ಸಾರಾಂಶ
ಮಂಗಳೂರು: ರಾಜ್ಯದ ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸುವುದು ಸರ್ಕಾರವೂ ಸೇರಿದಂತೆ ಎಲ್ಲರ ಕರ್ತವ್ಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ವತಿಯಿಂದ ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬ ಪ್ರಯುಕ್ತ ನಗರದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ‘ಕಾರಂತ ಪ್ರಶಸ್ತಿ- 2025’ ಸ್ವೀಕರಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚಲು ಕೇವಲ ಸರ್ಕಾರ ಮಾತ್ರ ಕಾರಣ ಅಲ್ಲ. ಆದರೆ, ಖಾಸಗಿ ಶಾಲಾರಂಭಕ್ಕೆ ಅನುಮತಿ ನೀಡುವುದು ಸೇರಿದಂತೆ ಸರ್ಕಾರದ ಕೆಲ ತೀರ್ಮಾನಗಳಿಂದ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕೇರಳದಲ್ಲಿ ಒಂದು ತರಗತಿಗೆ ಒಬ್ಬ ಶಿಕ್ಷಕರಿದ್ದರೆ, ರಾಜ್ಯದ ಶಾಲೆಗಳಲ್ಲಿ ಐದು ತರಗತಿಗೆ ಒಬ್ಬ ಶಿಕ್ಷಕರಿದ್ದಾರೆ. ರಾಜ್ಯದಲ್ಲಿ 29 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ. 1900 ಸರ್ಕಾರಿ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಸಂಖ್ಯೆಯ ಮಕ್ಕಳಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕು ಎಂದು ಆಶಿಸಿದರು.ಕಾರಂತರು ತಮ್ಮ ಬರಹಗಳ ಮೂಲಕ ಇಂದಿಗೂ ಬದುಕಿದ್ದಾರೆ. ನೇರ ಮಾತು, ನಿಷ್ಠುರ ನಡವಳಿಕೆ ಮೂಲಕ ಕಾರಂತರು ಬದುಕಿದ್ದರು. ಅವರ ನೆನೆಪಿನ ಕಾರ್ಯಕ್ರಮ ಆಯೋಜಿಸುವುದು ಉತ್ತಮ ಕಾರ್ಯ. ಕಾರಂತರ ಹೆಸರಿನಲ್ಲಿ ಪ್ರಶಸ್ತಿ ದೊರೆತಿರುವುದು ಖುಷಿ ತಂದಿದೆ. ಇದನ್ನು ಅಭಿಮಾನದಿಂದ ಸ್ವೀಕರಿಸುತ್ತಿದ್ದೇನೆ ಎಂದು ಬಸವರಾಜ ಹೊರಟ್ಟಿ ಹೇಳಿದರು.ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ, ಐದು ದಶಕಗಳ ಕಾಲ ಪ್ರಾಮಾಣಿಕವಾಗಿ, ಕಪ್ಪುಚುಕ್ಕೆ ಇಲ್ಲದ ಬಸವರಾಜ ಹೊರಟ್ಟಿ ಅವರ ರಾಜಕೀಯ ಜೀವನ ಮಾದರಿ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ ಕಾರಂತರ ಹೆಸರಿನ ಪ್ರಶಸ್ತಿಯು ಶಿಕ್ಷಣ ಕ್ಷೇತ್ರದ ಜನಪ್ರತಿನಿಧಿ ಹೊರಟ್ಟಿ ಅವರಿಗೆ ಸಲ್ಲುತ್ತಿರುವುದು ಔಚಿತ್ಯಪೂರ್ಣ ಎಂದು ಹೇಳಿದರು.ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರು ಶಿವರಾಮ ಕಾರಂತ ಸಂಸ್ಮರಣೆ ಮಾಡಿದರು. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕಾರಂತ ಹುಟ್ಟುಹಬ್ಬ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಬಹುಮಾನ ವಿತರಿಸಿದರು. ಅಂಚೆ ಕಾರ್ಡ್‌ನಲ್ಲಿ ಕಾರಂತರ ಚಿತ್ರರಚನಾ ಸ್ಪರ್ಧೆಯ ವಿಜೇತರಿಗೆ ಸಂತ ಅಲೋಶಿಯಸ್ ಪ್ರೌಢಶಾಲಾ ಪ್ರಾಂಶುಪಾಲ ಫಾ. ಜಾನ್ಸನ್ ಪಿಂಟೊ ಬಹುಮಾನ ವಿತರಿಸಿದರು.ಕಸಾಪ ಮಾಜಿ ರಾಜಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಲಯ ಸಮೂಹದ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಅಂತಾರಾಷ್ಟ್ರೀಯ ಖ್ಯಾತಿಯ ಕೇಶ ವಿನ್ಯಾಸಗಾರ ಡಾ. ಶಿವರಾಮ ಕೆ. ಭಂಡಾರಿ, ಹಿರಿಯ ಸಾಹಿತಿ ಡಾ. ಲೀಲಾ ಉಪಾಧ್ಯಾಯ ಅತಿಥಿಗಳಾಗಿದ್ದರು.
ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು. ಜಿ.ಕೆ. ಭಟ್ ಸೇರಾಜೆ, ಜನಾರ್ದನ ಹಂದೆ, ಸುಧಾಕರ ರಾವ್ ಪೇಜಾವರ ಇದ್ದರು.