ಸಾರಾಂಶ
ಕೆಲಸ ಮಾಡದವರು, ಕುಡಿದು ಬರುವ ಪಿಡಿಒಗಳನ್ನು ಶಾಸಕರು ಬೇರೆಡೆ ವರ್ಗಾವಣೆ ಮಾಡಿದರೆ ಅವರು ಕೆಎಟಿಯಿಂದ ತಡೆಯಾಜ್ಞೆ ತರುತ್ತಾರೆ ಎಂದರೆ ಉಪ ಕಾರ್ಯದರ್ಶಿಗೆ ಪಿಡಿಒಗಳ ಮೇಲೆ ಹಿಡಿತವಿಲ್ಲ ಎಂದರ್ಥ. ಯಾರ್ಯಾಪರು ತಡೆಯಾಜ್ಞೆ ತಂದಿದ್ದಾರೋ ಅವರ ಕಾರ್ಯಕ್ಷಮತೆ ಸರಿಯಿಲ್ಲದಿದ್ದರೆ ತಕ್ಷಣ ಅಮಾನತು ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚನೆ ನೀಡಿದರು.
ಹಾವೇರಿ: ಕೆಲಸ ಮಾಡದವರು, ಕುಡಿದು ಬರುವ ಪಿಡಿಒಗಳನ್ನು ಶಾಸಕರು ಬೇರೆಡೆ ವರ್ಗಾವಣೆ ಮಾಡಿದರೆ ಅವರು ಕೆಎಟಿಯಿಂದ ತಡೆಯಾಜ್ಞೆ ತರುತ್ತಾರೆ ಎಂದರೆ ಉಪ ಕಾರ್ಯದರ್ಶಿಗೆ ಪಿಡಿಒಗಳ ಮೇಲೆ ಹಿಡಿತವಿಲ್ಲ ಎಂದರ್ಥ. ಯಾರ‍್ಯಾರು ತಡೆಯಾಜ್ಞೆ ತಂದಿದ್ದಾರೋ ಅವರ ಕಾರ್ಯಕ್ಷಮತೆ ಸರಿಯಿಲ್ಲದಿದ್ದರೆ ತಕ್ಷಣ ಅಮಾನತು ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚನೆ ನೀಡಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕರು ಈ ವಿಷಯ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿದರು. ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಸುಣಕಲ್ಲಬಿದರಿಯ ಪಿಡಿಒ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ೬ ತಿಂಗಳ ಹಿಂದೆಯೇ ವರ್ಗಾವಣೆ ಮಾಡಿಸಿದರೂ ತಾಪಂ ಇಒ ಪಿಡಿಒ ಅವರನ್ನು ರಿಲೀವ್ ಮಾಡುತ್ತಿಲ್ಲ ಎಂದು ಕಿಡಿಕಾರಿದರು. ಆಗ ತಾಪಂ ಇಒ ಆ ಪಿಡಿಒ ಅವರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ ಎಂದರು. ಆಗ ಧ್ವನಿಗೂಡಿಸಿದ ಶಾಸಕ ಪ್ರಕಾಶ ಕೋಳಿವಾಡ ರಾಣಿಬೆನ್ನೂರಿನ ನಾಲ್ವರು ಪಿಡಿಒಗಳನ್ನು ವರ್ಗಾವಣೆ ಮಾಡಿಸಿದರೂ ಅವರೂ ತಡೆಯಾಜ್ಞೆ ತಂದಿದ್ದಾರೆ. ಹೀಗಾದರೆ ಹೇಗೆ ಕೆಲಸ ಮಾಡಿಸೋದು ಎಂದರು. ಇದರಿಂದ ಗರಂ ಆದ ಸಚಿವರು, ಜಿಪಂ ಡಿಎಸ್‌ಗೆ ಪಿಡಿಒಗಳ ಮೇಲೆ ಹಿಡಿತ ಇದ್ದಂತಿಲ್ಲ, ಕೂಡಲೇ ತಡೆಯಾಜ್ಞೆ ತಂದಿರುವ ಪಿಡಿಒಗಳ ಕಾರ್ಯಕ್ಷಮತೆ ಪರಿಶೀಲಿಸಿ ಅಮಾನತನ್ನು ಮಾಡಿ ಎಂದು ತಾಕೀತು ಮಾಡಿದರು.ಶಾಸಕ ಶ್ರೀನಿವಾಸ ಮಾತನಾಡಿ, ಹಾನಗಲ್ಲ ತಾಲೂಕಿನ ಗೊಂದಿ ಪಿಡಿಒ ಕುಡಿದು ಆಫೀಸ್‌ಗೆ ಬರುತ್ತಾರೆ. ಮೆಡಿಕಲ್ ಪರೀಕ್ಷೆ ನಡೆಸಿ ಕ್ರಮ ಕೈಗೊಳ್ಳುವಂತೆ ತಾಪಂ ಇಒಗೆ ಸೂಚಿಸಿದರೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಹರಿಹಾಯ್ದರು. ಗ್ರಾಮೀಣ ಭಾಗದ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತೆ. ಅಬಕಾರಿ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಶಾಸಕ ಮಾನೆ ಪ್ರಶ್ನಿಸಿದರು. ಆಗ ಅಬಕಾರಿ ಡಿಸಿ ಸಮಜಾಯಿಸಿ ನೀಡಲು ಮುಂದಾದಾಗ ಸಚಿವರು, ಜುಲೈನಿಂದ ಎಲ್ಲೇಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಾರೆ ಎಂಬುದನ್ನು ಬೀಟ್ ಪೊಲೀಸರಿಂದ ಮಾಹಿತಿ ಪಡೆದು ಪೊಲೀಸರು, ಅಬಕಾರಿ ಇಲಾಖೆಯವರು ದಾಳಿ ಮಾಡಿ ಎಂದು ಸೂಚಿಸಿದರು.ನಮ್ಮ ಕೈಕಟ್ಟಿ ಕೂರಿಸ್ತಾರೆ ಎಂದ ಶಾಸಕ: ಪ್ರಕಾಶ ಕೋಳಿವಾಡ ಮಾತನಾಡಿ, ನಾನು ಶಾಸಕನಾಗಿ ಆಯ್ಕೆಯಾದ ತಕ್ಷಣ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಸೂಚಿಸಿದ್ದೆ. ಆಗ ಅಬಕಾರಿ, ಪೊಲೀಸರು ಇಲಾಖೆಯವರು ನಮ್ಮ ಹಿಂಬಾಲಕರಗೇ ತೊಂದರೆ ಕೊಟ್ಟು ಅಕ್ರಮ ಮದ್ಯ ಮಾರಾಟ ಮಾಡದಂತೆ ನಿಲ್ಲಿಸಿದ್ದರು. ಆಗ ಅವರೆಲ್ಲ ಸೇರಿ ನನ್ನ ಮನೆಗೆ ಬಂದು ಕುಳಿತುಬಿಟ್ಟರು. ಹೀಗೆ ಅಧಿಕಾರಿಗಳು ನಮ್ಮ ಕೈಕಟ್ಟಿ ಕೂರಿಸುವ ಕೆಲಸ ಮಾಡ್ತಾರೆ ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.ಹಾನಗಲ್ಲನಲ್ಲಿ ಪೊಲೀಸರ ಬಗ್ಗೆ ಭಯ ಇಲ್ಲ: ಹಾನಗಲ್ಲನಲ್ಲಿ ಕುಡಿದು ಹಾಡುಹಗಲೇ ಅಮಾಯಕರ ಮೇಲೆ, ಮಹಿಳೆಯರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಮೀಟರ್ ಬಡ್ಡಿ ದಂಧೆ, ಹಲ್ಲೆ ನಡೆಸಿ ಬಡ್ಡಿ ವಸೂಲಿ, ಅಂಗಡಿಗಳು, ಹೋಟೆಲ್, ಬೇಕರಿಗಳಲ್ಲಿ ಬೆದರಿಸಿ ವಸೂಲಿ ಮಾಡುವುದು, ಊಟ ಮಾಡಿ ಬಿಲ್ ಕೊಡದೇ ಹೋಗುವುದು ನಡೆದಿದೆ. ರೌಡಿ ಸೀಟರ್ ಜತೆಗೆ ಸ್ಥಳೀಯ ಪೊಲೀಸರು ಕುಳಿತು ವ್ಯವಹಾರ ನಡೆಸ್ತಾರೆ. ಇದರ ಹಿಂದೆ ಯಾರಿದ್ದಾರೆ ಎಂದು ಕಿಡಿಕಾರಿದ ಶಾಸಕ ಶ್ರೀನಿವಾಸ ಮಾನೆ, ಪೊಲೀಸರ ಬಗ್ಗೆ ಭಯನೇ ಇಲ್ಲದಂತಾಗಿದೆ. ಇನ್ನು ಮುಂದೆ ಇಂಥ ಘಟನೆ ನಡೆದರೆ ನಾನೇ ಬೀದಿಗೆ ಇಳಿಯಬೇಕಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಸಚಿವ ಶಿವಾನಂದ ಪಾಟೀ ಪ್ರತಿಕ್ರಿಯಿಸಿ, ಅಪರಾಧಿಗಳ ಜತೆ ಪೊಲೀಸರು ಏಕೆ ಇರ್ತಾರೆ, ಎಸ್ಪಿ ಈ ಬಗ್ಗೆ ತನಿಖೆ ನಡೆಸಿ ವರದಿ ಕೊಡಿ ಎಂದು ಸೂಚಿಸಿದರು.