ್ಲ, ಜಾತಿ ಸಮೀಕ್ಷೆಯಿಂದ ಏನೂ ಆಗಲ್ಲ ಎನ್ನುತ್ತಾರೆ. ಅಷ್ಟಕ್ಕೂ ಜಾತಿ ಮತ್ತು ಜನಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲವೇ ಇಲ್ಲ. ಆದರೂ ಜನರ ದಿಕ್ಕು ತಪ್ಪಿಸಲು ಈ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆಯೇ ಕಾಂತರಾಜ ವರದಿ ಅನ್ವಯ ಜಾರಿ ಮಾಡಲು ಮುಂದಾಗಿದ್ದರು. ಆನಂತರ ಅದನ್ನು ಕೈಬಿಟ್ಟು ಮತ್ತೆ ಹೊಸ ನಾಟಕ ಪ್ರಾರಂಭಿಸಿದ್ದಾರೆ. ಬ್ರಾಹ್ಮಣ ಕ್ರಿಶ್ಚಿಯನ್, ರೆಡ್ಡಿ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಎಂದೆಲ್ಲ ಸೇರಿಸಿದ್ದರು. ಜನರು ರೊಚ್ಚಿಗೆದ್ದ ಮೇಲೆ ಅದನ್ನು ಕೈಬಿಟ್ಟರು. ಈಗಲೂ ನಡೆಯುತ್ತಿರುವ ಜಾತಿ ಸಮೀಕ್ಷೆಗೆ ನಮ್ಮ ಸಂಪೂರ್ಣ ವಿರೋಧವಿದೆ. ಸಮಾಜವನ್ನು ಒಡೆದು ಯಾವ ಪುರುಷಾರ್ಥಕ್ಕೆ ಸಮೀಕ್ಷೆ ಮಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.

ಹಿಂದೂ ಧರ್ಮ ಬರೆಸಿ: ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯ ವೇಳೆ ಧರ್ಮ ಕಾಲಂನಲ್ಲಿ ಹಿಂದೂ ಧರ್ಮ ಎಂದು ಹಾಗೂ ಜಾತಿಯ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದೇ ಬರೆಸಿ, ಉಳಿದಂತೆ ನಿಮ್ಮ ನಿಮ್ಮ ಉಪಜಾತಿ ಬರೆಸಿ ಎಂದರು.

ಬರಿ ವೀರಶೈವ, ಬರಿ ಲಿಂಗಾಯತ ಎಂದು ಸಹ ಬರೆಸದೇ ವೀರಶೈವ ಲಿಂಗಾಯತ ಎಂದು ಬರೆಸಿ. ರಡ್ಡಿ ಸಮಾಜ ಬಾಂಧವರು ವೀರಶೈವ ಲಿಂಗಾಯತ ರಡ್ಡಿ ಎಂದು ಬರೆಯಿಸಿ ಎಂದು ಸಹ ಹೇಳಿದರು.

ತಗ್ಗಿದ ತೆರಿಗೆ ಭಾರ: ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಭರವಸೆಯಂತೆ ದೀಪಾವಳಿಗೂ ಮುನ್ನವೇ ಜಿಎಸ್‌ಟಿ ಇಳಿಕೆ ಮಾಡುವ ಮೂಲಕ ಜನರಿಗೆ ಮಾರುಕಟ್ಟೆಯ ಹೊರೆ ತಗ್ಗಿಸಿದ್ದಾರೆ. ಇದರಿಂದ ಜನರು ಬಹಳ ಖುಷಿಯಾಗಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಜೀ. ವೀರಪ್ಪ ಕೆಸರಟ್ಟಿ, ಶರಣು ತಳ್ಳಿಕೇರಿ ಇದ್ದರು.

ರಾಯರಡ್ಡಿ ಜಾತಿ ಸರ್ಟಿಫಿಕೆಟ್‌ ತೋರಿಸಲಿ: ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಜನರಿಗೆ ಏನೇನೋ ಹೇಳುವ ಬದಲು ತಮ್ಮ ಜಾತಿ ಸರ್ಟಿಫಿಕೆಟ್‌ ತೋರಿಸಲಿ ಎಂದು ಹಾಲಪ್ಪ ಆಚಾರ ಸವಾಲು ಹಾಕಿದರು.

ತಮಗೆ ಜಾತಿಯೇ ಇಲ್ಲ, ನಾನು ಯಾವುದೇ ಧರ್ಮ ಬರೆಸುವುದಿಲ್ಲ, ಲಿಂಗಾಯತ ಎನ್ನುವುದು ಧರ್ಮವೇ ಅಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಪಾಲ್ಗೊಂಡಿದ್ದರಲ್ಲ? ಎಂದು ಪ್ರಶ್ನೆ ಮಾಡಿದರು.

ಸಮೀಕ್ಷೆಯಿಂದ ಏನೂ ಆಗುವುದಿಲ್ಲ ಎಂದು ರಾಯರಡ್ಡಿ ಅವರೇ ಹೇಳಿದ್ದಾರೆ. ಹಾಗಾದರೆ ಯಾವ ಪುರುಷಾರ್ಥಕ್ಕೆ ಸಮೀಕ್ಷೆ ಮಾಡುತ್ತಿದ್ದೀರಿ? ಎಂದು ಕಿಡಿಕಾರಿದರು.