ಬಳ್ಳಾರಿಯಲ್ಲಿಯೇ ಅಮೋನಿಯಂ ನೈಟ್ರೇಟ್ ಖರೀದಿಸಿದ್ದ ಶಂಕಿತ ಉಗ್ರರು?

| Published : Dec 26 2023, 01:30 AM IST

ಬಳ್ಳಾರಿಯಲ್ಲಿಯೇ ಅಮೋನಿಯಂ ನೈಟ್ರೇಟ್ ಖರೀದಿಸಿದ್ದ ಶಂಕಿತ ಉಗ್ರರು?
Share this Article
  • FB
  • TW
  • Linkdin
  • Email

ಸಾರಾಂಶ

ಆರೋಪಿಗಳು ವಿಚಾರಣೆ ವೇಳೆ ಆತಂಕಕಾರಿ ಮಾಹಿತಿ ಬಾಯ್ಬಿಟ್ಟಿದ್ದಾರೆ. ನಿಷೇಧಿತ ಐಸಿಸ್ ಸಂಘಟನೆಗೆ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದಾರೆ ಎಂದು ಗೊತ್ತಾಗಿದೆ.

ಬಳ್ಳಾರಿ: ನಗರದಲ್ಲಿ ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ವೇಳೆ ಬಂಧಿತರಾದ ಇಬ್ಬರು ಶಂಕಿತ ಉಗ್ರರು ಸ್ಫೋಟಕ ವಸ್ತು ತಯಾರಿಕೆಗೆ ಅಮೋನಿಯಂ ನೈಟ್ರೇಟ್‌ ಅನ್ನು ಬಳ್ಳಾರಿಯಲ್ಲಿಯೇ ಖರೀದಿಸಿದ್ದರು ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಬಂಧಿತ ಪ್ರಮುಖ ಆರೋಪಿಗಳಾದ ಮಿನಾಜ್ ಅಲಿಯಾಸ್ ಮಹ್ಮದ್ ಸುಲೇಮನ್ ಹಾಗೂ ಸೈಯದ್ ಸಮೀರ್ ಅವರು ಸ್ಫೋಟಕ ತಯಾರಿಕೆಗೆ ಒಂದು ಕೆಜಿಯಷ್ಟು ಅಮೋನಿಯಂ ನೈಟ್ರೇಟ್‌ ಅನ್ನು ನಗರದ ಫರ್ಟಿಲೈಸರ್ ಅಂಗಡಿಯೊಂದರಲ್ಲಿ ಕಳೆದ ಅ. 22ರಂದು ಖರೀದಿ ಮಾಡಿದ್ದರು ಎಂದು ಎನ್‌ಐಎ ಅಧಿಕಾರಿಗಳ ವಿಚಾರಣೆ ವೇಳೆ ಗೊತ್ತಾಗಿದೆ.

ಆದರೆ, ಅಮೋನಿಯಂ ನೈಟ್ರೇಟ್ ಖರೀದಿ ಮಾಡಿದ್ದು ಎಲ್ಲಿ? ಎಂಬುದರ ಕುರಿತು ಸ್ಪಷ್ಟ ಸುಳಿವು ಬಂಧಿತ ಆರೋಪಿಗಳು ನೀಡಿಲ್ಲ. ಖರೀದಿ ಕುರಿತು ರಸೀದಿ ಲಭ್ಯವಾಗಿಲ್ಲ. ಅಮೋನಿಯಂ ನೈಟ್ರೇಟ್ ಹೊಲ-ಗದ್ದೆಗಳಿಗೆ ಬಳಸುವ ಯೂರಿಯಾ ಮಾದರಿಯಲ್ಲಿಯೇ ಇರಲಿದ್ದು, ಇದರ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಈ ವಸ್ತುವನ್ನು ಸ್ಫೋಟಕ ವಸ್ತು ತಯಾರಿಕೆಗೂ ಬಳಕೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ಬಂಧಿತ ಉಗ್ರರ ವಿಚಾರಣೆ ತೀವ್ರ:

ಬಳ್ಳಾರಿಯಲ್ಲಿ ಬಂಧಿತರಾಗಿರುವ ಇಬ್ಬರು ಶಂಕಿತ ಉಗ್ರರನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು, ಬಳ್ಳಾರಿಯಲ್ಲಿ ಕೇಂದ್ರವಾಗಿಟ್ಟುಕೊಂಡು ಸ್ಫೋಟಕ್ಕೆ ಸಜ್ಜಾಗಿದ್ದ ಉಗ್ರರ ಸಂಚಿನ ರಹಸ್ಯ ಬಯಲಿಗೆಳೆಯಲು ನಾನಾ ಮಾಹಿತಿಯನ್ನು ಕಲೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ದೇಶದ ನಾಲ್ಕು ರಾಜ್ಯಗಳ 19 ಸ್ಥಳಗಳಲ್ಲಿ ನಡೆದ ಎನ್‌ಐಎ ದಾಳಿಯಲ್ಲಿ ಬಂಧಿತರಾಗಿರುವ ಎಂಟು ಜನರ ಪೈಕಿ ನಾಲ್ವರು ಬಳ್ಳಾರಿಯವರು ಆಗಿರುವುದರಿಂದ ಇವರ ಜಾಲ ಮತ್ತೆಲ್ಲಿ ವಿಸ್ತರಿಸಿಕೊಂಡಿದೆ ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಬಂಧಿತ ನಾಲ್ವರ ಪೈಕಿ ಇಬ್ಬರು ಕಾನೂನು ಹಾಗೂ ಬಿಸಿಎ ವಿದ್ಯಾರ್ಥಿಗಳಾಗಿದ್ದು, ಈ ಇಬ್ಬರು ರಾಜ್ಯದ ವಿವಿಧ ಕಾಲೇಜು, ವಿವಿ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ನಿಷೇಧಿತ ಐಸಿಸ್ ಸಂಘಟನೆಗೆ ಸೆಳೆಯುತ್ತಿದ್ದರು ಎಂಬ ಮಾಹಿತಿ ತನಿಖಾ ವೇಳೆ ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಬಳ್ಳಾರಿಯಲ್ಲಿ ಬಂಧಿತರಾಗಿರುವ ಉಗ್ರರು ನಗರದ ಇನ್ಯಾರ ಜತೆ ಸಂಪರ್ಕದಲ್ಲಿದ್ದರು ಎಂಬಿತ್ಯಾದಿ ಮಾಹಿತಿಯನ್ನು ಕಲೆ ಹಾಕಿದೆ.

ಡಿ. 18ರಂದು ಬೆಳ್ಳಂಬೆಳಗ್ಗೆ ಕರ್ನಾಟಕ ಸೇರಿದಂತೆ ರಾಜ್ಯದ 19 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು, ಬಳ್ಳಾರಿಯಲ್ಲಿ ಐಸಿಸ್ ಗ್ಯಾಂಗ್‌ಅನ್ನು ಬಂಧಿಸಿದ್ದರು. ಐಸಿಸ್‌ನಿಂದ ಪ್ರೇರಣೆಗೊಂಡು ಬಳ್ಳಾರಿಯನ್ನು ಕೇಂದ್ರವಾಗಿ ಇರಿಸಿಕೊಂಡಿದ್ದ ( ಬಳ್ಳಾರಿ ಮಾಡ್ಯೂಲ್) ಉಗ್ರರು, ದೇಶದ ನಾನಾ ಕಡೆ ವಿಧ್ವಂಸಕ ಕೃತ್ಯ ನಡೆಸಲು ಸಜ್ಜಾಗಿದ್ದರು ಎಂಬ ಸ್ಫೋಟಕ ಮಾಹಿತಿ ಪಡೆದ ಎನ್‌ಐಎ ಅಧಿಕಾರಿಗಳು ಬಳ್ಳಾರಿಗೆ ಆಗಮಿಸಿ, ಉಗ್ರರನ್ನು ಬಂಧಿಸಿತ್ತು.