ಸಾರಾಂಶ
ಹುಬ್ಬಳ್ಳಿ:
ಲೋಕಸಭೆ ಚುನಾವಣಾ ಜ್ವರ ಏರುಗತಿಯಲ್ಲಿದೆ. ಅದರೊಂದಿಗೆ ಬಿಸಿಲಿನ ಝಳ ಕೂಡ ದಿನದಿಂದ ದಿನಕ್ಕೆ ಏರುತ್ತಿದೆ. ಇದು ಪ್ರಚಾರದ ಮೇಲೂ ಪರಿಣಾಮ ಬೀರುತ್ತಿದೆ. ಮಧ್ಯಾಹ್ನದ ಪ್ರಚಾರಕ್ಕೆ ಕೈ ಹಾಕದೇ ಬರೀ ತಂಪು ಹೊತ್ತಿನಲ್ಲೇ ಪ್ರಚಾರ ನಡೆಸುತ್ತಿದ್ದಾರೆ ಅಭ್ಯರ್ಥಿಗಳು.ಹಾಗೆ ನೋಡಿದರೆ ಪ್ರತಿ ಲೋಕಸಭೆ ಚುನಾವಣೆಯೂ ಏಪ್ರಿಲ್ ಮೇ ತಿಂಗಳಲ್ಲೇ ಬರುತ್ತವೆ. ಹೀಗಾಗಿ, ಸಹಜವಾಗಿ ಬೇಸಿಗೆ ಇರುತ್ತದೆ. ಆದರೆ, ಈ ವರ್ಷ ಹಿಂದೆಂದೂ ಕಂಡರಿಯದಷ್ಟು ಬಿಸಿಲಿದೆ. ಕಳೆದ ವರ್ಷ ಮುಂಗಾರು ಮಳೆಯೂ ಆಗಲಿಲ್ಲ. ಹಿಂಗಾರು ಹನಿ ಕೂಡ ಬೀಳಲಿಲ್ಲ. ಇದರಿಂದಾಗಿ ಕೆರೆ ಕಟ್ಟೆಗಳೆಲ್ಲ ಬತ್ತಿ ಬರಡಾಗಿವೆ. ಇದು ಸಹಜವಾಗಿ ಅಂತರ್ಜಲವನ್ನು ಕುಸಿಯುವಂತೆ ಮಾಡಿದೆ. ಜತೆ ಜತೆಗೆ ಬಿಸಿಲಿನ ಝಳ ಹೆಚ್ಚಾಗುವಂತೆ ಮಾಡಿದೆ.
ಬೆಳಗ್ಗೆ 7- 8 ಆದರೆ ಸಾಕು ಬಿಸಿಲಿನ ತಾಪ ಶುರುವಾಗುತ್ತಿದೆ. ಇನ್ನು 10ರಿಂದ ಸಂಜೆ 4-5ರವರೆಗಂತೂ ಬಿಸಿಲಿನ ತಾಪ ಹೇಳುವಂತಿಲ್ಲ. ಅಷ್ಟೊಂದು ಧಗೆ ಕಂಡು ಬರುತ್ತಿದೆ.ಬಿಸಿಲಿನ ಝಳ ಬಹಳವಿದೆ ಎಂದುಕೊಂಡು ರಾಜಕೀಯ ಪಕ್ಷಗಳು ಪ್ರಚಾರ ನಡೆಸುವುದನ್ನು ಬಿಡುವಂತಿಲ್ಲ. ಹಾಗಂತ ನೇರವಾಗಿ ಪ್ರಚಾರಕ್ಕೂ ಇಳಿಯಲು ಸೂರ್ಯನ ಪ್ರಖರತೆ ಬಿಡುತ್ತಿಲ್ಲ. ಹೀಗಾಗಿ ಎರಡು ರಾಜಕೀಯ ಪಕ್ಷಗಳು ಪ್ರಚಾರಕ್ಕೆ ರೇಸಾರ್ಟ್, ಪಕ್ಷದ ಕಾರ್ಯಾಲಯ, ಹೋಟೆಲ್‌ಗಳಿಗೆ ಮೊರೆ ಹೋಗಿವೆ. ಬರೀ ಹೋಟೆಲ್‌ಗಳಲ್ಲೇ ಪ್ರಚಾರ ನಡೆಸುತ್ತಿವೆ ಎಂದರ್ಥವಲ್ಲ. ಬೆಳಗ್ಗೆಯಿಂದ ಇಳಿಹೊತ್ತು ಆಗುವ ವರೆಗೂ ಪಕ್ಷದ ಕಚೇರಿಯೋ, ಹೋಟೆಲ್‌ಗಳಲ್ಲೂ ಪ್ರಮುಖರ, ಸ್ಥಳೀಯ ಜನ ಪ್ರತಿನಿಧಿಗಳು, ಮುಖಂಡರ ಸಭೆ ನಡೆಸಿ ಸಲಹೆ ಸೂಚನೆ ನೀಡಲಾಗುತ್ತಿದೆ.
ಸಂಜೆ 4ರ ಗಡಿ ದಾಟುತ್ತಿದ್ದಂತೆ ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ ರಾಜಕೀಯ ವ್ಯಕ್ತಿಗಳು. ಸಂಜೆ ಇಳಿಹೊತ್ತಿನಲ್ಲಾದರೆ ಬಿಸಿಲಿನ ಝಳ ಇರಲ್ಲ. ಜತೆಗೆ ಕೃಷಿಕರು, ಕೆಲಸಗಾರರು, ಮಹಿಳೆಯರು ಮನೆ ಸೇರಿರುತ್ತಾರೆ. ಆಗ ಪ್ರಚಾರಕ್ಕೆ ಕರೆದರೆ ಮರುಮಾತಿಲ್ಲದೇ, ಸಾರ್ವಜನಿಕ ಸಭೆ ಸಮಾರಂಭಗಳಿಗೆ ಬರುತ್ತಾರೆ. ಈ ಕಾರಣದಿಂದ ಬೆಳಗ್ಗೆ 6ರಿಂದ 9ರ ವರೆಗೆ ಹಳ್ಳಿಗಳಲ್ಲಿ ಪ್ರಚಾರ ನಡೆಸಿ, ಮತ್ತೆ ಸಂಜೆ ವೇಳೆಗೆ ಪ್ರಚಾರ, ಸಾರ್ವಜನಿಕ ಸಭೆ ಸಮಾರಂಭಗಳನ್ನು ಪಕ್ಷಗಳು ನಡೆಸುತ್ತಿವೆ. ಹೀಗಾಗಿ, ಈ ಚುನಾವಣೆಯಲ್ಲಿ ಬಿಸಿಲಿನ ಝಳದಿಂದಾಗಿ ಪ್ರಚಾರದ ವೈಖರಿಯನ್ನು ಬದಲಿಸಿಕೊಂಡಿವೆ ಎಂದರೆ ತಪ್ಪಾಗಲಿಕ್ಕಿಲ್ಲ.