ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಜಾನಪದ ವಿದ್ವಾಂಸರಾದ ಸುಶೀಲಾ ಹೊನ್ನೇಗೌಡ ಹಾಗೂ ರಾಷ್ಟ್ರ ಮಟ್ಟದ ಪೂಜಾ ಕುಣಿತ ಕಲಾವಿದೆ ಕೀರ್ತಿ ನಿ.ರಾಜ್ ಅವರಿಗೆ ‘ಜಾನಪದ ಜನ್ನೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮಂಡ್ಯದ ಜಾನಪದ ಜನ್ನೆಯರು ಸಂಘದಿಂದ ಪಟ್ಟಣದ ಎಚ್.ಕೆ.ವೀರಣ್ಣಗೌಡ ಪದವಿ ಕಾಲೇಜಿನ ನಡೆದ ಸಮಾರಂಭದಲ್ಲಿ ಪ್ರಗತಿಪರ ಕೃಷಿಕರಾದ ಶಾಂತ ಚಂದು, ಸುಶೀಲ ಹೊನ್ನೇಗೌಡ ಹಾಗೂ ಕೀರ್ತಿ ನಿ. ರಾಜ್‌ಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.
ಭಾರತೀನಗರ ಇನ್ನರ್ ವ್ಹೀಲ್ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಲಕ್ಷ್ಮಿ ಮಂಜುಳಾ ಬೋರೇಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ನಮ್ಮ ಕರ್ನಾಟಕದ ಜನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆ ಜನ ವೈಭವವನ್ನು ಕಳೆದುಕೊಂಡಿದೆ. ಹಳ್ಳಿಗಳಲ್ಲಿ ಇನ್ನೂ ಜಾನಪದ ನೆಲೆ ಭದ್ರವಾಗಿ ಉಳಿದುಕೊಂಡಿದೆ ಎನ್ನುವುದು ಸಮಾಧಾನಕರ ಎಂದರು.ಕಲೆ, ಸಾಹಿತ್ಯ, ಸಂಸ್ಕೃತಿ ಹೊಂದಿರುವ ಜಾನಪದ ನಮ್ಮ ಹಿರಿಯರ ತಲೆಮಾರಿನಿಂದ ಬಂದ ಬಳುವಳಿಯಾಗಿದೆ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ ಚಿಂತನೆ ನಡೆಸಬೇಕು ಎಂದರು.
ಬೆಂಗಳೂರು ವಿಶ್ವ ವಿದ್ಯಾನಿಲಯದ ಪ್ರಾಂಶುಪಾಲೆ ಡಾ.ಅನಸೂಯಾ ಹೊಂಬಾಳೆ ಪ್ರಶಸ್ತಿ ಪುರಸ್ಕೃತರನ್ನು ಕುರಿತು ಮಾತನಾಡಿದರು. ಸಮಾರಂಭದಲ್ಲಿ ಜಾನಪದ ಜನ್ನೆಯರು ಸಂಘದ ಅಧ್ಯಕ್ಷ ಡಾ.ಎಸ್.ಸಿ.ಮಂಗಳ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ಎಂ.ಎಚ್.ಚೆನ್ನೇಗೌಡ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಸಿ.ಅಪೂರ್ವ ಚಂದ್ರ, ಸಂಘದ ಉಪಾಧ್ಯಕ್ಷೆ ಜಿ.ಉಷಾರಾಣಿ, ಕಾರ್ಯದರ್ಶಿ ಡಾ.ಎಂ.ಕೆಂಪಮ್ಮ, ಖಜಾಂಚಿ ಡಾ.ಆರ್.ಪಿ.ಛಾಯಾ, ನಿರ್ದೇಶಕರಾದ ಡಾ.ಸುಜಾತ ಅಕ್ಕಿ, ಡಾ.ಪೂರ್ಣಿಮಾ, ಪ್ರೊ.ಎಂ.ಶ್ರೀಲತಾ, ಡಾ.ಎನ್.ರಮ್ಯಾ, ಡಾ.ತೇಜಸ್ವಿನಿ, ಶಿಲ್ಪ ಕೃಷ್ಣೇಗೌಡ, ಡಾ.ದೇವಿಕಾ. ಎ.ಸಿ.ಮಾನಸ, ಡಾ.ಜಯಲಕ್ಷ್ಮಿ ಸೀತಾಪುರ, ಜಾನಪದ ತಜ್ಞೆ ಪ್ರಶಸ್ತಿ ಪ್ರಾಯೋಜಕರಾದ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ.ಎನ್.ಎಸ್.ಸರಸ್ವತಿ ಭಾಗವಹಿಸಿದ್ದರು.