ಸಾರಾಂಶ
ರಾಜ್ಯದ ಕನ್ನಡ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಿದ್ದು, ರಾಜ್ಯದ 1900 ಕನ್ನಡ ಶಾಲೆಗಳಲ್ಲಿ 3-4 ಜನ ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಹೀಗಾಗಿ ಅವುಗಳು ಮುಚ್ಚುವ ಸ್ಥಿತಿ ತಲುಪಿರುವುದು ಆತಂಕದ ಸಂಗತಿ.
ಹುಬ್ಬಳ್ಳಿ:
ಬೆಂಗಳೂರು ಸೇರಿದಂತೆ ಎಲ್ಲೆಡೆಯೂ ದಿನದಿಂದ ದಿನಕ್ಕೆ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಆದರೆ, ಮೂಲ ಕನ್ನಡಿಗರಾದ ಉತ್ತರ ಕರ್ನಾಟಕ ಭಾಗದ ಜನರಿಂದಲೇ ಜವಾರಿ ಭಾಷೆ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವಾಗುತ್ತಿದೆ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಧೀಮಂತ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಕನ್ನಡ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಿದ್ದು, ರಾಜ್ಯದ 1900 ಕನ್ನಡ ಶಾಲೆಗಳಲ್ಲಿ 3-4 ಜನ ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಹೀಗಾಗಿ ಅವುಗಳು ಮುಚ್ಚುವ ಸ್ಥಿತಿ ತಲುಪಿರುವುದು ಆತಂಕದ ಸಂಗತಿ. ಆದ್ದರಿಂದ ಕರ್ನಾಟಕ ರಾಜ್ಯೋತ್ಸವ ಬಂದಾಗ ಮಾತ್ರ ಕನ್ನಡ ಅಭಿಮಾನ ಮೆರೆಯದೇ, ಇದು ವರ್ಷ ಪೂರ್ತಿ ಆಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಹು-ಧಾ ಮಹಾನಗರ ಪಾಲಿಕೆ ಪ್ರತಿ ತಿಂಗಳು ಕಾರ್ಯಕ್ರಮ ಆಯೋಜಿಸಲಿ ಎಂದು ಸಲಹೆ ನೀಡಿದರು.ಸಮಾಜಕ್ಕೆ ಮಾದರಿಯಾಗಿ:
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹು-ಧಾ ಮಹಾನಗರ ಧೀಮಂತ ಪ್ರಶಸ್ತಿಗೆ ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಅಧಿಕಾರಿಗಳು ಶ್ರಮವಹಿಸಿ 93 ಜನರನ್ನು ಪ್ರಶಸ್ತಿಗೆ ಆಯ್ಕೆಗೊಳಿಸಿದ್ದಾರೆ. ಅರ್ಜಿ ಸಲ್ಲಿಸಿದವರೆಲ್ಲ ಉತ್ತಮ ಸಾಧನೆ ಮಾಡಿದವರೆ. ಆದರೆ, ನಿರ್ದಿಷ್ಟ ಸಂಖ್ಯೆಯಲ್ಲಿ ಮಾತ್ರ ಪ್ರಶಸ್ತಿ ನೀಡಬೇಕಿರುವುದರಿಂದ ಅವರಲ್ಲಿಯೇ ಅತ್ಯುತ್ತಮ ಎನ್ನುವವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರೆಲ್ಲ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಬೇಕು ಎಂದರು.ಸರ್ಕಾರದ ಮಾರ್ಗಸೂಚಿ ಪಾಲನೆ:
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಅಂಗಡಿಗಳ ಬೋರ್ಡ್‌ನಲ್ಲಿ ಶೇ. 60ರಷ್ಟು ಕನ್ನಡ ಭಾಷೆ ಇರಬೇಕೆನ್ನುವ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಕೆಯು ಅಚ್ಚುಕಟ್ಟಾಗಿ ಅನುಷ್ಠಾನಕ್ಕೆ ತರುತ್ತಿದೆ. ಕನ್ನಡ ಉಳಿಸಿ ಬೆಳೆಸಲು ಮತ್ತು ಪ್ರೋತ್ಸಾಹಿಸಲು ವಿವಿಧ ಸಂಘಟನೆಗಳ ಜತೆ ಕೈಜೋಡಿಸಿ ಪಾಲಿಕೆ ಕೆಲಸ ಮಾಡುತ್ತಿದೆ. ಮನೆ-ಮನೆ ಕಸ ಸಂಗ್ರಹ ಮಾಡಿ ನಗರವನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿಡಲು ಪಾಲಿಕೆ ಶ್ರಮಿಸುತ್ತಿದೆ. ಮಹಾನಗರದಲ್ಲಿ ಈಗಾಗಲೇ ₹400-500 ವೆಚ್ಚದ ವಿವಿಧ ಕಾಮಗಾರಿಗಳು ನಡೆಯತ್ತಿವೆ. ಅದರಂತೆ ಎಲ್‌ಇಡಿ ಅಳವಡಿಕೆಗೆ ಸರ್ಕಾರ ₹94 ಕೋಟಿ ಅನುದಾನ ನೀಡಿದ್ದು, ಶೀಘ್ರ ಟೆಂಡರ್ ಕರೆದು ಅಳವಡಿಕೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ಮೇಯರ್ ರಾಮಣ್ಣ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸುವರ್ಣ ನ್ಯೂಸ್ ವರದಿಗಾರ ಗುರುರಾಜ ಹೂಗಾರ, ಪತ್ರಕರ್ತ ಅಬ್ಬಾಸ ಮುಲ್ಲಾ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 69 ಸಾಧಕರಿಗೆ ಧೀಮಂತ ಪ್ರಶಸ್ತಿ ಹಾಗೂ 6 ಮಂದಿಗೆ ಬಾಲಪುರಸ್ಕಾರ, 18 ಮಂದಿಗೆ ವಿಶೇಷ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ನಂತರ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ಉಪಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸಂತೋಷ ಚವ್ಹಾಣ, ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ರಾಜಶೇಖರ ಕಮತಿ, ಶಿವು ಹಿರೇಮಠ, ಬೀರಪ್ಪ ಖಂಡೇಕರ, ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಸೇರಿದಂತೆ ಹಲವರಿದ್ದರು.