ತಾಲೂಕಿನ ಸಾಲ್ಕಣಿ ಗ್ರಾಪಂ ವ್ಯಾಪ್ತಿಯಲ್ಲಿ ಆಗಂತಕರು ಸರ್ವೆ ಮಾಡುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದ್ದು, ಸ್ಥಳೀಯ ಶಾಸಕರು, ಸಂಸದರು ಸದನದಲ್ಲಿ ಯೋಜನೆಯನ್ನು ವಿರೋಧಿಸಿ ಸರ್ಕಾರದ ಗಮನ ಸೆಳೆಯಬೇಕು.

ನದಿ ತಿರುವು ಯೋಜನೆ ವಿರೋಧಿಸಿ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯಬೇಕು: ಹಾಪ್ಕಾಮ್ಸ್‌ ನಿರ್ದೇಶಕ ಎನ್.ಎಸ್. ಭಟ್ಟ ಆಗ್ರಹ

ಕನ್ನಡಪ್ರಭ ವಾರ್ತೆ ಶಿರಸಿ

ತಾಲೂಕಿನ ಸಾಲ್ಕಣಿ ಗ್ರಾಪಂ ವ್ಯಾಪ್ತಿಯಲ್ಲಿ ಆಗಂತಕರು ಸರ್ವೆ ಮಾಡುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದ್ದು, ಸ್ಥಳೀಯ ಶಾಸಕರು, ಸಂಸದರು ಸದನದಲ್ಲಿ ಯೋಜನೆಯನ್ನು ವಿರೋಧಿಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಶಿರಸಿ ಹಾಪ್ಕಾಮ್ಸ್‌ ನಿರ್ದೇಶಕ ಎನ್.ಎಸ್. ಭಟ್ಟ ಆಗ್ರಹಿಸಿದ್ದಾರೆ.

ಶನಿವಾರ ನಗರದ ಹಾಪ್ಕಾಮ್ಸ್‌ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವು ದಿನಗಳಿಂದ ಮಣದರೂರು, ಹೇರೂರು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಆಗಂತುಕರು ಕದ್ದುಮುಚ್ಚಿ ಸರ್ವೆ ಮಾಡುತ್ತಿದ್ದಾರೆ. ಸರ್ವೆ ಕುರಿತು ಮಾಹಿತಿ ಕೇಳಿದರೆ ಯಾರ ಬಳಿಯೂ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಮಾತ್ರ ಅದು ಕುಡಿಯುವ ನೀರಿನ ಯೋಜನೆ ಯೋಜನೆಯಾದ್ದರಿಂದ ಜಾರಿಯಾಗುವುದು ನಿಶ್ವಿತ ಎಂದು ಹೇಳಿದ್ದಾರೆ. ಇದೆಲ್ಲ ಗಮನಿಸಿದಾಗ ಜಿಲ್ಲೆಯ ಜನರನ್ನು ದಿಕ್ಕು ತಪ್ಪಿಸುವ ಕಾರ್ಯ ನಡೆದಿದೆಯೇ ಎನ್ನುವ ಅನುಮಾನ ಉಂಟಾಗಿದ್ದು, ಶಾಸಕರು ಮತ್ತು ಸಂಸದರು ಈ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದರು.

ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಬೇಡ್ತಿ-ಅಘನಾಶನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಸಂಸದರು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿ ಜನಾಭಿಪ್ರಾಯ ತಿಳಿಸಿದ್ದೇವೆ. ಆದರೆ ನಮ್ಮ ಭಾಗದ ಜನಪ್ರತಿನಿಧಿಗಳಿಂದ ಯೋಜನೆ ವಿರುದ್ಧ ಯಾವುದೇ ಬಹಿರಂಗ ಹೇಳಿಕೆ ಬಂದಿಲ್ಲ. ಅತ್ತ ಯೋಜನೆ ಪರವಾದ ಹೇಳಿಕೆ ಬರುತ್ತಿದ್ದು, ನಮ್ಮ ಶಾಸಕರು, ಸಂಸದರು ಅಧಿವೇಶನದಲ್ಲಿ ಗಟ್ಟಿ ಧ್ವನಿ ಎತ್ತಬೇಕು. ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಜಲ ಶಕ್ತಿ ಇಲಾಖೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಕೇವಲ ರೈಲ್ವೆ ವಿಷಯ ಪ್ರಸ್ತಾಪಿಸಿದರೆ ವಿನಃ ನದಿ ಯೋಜನೆ ಕುರಿತು ಮಾತನಾಡಿಲ್ಲ. ಪಕ್ಕದ ಜಿಲ್ಲೆ ಜನಪ್ರತಿನಿಧಿಗಳು ಕುಡಿಯುವ ನೀರಿನ ಹೆಸರಲ್ಲಿ ಆಗ್ರಹಿಸಿದರೆ, ನಮ್ಮ ಶಾಸಕರು ಪರಿಸರದ ಹೆಸರಿನಲ್ಲಿ ವಿರೋಧಿಸಬೇಕು. ನಮ್ಮ ಕೂಗು ಇನ್ನಷ್ಟು ಘಟ್ಟಿಯಾಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಹಾಪ್ಕಾಮ್ಸ್‌ ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ ಮುರೇಗಾರ, ಸಾಲಕಣಿ ಗ್ರಾಪಂ ಅಧ್ಯಕ್ಷೆ ಅನಸೂಯಾ ಹೆಗಡೆ, ಪ್ರಮುಖರಾದ ಆರ್‌.ಎಂ. ಹೆಗಡೆ, ದಿನೇಶ ಹೆಗಡೆ ದುಗ್ಗುಮನೆ, ನಾಗು ಗೌಡ ಮಳ್ಳಿಕೈ ಮತ್ತಿತರರರು ಇದ್ದರು. ಸದನದಲ್ಲಿ ಪ್ರಸ್ತಾಪ

ಸುದ್ದಿಗೋಷ್ಠಿ ಬಳಿಕ ನಾಗರಿಕರು ಶಾಸಕ ಭೀಮಣ್ಣ ನಾಯ್ಕ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ವೇಳೆ ದೂರವಾಣಿ ಮೂಲಕ ಶಾಸಕರನ್ನು ಸಂಪರ್ಕಿಸಿ ಭೀಮಣ್ಣ ಈಗಾಗಲೇ ನಾವು ವಿಷಯ ಗಮನಿಸಿದ್ದೇನೆ. ಸದನದಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು. ಅಲ್ಲದೇ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಗೂ ತೆರಳಿ ಮನವಿ ಸಲ್ಲಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಆಗ್ರಹಿಸಲಾಯಿತು. ಈ ವೇಳೆ ಅರಣ್ಯ ಸಮಿತಿ ಅಧ್ಯಕ್ಷ ಶಿವಾಸುತ ಹೆಗಡೆ, ಪ್ರಮುಖರಾದ ವೆಂಕಟ್ರಮಣ ಹೆಗಡೆ ದುಗ್ಗುಮನೆ, ಪ್ರಮೋದ ಹೆಗಡೆ, ಶ್ರೀನಿವಾಸ ಹೆಗಡೆ ಕಡಕಿನಬೈಲ್, ಮಧುಕರ ಹೆಗಡೆ, ಆರ್.ಟಿ. ಭಟ್ಟ ಮತ್ತಿತರರು ಇದ್ದರು.