ಸಮೀಕ್ಷೆ ಕಾರ್ಯಕ್ಕೆ ಚಾಲನೆ: ಸಹಕರಿಸಲು ಡಿಸಿ ಮನವಿ

| Published : Sep 23 2025, 01:03 AM IST

ಸಾರಾಂಶ

ಸೆ.22ರಿಂದ ಅ.7 ರವರೆಗೆ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ಕಾರ್ಯವನ್ನು ಕೈಗೊಂಡಿದ್ದು, ಗಣತಿದಾರರು ಮನೆಗೆ ಬಂದಾಗ ನಾಗರೀಕರು ಪೂರಕವಾಗಿ ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮನವಿ ಮಾಡಿದ್ದಾರೆ.

- ಜಿಲ್ಲೆಯಲ್ಲಿ 4462 ಬ್ಲಾಕ್ಸ್‌, ಗಣತಿ ಸಿಬ್ಬಂದಿಗೆ ಸೂಕ್ತ ತರಬೇತಿ । ಸಮೀಕ್ಷೆಗೆಂದೇ ಹಿಂದುಳಿದ ವರ್ಗದ ಆಯೋಗದಿಂದ ಆ್ಯಪ್

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸೆ.22ರಿಂದ ಅ.7 ರವರೆಗೆ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ಕಾರ್ಯವನ್ನು ಕೈಗೊಂಡಿದ್ದು, ಗಣತಿದಾರರು ಮನೆಗೆ ಬಂದಾಗ ನಾಗರೀಕರು ಪೂರಕವಾಗಿ ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮನವಿ ಮಾಡಿದರು.

ಸೋಮವಾರ ನಗರದ ಎಸ್.ಎಸ್. ಬಡಾವಣೆ ಬಿ ಬ್ಲಾಕ್‌ 12ನೇ ಕ್ರಾಸ್ ಒಳಾಂಗಣ ಕ್ರೀಡಾಂಗಣ ಮುಂಭಾಗದ ಮನೆಯಲ್ಲಿ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗಣತಿದಾರರ ನೇಮಕ, ತರಬೇತಿ:

ಜಿಲ್ಲೆಯಲ್ಲಿ ಸುಮಾರು 4462 ಬ್ಲಾಕ್‌ಗಳಿದ್ದು, ಅಗತ್ಯತೆಗಳಿಗೆ ಅನುಗುಣವಾಗಿ ಗಣತಿದಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ. ಸಮೀಕ್ಷೆಗಾಗಿ ಹಿಂದುಳಿದ ವರ್ಗದ ಆಯೋಗದಿಂದ ಅಪ್ಲಿಕೇಶನ್‌ (ಆ್ಯಪ್) ಸಹ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಜನರಿಗೆ ಸುಲಭವಾಗಿ ಸಮೀಕ್ಷೆಗೆ ಸಹಕರಿಸಲು ಸಾಧ್ಯವಾಗುತ್ತದೆ. ಸಮೀಕ್ಷೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಯಾವುದೇ ರೀತಿಯ ಗೊಂದಲ ಅಥವಾ ಸಮಸ್ಯೆ ಇದ್ದಲ್ಲಿ ನೋಡೆಲ್ ಅಧಿಕಾರಿಗಳಾದ ಉಪವಿಭಾಗಾಧಿಕಾರಿ, ತಹಸೀಲ್ದಾರ್, ಮಹಾನಗರ ಪಾಲಿಕೆ ಆಯುಕ್ತರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ಬಳಿ ಪರಿಹರಿಸಿಕೊಳ್ಳುವಂತೆ ತಿಳಿಸಿದರು.

ಪ್ರತಿ ಮನೆಗೆ 30 ನಿಮಿಷ:

ಗಣತಿದಾರರು ಮನೆ ಬಳಿ ಬಂದಾಗ ಸಾಕುನಾಯಿಗಳನ್ನು ಸುರಕ್ಷಿತವಾಗಿಟ್ಟುಕೊಂಡು ಸಮೀಕ್ಷೆಗೆ ಸಹಕರಿಸಬೇಕು. 150 ಕುಟುಂಬಗಳಿಗೆ ಒಬ್ಬ ಗಣತಿದಾರರು ಮತ್ತು 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರಗಳನ್ನು ನೇಮಕ ಮಾಡಲಾಗಿದೆ. ಗಣತಿದಾರರು ಪ್ರತಿದಿನ 15ರಿಂದ 20 ಮನೆಗಳ ಸಮೀಕ್ಷಾ ಕಾರ್ಯ ಕೈಗೊಳ್ಳಲಿದ್ದಾರೆ. ಪ್ರತಿ ಮನೆಯ ಗಣತಿ 30 ರಿಂದ 40 ನಿಮಿಷಗಳ ಅವಧಿ ತೆಗೆದುಕೊಳ್ಳಲಿದೆ. ಜಿಲ್ಲೆಯಲ್ಲಿ ನಿಗದಿತ ಅವಧಿಗಿಂತ ಮೊದಲೇ ಸಮೀಕ್ಷಾ ವರದಿ ನೀಡಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸಮೀಕ್ಷಾ ಕಾರ್ಯ ಆರಂಭ ಆಗುವುದರಿಂದ ಈಗಾಗಲೇ ಕುಟುಂಬಗಳ ಸಂಖ್ಯೆ ಹಾಗೂ ಬೆಸ್ಕಾಂ ಇಲಾಖೆ ಸಹಯೋಗದೊಂದಿಗೆ ಆರ್.ಆರ್. ಸಂಖ್ಯೆಗೆ ಅನುಗುಣವಾಗಿ ಚನ್ನಗಿರಿಯಲ್ಲಿ 86,897 ಕುಟುಂಬಗಳು, ದಾವಣಗೆರೆ 2,34,481, ಹರಿಹರದಲ್ಲಿ 69,053 ಜಗಳೂರು 40,192, ಹೊನ್ನಾಳಿ 39,024 ಮತ್ತು ನ್ಯಾಮತಿಯಲ್ಲಿ 22,334 ಸೇರಿದಂತೆ ಒಟ್ಟು 4,91,981 ಆರ್.ಆರ್. ಕುಟುಂಬಗಳಿಗೆ ಜಿಯೋಟ್ಯಾಗ್ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದರು.

ಸಮೀಕ್ಷೆಗೆ ಮೊಬೈಲ್ ಆಪ್:

ಈ ಸಮೀಕ್ಷೆ ಭೌತಿಕವಾಗಿ ಆಫ್‌ಲೈನ್ ಮತ್ತು ಆನ್ಲೈನ್ ಮೂಲಕ ನಡೆಸಲು ಮೊಬೈಲ್ ಆ್ಯಪ್ ಕೂಡ ಸಿದ್ಧಪಡಿಸಲಾಗಿದೆ. ಇದು ತುಂಬಾ ಸುಲಭವಾಗಿದ್ದು, ಮೊಬೈಲ್ ಆ್ಯಪ್‌ನಲ್ಲಿಯೇ ಮಾಹಿತಿ ಸಲ್ಲಿಸಬಹುದು. ಸರ್ವೇ ಮಾಡುವ ಸಂದರ್ಭ ತಾಂತ್ರಿಕ ದೋಷ ಅಥವಾ ಸಮಸ್ಯೆಗಳು ಉಂಟಾದಲ್ಲಿ ಸ್ಥಳದಲ್ಲಿಯೇ ಪರಿಹರಿಸಲಾಗುವುದು ಎಂದರು.

ಈ ವೇಳೆ ಉಪ ವಿಭಾಗಾಧಿಕಾರಿ ಸಂತೋಷ್ ಪಾಟೀಲ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹಾಂತೇಶ್, ಪಾಲಿಕೆ ಆಯುಕ್ತೆ ರೇಣುಕಾ, ಡಿಡಿಪಿಐ ಕೊಟ್ರೇಶ್, ಹಿಂದುಳಿದ ವರ್ಗಗಳ ಅಧಿಕಾರಿ ರೇಣುಕಾದೇವಿ, ಬಿಇಒ ಉತ್ತರ ವಿಶಾಲಾಕ್ಷಿ, ಗಣತಿ ಸಿಬ್ಬಂದಿ ಭಾಗ್ಯಲಕ್ಷ್ಮೀ ಕೆ.ಆರ್. ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

- - -

(ಬಾಕ್ಸ್‌)

* ಪತಿ ಕೆಲಸಕ್ಕೆ, ಪತ್ನಿ ಕೈಯಲ್ಲಿ ಮಾಹಿತಿ ಪ್ರತಿ!

- ಗಣತಿದಾರರ ಪ್ರಶ್ನೆಗಳಿಗೆ ಉತ್ತರವಾದ ಪತಿ ಬರೆದಿದ್ದ ಉತ್ತರ ಪತ್ರ

ದಾವಣಗೆರೆ: ಜಾತಿಗಣತಿ ವೇಳೆ ಗಣತಿದಾರರು ಮನೆಗೆ ಬಂದಾಗ ಮಾಹಿತಿ ನೀಡಲು ತೊಂದರೆ ಆಗಬಾರದೆಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ಸಮೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳ ಪ್ರಿಂಟ್‌ ಔಟ್ ತೆಗೆದು, ಅದರಲ್ಲಿ ಉತ್ತರ ಬರೆದು, ಪತ್ನಿ ಕೈಗೆ ಕೊಟ್ಟು ಹೋಗಿದ್ದ ಕುತೂಹಲಕರ ಘಟನೆ ನಗರದಲ್ಲಿ ಸೋಮವಾರ ವರದಿಯಾಗಿದೆ.

ನಗರದ ಮನೆಯೊಂದಕ್ಕೆ ಗಣತಿಗೆಂದು ಸಿಬ್ಬಂದಿ ಬಂದಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ತಮ್ಮ ಪತಿ ಕೆಲಸಕ್ಕೆ ಹೋಗುವ ಮುನ್ನ ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಹೇಳಬೇಕಾದ ಉತ್ತರ ಬರೆದುಕೊಟ್ಟು ಹೋಗಿದ್ದ ಪ್ರತಿಯನ್ನು ಹಿಡಿದುಕೊಂಡು ಮಾಹಿತಿ ನೀಡಿ ಗಮನ ಸೆಳೆದರು.

ಸಮೀಕ್ಷೆದಾರು ಕೇಳುವ ಪ್ರಶ್ನೆಗಳ ಪ್ರಿಂಟೌಟ್‌ಗೆ ಮಾಹಿತಿಯುಳ್ಳ ಉತ್ತರದ ಸಮೇತ ಮಹಿಳೆಯು ಮಾಹಿತಿ ನೀಡಿದರು. ಕಡೆಗೆ ಮಹಿಳೆಯ ಪತಿಯು ನೀಡಿದ್ದ ಉತ್ತರಗಳ ಪ್ರತಿ ಆಧರಿಸಿ ಗಣತಿದಾರರು ಮಾಹಿತಿ ಭರ್ತಿ ಮಾಡಿಕೊಂಡರು.

- - -

-22ಕೆಡಿವಿಜಿ45:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿದರು.