ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪಟ್ಟಣದ ಹೃದಯ ಭಾಗವಾಗಿರುವ ಭಾರತ್ ಮಾರುಕಟ್ಟೆಯ ಅಭಿವೃದ್ಧಿಗೆ ಪುರಸಭೆ ಮುಂದಾಗಿದ್ದು, ಬುಧವಾರ ಪುರಸಭೆ ವ್ಯವಸ್ಥಾಪಕ ಎ.ಎಚ್. ಮುದ್ದೇಬಿಹಾಳ ಹಾಗೂ ನಗರ ಸರ್ವೇ ಇಲಾಖೆಯ ಸರ್ವೇಯರ್ ಅವರನ್ನೊಳಗೊಂಡ ಸಿಬ್ಬಂದಿ ಅಳತೆ ಮಾಡುವ ಕಾರ್ಯ ಆರಂಭಿಸಿದರು. ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಎ.ಎಚ್.ಮುಜಾವರ್ ಪತ್ರಿಕೆಗೆ ಪ್ರತಿಕ್ರಿಯಿಸಿ, ಕಳೆದ ತಿಂಗಳು ಪುರಸಭೆಯಲ್ಲಿ ಜರುಗಿದ ಎಲ್ಲ ಪಕ್ಷಗಳ ಮುಖಂಡರ ಹಾಗೂ ಬೀದಿಬದಿ ವ್ಯಾಪಾರಿಗಳ ಪಕ್ಷಾತೀತವಾದ ಸಭೆಯಲ್ಲಿ ಚರ್ಚಿಸಿದಂತೆ, ಭಾರತ್ ಮಾರುಕಟ್ಟೆಯ ಅಭಿವೃದ್ಧಿಗೆ ₹ 25 ಲಕ್ಷ ವೆಚ್ಚದಲ್ಲಿ ಕಾಮಗಾರಿ ಹಾಕಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಸರ್ವೇ ಇಲಾಖೆಯ ಅಧಿಕಾರಿಗಳಿಗೆ ಪುರಸಭೆ ವ್ಯಾಪ್ತಿಗೆ ಬರುವ ಜಾಗ ಹಾಗೂ ರಸ್ತೆಯನ್ನು ಅಳತೆ ಮಾಡಿಕೊಡಲು ಕೋರಲಾಗಿತ್ತು. ಅದರಂತೆ ಬುಧವಾರ ಅಳತೆ ಕಾರ್ಯ ಆರಂಭವಾಗಿದೆ. ಕಾಮಗಾರಿಯ ಟೆಂಡರ್ ಸಹ ಮಾಡಲಾಗಿದೆ. ಶಾಸಕರಿಂದ ಇಷ್ಟರಲ್ಲಿಯೇ ಕಾಮಗಾರಿಯ ಭೂಮಿಪೂಜೆ ಮಾಡಿಸಲಾಗುತ್ತದೆ. ಕಾರಣ ಮಾರುಕಟ್ಟೆಗೆ ಹೊಂದಿಕೊಂಡು ರಸ್ತೆ ಎಷ್ಟು ಅಗಲವಿದೆ ಎಂಬುವುದನ್ನು ಗುರ್ತಿಸಬೇಕಿದೆ. ಗುರ್ತಿಸಿದ ಬಳಿಕ ಈಗಿರುವ ಅಂಗಡಿಗಳನ್ನು ತೆರವುಗೊಳಿಸಿ ಕಾಮಗಾರಿ ಆರಂಭಿಸಲಾಗುತ್ತದೆ.ಈ ಮಹತ್ವದ ಕಾರ್ಯಕ್ಕೆ ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪುರಸಭೆ ಕಂದಾಯ ಶಾಖೆಯ ಮುಸ್ತಾಕ ಕೋತ್ವಾಲ ಹಾಗೂ ಸಿಬ್ಬಂದಿ ಇದ್ದರು.