ಕನಕಪುರ: ರೈತರು ಸೋಲಾರ್ ಪ್ಯಾನೆಲ್ ಹಾಗೂ ಪಂಪ್ಸೆಟ್ ಮೋಟಾರ್ಗಳನ್ನು ಅಳವಡಿಸಿಕೊಳ್ಳಲು ಆರ್ಥಿಕ ಮತ್ತು ತಾಂತ್ರಿಕ ನೆರವು ಒದಗಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಸೂರ್ಯ ರೈತ ಯೋಜನೆ ರೈತರಿಗೆ ಉತ್ತಮ ಅವಕಾಶ ಕಲ್ಪಿಸಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು
ಕನಕಪುರ: ರೈತರು ಸೋಲಾರ್ ಪ್ಯಾನೆಲ್ ಹಾಗೂ ಪಂಪ್ಸೆಟ್ ಮೋಟಾರ್ಗಳನ್ನು ಅಳವಡಿಸಿಕೊಳ್ಳಲು ಆರ್ಥಿಕ ಮತ್ತು ತಾಂತ್ರಿಕ ನೆರವು ಒದಗಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಸೂರ್ಯ ರೈತ ಯೋಜನೆ ರೈತರಿಗೆ ಉತ್ತಮ ಅವಕಾಶ ಕಲ್ಪಿಸಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ತಾಲೂಕಿನ ನಲ್ಲಹಳ್ಳಿ ಗ್ರಾಮದಲ್ಲಿ ಸೂರ್ಯ ರೈತ ಯೋಜನೆಯಡಿ 14 ಕೋಟಿ ಸಂಪೂರ್ಣ ಸಾಲಮನ್ನಾ ಹಾಗೂ ರೈತ ಫಲಾನುಭವಿಗಳಿಗೆ ಚೆಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, 2024ರಲ್ಲಿ ಅಂದಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರ ಹಿತದೃಷ್ಟಿಯಿಂದ ಹೊಸ ಆಲೋಚನೆಯೊಂದಿಗೆ ಸುಮಾರು 25 ಕೋಟಿ ರು. ವೆಚ್ಚದಲ್ಲಿ ಯೋಜನೆ ಪ್ರಾರಂಭಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯಧನದ ಮೂಲಕ ಶೇ.80ರಷ್ಟು ಸಬ್ಸಿಡಿ ನೀಡಲಾಗಿದೆ. ರೈತರು ಕೇವಲ ಶೇ.20ರಷ್ಟು ವಂತಿಕೆ ಪಾವತಿಸುವ ವ್ಯವಸ್ಥೆ ಮಾಡಲಾಗಿತ್ತು ಎಂದು ಹೇಳಿದರು.
ರೈತರಿಗೆ ಹಣ ಹೊಂದಿಸಲು ಕಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಸಾಲದ ನೆರವಿನೊಂದಿಗೆ ಯೋಜನೆ ರೂಪಿಸಲಾಗಿತ್ತು.ಹೊರರಾಜ್ಯಗಳಲ್ಲಿ ಪ್ರತಿ ಯೂನಿಟ್ಗೆ 16 ರು. ವೆಚ್ಚವಾಗುತ್ತಿದ್ದ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ಕೇವಲ 6 ರು. ವೆಚ್ಚದಲ್ಲಿ ಸೌರಶಕ್ತಿ ಘಟಕಗಳನ್ನು ಖರೀದಿಸಿ ಅಳವಡಿಸುವ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 25 ಕೋಟಿ ರು. ವೆಚ್ಚದ ಯೋಜನೆಯಲ್ಲಿ ಸಹಾಯಧನ ಹೊರತುಪಡಿಸಿ ಸುಮಾರು 17 ಕೋಟಿ ರು. ಬ್ಯಾಂಕ್ ಸಾಲ ಪಡೆಯಲಾಗಿತ್ತು. ಆದರೆ ಸಾಲದ ಬಡ್ಡಿ ಸೇರಿದಂತೆ ಮರುಪಾವತಿಯಲ್ಲಿ ರೈತರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರ ಹಿತದೃಷ್ಟಿಯಿಂದ ಬಾಕಿ ಉಳಿದಿದ್ದ 15 ಕೋಟಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಇದಲ್ಲದೆ, ಯೋಜನೆಯನ್ನು ಸೊಸೈಟಿಗೆ ಹಸ್ತಾಂತರಿಸುವ ಮೂಲಕ ರೈತರೇ ಸ್ವತಃ ಯೋಜನೆಯನ್ನು ಮುಂದುವರಿಸಿ ಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗುವುದರ ಜತೆಗೆ ಸೌರಶಕ್ತಿ ಉತ್ಪಾದನೆ ಮತ್ತು ಬಳಕೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. ಯೋಜನೆಯ ಉತ್ಪಾದನಾ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ನಿರ್ವಹಣೆ ಮಾಡಿದರೆ ಮುಂದಿನ ದಿನಗಳಲ್ಲಿ ಇದರ ಬೇಡಿಕೆಯೂ ಹೆಚ್ಚಾಗಲಿದೆ. ರೈತರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಿ, ಕೃಷಿಯಲ್ಲಿ ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವ ಮೂಲಕ ರೈತರ ಆದಾಯ ಹೆಚ್ಚಿಸುವ ದೂರದೃಷ್ಟಿಯ ಯೋಜನೆ ಇದಾಗಿದೆ ಎಂದು ಹೇಳಿದರು.ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವಶಂಕರ್ ಮಾತನಾಡಿ, ರೈತರಿಗೆ ಕಡಿಮೆ ವೆಚ್ಚದಲ್ಲಿ ಕೃಷಿ ನೀರಾವರಿ ಸೌಲಭ್ಯ ಕಲ್ಪಿಸುವುದರ ಜೊತೆಗೆ ಹೆಚ್ಚುವರಿ ಆದಾಯ ಗಳಿಕೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಆರಂಭಿಸಲಾದ ಸೂರ್ಯ ರೈತ ಯೋಜನೆಯಡಿ ಹರೋಬೆಲೆ ಫೀಡರ್ ವ್ಯಾಪ್ತಿಯ 310 ಸೌರ ಪಂಪ್ಸೆಟ್ ಗಳನ್ನು ಹರೋಬೆಲೆ ಸೂರ್ಯ ರೈತ ಸಹಕಾರಿ ಸಂಘಕ್ಕೆ ಹಸ್ತಾಂತರಿಸಲು ಬೆಸ್ಕಾಂ ಮುಂದಾಗಿದೆ ಎಂದು ಹೇಳಿದರು.
2018ರಲ್ಲಿ ಸ್ಥಾಪಿಸಿದ 24.35 ಕೋಟಿ ರು. ವೆಚ್ಚದ ಈ ಯೋಜನೆಯಡಿ 310 ರೈತರು ಸೌರಶಕ್ತಿ ಮೂಲಕ ವಿದ್ಯುತ್ ಉತ್ಪಾದಿಸಿ ಗ್ರಿಡ್ಗೆ ವಿದ್ಯುತ್ ಪೂರೈಸುತ್ತಿದ್ದಾರೆ. ಈವರೆಗೂ ಸುಮಾರು 21.06 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದ್ದು, ರೈತರಿಗೆ 97.91 ಲಕ್ಷ ರು. ಆರ್ಥಿಕ ಲಾಭ ಪಾವತಿಸಲಾಗುತ್ತಿದೆ. ರೈತರ ಮೇಲಿನ ಸಾಲದ ಹೊರೆ ಹೆಚ್ಚಾಗದಂತೆ ಬಾಕಿ ಸಾಲವನ್ನು ಬೆಸ್ಕಾಂ ವಾರ್ಷಿಕ ಆದಾಯದಡಿ ಪರಿಗಣಿಸಲು ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಸೌರ ಸ್ಥಾವರಗಳು ಸಹಕಾರಿ ಸಂಘದ ನಿರ್ವಹಣೆಗೆ ಹಸ್ತಾಂತರವಾದ ಬಳಿಕ ರೈತರಿಗೆ ಇನ್ನಷ್ಟು ಆರ್ಥಿಕ ಅನುಕೂಲವಾಗುವ ನಿರೀಕ್ಷೆಯಿದೆ. ರೈತರಿಗೆ ನೀರಾವರಿ ಸೌಲಭ್ಯದೊಂದಿಗೆ ಹೆಚ್ಚುವರಿ ಆದಾಯ ಕಲ್ಪಿಸುವ ಈ ಯೋಜನೆ, ರೈತ ಕೇಂದ್ರಿತ ಸೌರಶಕ್ತಿ ಯೋಜನೆಗಳಿಗೆ ಮಾದರಿಯಾಗಲಿದೆ ಎಂದರು.ಈ ವೇಳೆ ಮುಖಂಡರಾದ ಕೃಷ್ಣಪ್ಪ, ಎಂಡಿ ವಿಜಯದೇವ್, ವಕೀಲ ಚಿನ್ನರಾಜು, ಕೆ ಎನ್.ದಿಲೀಪ್, ಏಳಗಳ್ಳಿ ರವಿ, ಶಿವಣ್ಣ, ಬೆಸ್ಕಾಂ ಅಧಿಕಾರಿ ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.
ಕೆ ಕೆ, ಪಿ ಸುದ್ದಿ 01:ಕನಕಪುರ ತಾಲೂಕಿನ ನಲ್ಲಹಳ್ಳಿ ಗ್ರಾಮದಲ್ಲಿ ಸೂರ್ಯ ರೈತ ಯೋಜನೆಯ ರೈತ ಫಲಾನುಭವಿಗಳಿಗೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಚೆಕ್ಗಳನ್ನು ವಿತರಿಸಿದರು. ಮುಖಂಡರಾದ ಕೃಷ್ಣಪ್ಪ, ಎಂ.ಡಿ.ವಿಜಯದೇವ್, ವಕೀಲ ಚಿನ್ನರಾಜು, ಕೆ.ಎನ್.ದಿಲೀಪ್, ಏಳಗಳ್ಳಿ ರವಿ, ಶಿವಣ್ಣ, ಬೆಸ್ಕಾಂ ಅಧಿಕಾರಿ ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.