ಕೈಗಾರಿಕಾ ಪ್ರದೇಶದಲ್ಲಿ ನಿಗದಿಗಿಂತ ಹೆಚ್ಚಿನ ಯೋಜನೆಗೆ ಜಾಗ: ಸಸ್ಪೆಂಡ್‌

| Published : Jun 23 2024, 02:08 AM IST

ಸಾರಾಂಶ

ಕೈಗಾರಿಕಾ ಪ್ರದೇಶಗಳಲ್ಲಿ ನಿಗದಿಗಿಂತ ಹೆಚ್ಚುವರಿ ಯೋಜನೆಗಳಿಗೆ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರನ್ನು ಅಮಾನತು ಮಾಡಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೈಗಾರಿಕಾ ಪ್ರದೇಶಗಳಲ್ಲಿ ನಿಗದಿಗಿಂತ ಹೆಚ್ಚುವರಿ ಯೋಜನೆಗಳಿಗೆ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರನ್ನು ಅಮಾನತು ಮಾಡಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆದೇಶಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ 7 ಕೈಗಾರಿಕಾ ಪ್ರದೇಶಗಳಿವೆ. ಆ ಕೈಗಾರಿಕಾ ಪ್ರದೇಶಗಳಲ್ಲಿ ಸಾಮಾನ್ಯ ವರ್ಗ ಹಾಗೂ ಎಸ್‌/ಎಸ್ಟಿ ವರ್ಗದ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನ ಮಂಜೂರು ಮಾಡಲು ಮಿತಿ ನಿಗದಿ ಮಾಡಲಾಗಿದೆ. ಅಲ್ಲದೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ಅನುಗುಣವಾಗಿ ಯೋಜನೆಗಳಿಗೆ ಅನುಮೋದನೆ ನೀಡಬೇಕು. ಆದರೆ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಎನ್‌.ನರೇಂದ್ರ ಬಾಬು ಅವರು ನಿಗದಿಗಿಂತ ಹೆಚ್ಚಿನ ಯೋಜನೆಗಳಿಗೆ ಅನುಮೋದಿಸಿದ್ದಾರೆ. ಇದು ನಿಯಮ ಉಲ್ಲಂಘನೆಯಾಗಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಮಾಡುವುದರ ಜತೆಗೆ ಅಮಾನತು ಮಾಡಿ ಆದೇಶಿಸಲಾಗಿದೆ.

ಜಿಲ್ಲಾ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ನಿಯಮ ಉಲ್ಲಂಘಿಸಿ 7 ಕೈಗಾರಿಕಾ ಪ್ರದೇಶಗಳ ಪೈಕಿ 5ರಲ್ಲಿ ಹೆಚ್ಚುವರಿ ಭೂಮಿ ಮಂಜೂರು ಮಾಡಿರುವುದು ಪತ್ತೆಯಾಗಿದೆ. 5 ಕೈಗಾರಿಕಾ ಪ್ರದೇಶಗಳ ಪೈಕಿ ದಾಬಸ್‌ಪೇಟೆಯಲ್ಲಿ ಸಾಮಾನ್ಯ ವರ್ಗದ ಉದ್ದಿಮೆದಾರರಿಗೆ ನಿಗದಿಗಿಂತ ಶೇ.292 ಹೆಚ್ಚುವರಿ ಯೋಜನೆಗೆ ಮಂಜೂರು ಮಾಡಲಾಗಿದೆ. ಹೀಗೆ ಉಳಿದ ಕೈಗಾರಿಕಾ ಪ್ರದೇಶಗಳಲ್ಲೂ ಸಾಮಾನ್ಯ ವರ್ಗ ಮತ್ತು ಎಸ್ಸಿ/ಎಸ್ಟಿ ವರ್ಗದ ಉದ್ದಿಮೆದಾರರ ಯೋಜನೆಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಇಲಾಖೆ ಕ್ರಮ ಕೈಗೊಂಡಿದೆ.