ಸಾರಾಂಶ
ದೊಡ್ಡಬಳ್ಳಾಪುರ: ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಸಂಬಂಧ ಏಪ್ರಿಲ್ 26 ರಂದು ನಡೆಯುವ ಮತದಾನದ ದಿನದಂದು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ್ ಹೇಳಿದರು.
ಲೋಕಸಭಾ ಚುನಾವಣೆ 2024ರ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ಜಿಲ್ಲಾಡಳಿತ ಕಚೇರಿ ಮೇಲೆ ಮತದಾನ ಜಾಗೃತಿಗಾಗಿ ಹಾಟ್ ಏರ್ ಬಲೂನ್ ಅನಾವರಣ ಹಾಗೂ ಮತದಾನ ಜಾಗೃತಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಹಲವು ಮತದಾನ ಜಾಗೃತಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಲೋಕಸಭಾ ಚುನಾವಣೆಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಸದೃಢ ದೇಶ ನಿರ್ಮಾಣ ಮಾಡಲು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ತಪ್ಪದೇ ಪ್ರತಿಯೊಬ್ಬರು ಮತ ಚಲಾಯಿಸಿ ಎಂದು ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಸಿಇಒ ಡಾ.ಕೆ.ಎನ್ ಅನುರಾಧ ಮಾತನಾಡಿ, ಈ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಬೇಕೆಂಬ ಆಶಯದೊಂದಿಗೆ ಜಿಲ್ಲೆಯಾದ್ಯಂತ ಸ್ವೀಪ್ ಸಮಿತಿ ವತಿಯಿಂದ ವಿಭಿನ್ನವಾಗಿ ಸಾಕಷ್ಟು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ತಪ್ಪದೇ ನಿರ್ಭೀತಿಯಿಂದ ಮತ ಚಲಾಯಿಸಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಿಲ್ಲಾ ಐಕಾನ್ ಆಗಿ ಕಾಮಿಡಿ ಕಿಲಾಡಿ ನಟ ರಘು, ಲಿಂಗತ್ವ ಅಲ್ಪಸಂಖ್ಯಾತರ ಕ್ಷೇತ್ರದಿಂದ ಅದ್ಯ ಮತ್ತು ವಿಕಲಚೇತನರ ಕ್ಷೇತ್ರದಿಂದ ಪ್ಯಾರ ಕ್ರೀಡಾ ಪಟು ಪ್ರಕಾಶ್ ಅವರು ಭಾಗವಹಿಸಿ ಎಲ್ಲರು ತಪ್ಪದೇ ಮತದಾನದ ಹಕ್ಕು ಚಲಾಯಿಸಿ ಎಂದು ಮತದಾನ ಜಾಗೃತಿ ಮೂಡಿಸಿದರು.
ಮತದಾನ ಜಾಗೃತಿಗಾಗಿ ಜಿಲ್ಲಾಧಿಕಾರಿ ಹಾಟ್ ಏರ್ ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿದರು. ಮತದಾನ ಜಾಗೃತಿ ಸಹಿ ಸಂಗ್ರಹ ಅಭಿಯಾನದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸುವ ಮೂಲಕ ಎಲ್ಲರೂ ಸಹಿ ಹಾಕಿ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಟಿ.ಕೆ ರಮೇಶ್, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ ಸೇರಿದಂತೆ ಜಿಲ್ಲಾಡಳಿತದ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.ಫೋಟೋ-
1ಕೆಡಿಬಿಪಿ4- ಬೆಂ.ಗ್ರಾ. ಜಿಲ್ಲಾಡಳಿತ ಭವನದ ಆವರಣದಲ್ಲಿ ಮತದಾನ ಜಾಗೃತಿಗಾಗಿ ಸ್ವೀಪ್ ಸಮಿತಿಯಿಂದ ಏರ್ ಬಲೂನ್ ಅನಾವರಣ ನಡೆಯಿತು.1ಕೆಡಿಬಿಪಿ5- ಬೆಂ.ಗ್ರಾ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮತದಾನ ಜಾಗೃತಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.