ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆನಗರದಲ್ಲಿ ಆರಂಭಗೊಂಡಿರುವ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಗಣತಿ ಕಾರ್ಯ ಮೊದಲ ಎರಡು ದಿನ ಮಂದಗತಿಯಲ್ಲಿ ಸಾಗಿದ್ದರೂ, ಕೆಲವು ತಾಂತ್ರಿಕ ಸಮಸ್ಯೆಗಳನ್ನು ಅಧಿಕಾರಿಗಳು ಪರಿಶೀಲಿಸಿ ಪರಿಹರಿಸಿರುವುದರಿಂದ ಈಗ ಕಾರ್ಯ ಸುಗಮವಾಗಿ ನಡೆಯುತ್ತಿದೆ.ಶನಿವಾರದಿಂದ ಗಣತಿದಾರರು ಉತ್ಸಾಹದಿಂದಲೇ ಕಾರ್ಯನಿರ್ವಹಿಸುತ್ತಿರುವುದು ನಗರದಲ್ಲಿ ಕಂಡುಬಂತು. ಸರ್ವರ್ ವೇಗ ಹೆಚ್ಚಿಸಿದ ಹಿನ್ನೆಲೆಯಲ್ಲಿ ಗಣತಿ ಪ್ರಕ್ರಿಯೆ ಶೀಘ್ರಗತಿಯಲ್ಲಿದೆ. ಒಂದು ಮನೆಗೆ ಗಣತಿ ಪೂರ್ಣಗೊಳಿಸಲು ಸರಾಸರಿ 25ರಿಂದ 30 ನಿಮಿಷಗಳು ಬೇಕಾಗುತ್ತಿದೆ. ಕುಟುಂಬದ ಸದಸ್ಯರು ಮಾಹಿತಿ ನೀಡುವ ವೇಗಕ್ಕೆ ಅನುಗುಣವಾಗಿ ಗಣತಿ ಸಮಯ ಬದಲಾಗುತ್ತಿದೆ. ಕೆಲವೆಡೆ ಕುಟುಂಬದ ಯಜಮಾನರು ಮನೆಯಲ್ಲಿ ಇಲ್ಲದಿರುವುದು, ಮಹಿಳೆಯರು ಮಾಹಿತಿ ನೀಡಲು ಹಿಂಜರಿಯುವುದು, ನೆರೆಹೊರೆಯವರ ಶಿಫಾರಸಿನ ಬಳಿಕವೇ ಮಾಹಿತಿ ನೀಡುವಂತಹ ಸಂದರ್ಭಗಳು ಎದುರಾಗುತ್ತಿವೆ. ಆದಾಗ್ಯೂ, ಜನರು ಗಣತಿದಾರರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಿದ್ದಾರೆ ಎಂದು ಗಣತಿದಾರರು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ನಿಗದಿತ ಅವಧಿಯೊಳಗೆ ಗಣತಿ ಪೂರ್ಣಗೊಳಿಸಲೇಬೇಕಿರುವುದರಿಂದ ನಾವು ಸಹ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಅನೇಕ ಗಣತಿದಾರರು ತಿಳಿಸಿದ್ದಾರೆ.