ಅಮಾನತುಗೊಳಿಸಿರುವ ಜಿಲ್ಲಾಡಳಿತ ಕ್ರಮ ಸ್ವಾಗತಾರ್ಹ: ಬಿಜೆಪಿ

| Published : Jul 26 2024, 01:36 AM IST

ಅಮಾನತುಗೊಳಿಸಿರುವ ಜಿಲ್ಲಾಡಳಿತ ಕ್ರಮ ಸ್ವಾಗತಾರ್ಹ: ಬಿಜೆಪಿ
Share this Article
  • FB
  • TW
  • Linkdin
  • Email

ಸಾರಾಂಶ

ವಿವಾದದ ಬೆನ್ನಲ್ಲೇ ಕಾರ್ಕಳ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಬಿರುಸಿನ ಕೆಸೆರೆರಚಾಟ ಆರಂಭವಾಗಿದೆ. ನಿರ್ದೇಶಕರನ್ನು ಅಮಾನತುಗೊಳಿಸಿದ ಜಿಲ್ಲಾಡಳಿತದ ಕ್ರಮವನ್ನು ಬಿಜೆಪಿ ಮುಖಂಡರು ಸ್ವಾಗತಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಪರಶುರಾಮ ಥೀಂ ಪಾರ್ಕ್ ವಿವಾದದ ಬೆನ್ನಲ್ಲೆ ಕಾರ್ಕಳ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಬಿರುಸಿನ ಕೆಸರೆರೆಚಾಟ ಆರಂಭವಾಗಿದೆ. ಉಡುಪಿ ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಉಡುಪಿ ಜಿಲ್ಲಾಧಿಕಾರಿ ಅಮಾನತು ಮಾಡಿದ್ದು ಕಾರ್ಕಳ ಬಿಜೆಪಿ ಮುಖಂಡರು ಉಡುಪಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದಾರೆ.

ಕಾರ್ಕಳ ತಾಲೂಕಿನ ಬೈಲೂರು- ಉಮಿಕ್ಕಳ ಬೆಟ್ಡದ ಮೇಲಿನ ಪರಶುರಾಮ ಥೀಂ ಪಾರ್ಕ್ ಯೋಜನೆ ಬಗ್ಗೆ ಅಪಪ್ರಚಾರ, ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಹಾಗೂ ಕಾನೂನು ಉಲ್ಲಂಘನೆ ಮಾಡಿದವರ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಜೆಪಿ ಕಾರ್ಕಳ ಮಂಡಲದಿಂದ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಒಂದು ವರುಷದ ಬಳಿಕ ಯೋಜನೆಯ ಅನುಷ್ಠಾನ ಅಧಿಕಾರಿ ಎಂದು ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿದೇರ್ಶಕನನ್ನು ಅಮಾನತುಗೊಳಿಸಿರುವ ಜಿಲ್ಲಾಡಳಿತ ಕ್ರಮ ಸ್ವಾಗತಾರ್ಹ, ಮೊದಲ ದಿನದಿಂದಲು ಜಿಲ್ಲಾಡಳಿತ ಇಂತಹ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುತ್ತಿದ್ದರೆ ಪ್ರವಾಸಿ ಯೋಜನೆಯೊಂದರ ಕುರಿತು ಇಷ್ಟೊಂದು ಅಪಪ್ರಚಾರಗಳಿಗೆ ಒಳಗಾಗುತ್ತಿರಲಿಲ್ಲ, ತನಿಖೆ ನಡೆದು ಕಾಮಗಾರಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿತ್ತು, ತಡವಾಗಿ ಜಿಲ್ಲಾಡಳಿತ ಎಚ್ಚರಗೊಂಡಿದೆ.

ಪರಶುರಾಮ ಥೀಮ್ ಪಾರ್ಕ್‌ ಯೋಜನೆಯ ಕಾಮಗಾರಿಯನ್ನು ಅತೀ ಶೀಘ್ರವಾಗಿ ಪೂರ್ಣಗೊಳಿಸಿ, ಸಾರ್ವಜನಿಕ ಪ್ರವೇಶಕ್ಕೆ ಅನುವು ಮಾಡಿಕೊಡುವಂತೆ ಬಿಜೆಪಿ ನಿಯೋಗದಿಂದ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಸುರೇಶ್ ಶೆಟ್ಟಿ ಶಿವಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ್ ಶೆಟ್ಟಿ, ಉಪಾಧ್ಯಕ್ಷ ಕಿರಣ್ ಕುಮಾರ್ ಉಡುಪಿ, ಬೋಳ ಜಯರಾಮ್ ಸಾಲ್ಯಾನ್, ಉದಯ್ ಎಸ್. ಕೋಟ್ಯಾನ್, ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಮತ್ತಿತರರು ಉಪಸ್ಥಿತರಿದ್ದರು.

---------------

ನಕಲಿ ಪ್ರತಿಮೆ ವಿರುದ್ದದ ಹೋರಾಟಕ್ಕೆ ಮೊದಲ ಜಯ : ಶುಭದರಾವ್

ಮಾಜಿ ಶಾಸಕ ಸುನಿಲ್ ಕುಮಾರ್ ಅವರ ಜೊತೆ ಸೇರಿಕೊಂಡು ಭ್ರಷ್ಟಾಚಾರ ನಡೆಸಿ ಬೈಲೂರು ಉಮಿಕಲ್ಲು ಬೆಟ್ಟದಲ್ಲಿ ಪರಶುರಾಮನ ನಕಲಿ ಪ್ರತಿಮೆ ಸ್ಥಾಪಿಸಿ ಜನತೆಗೆ ಮೋಸ ಎಸಗಿದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶಿಸಿರುವುದು ಸ್ವಾಗತಾರ್ಹ, ಇದು ಸತ್ಯದ ಹೋರಾಟಕ್ಕೆ ಸಂದ ಮೊದಲ ಜಯ ಎಂದು ಕಾಂಗ್ರೆಸ್ ವಕ್ತಾರ ಶುಭದ್ ರಾವ್ ಹೇಳಿದ್ದಾರೆ.

ಕಳೆದ ಒಂದು ವರ್ಷದಿಂದ ಈ ಪ್ರತಿಮೆ ನಕಲಿ ಎಂದು ಹೋರಾಟ ನಡೆಸಿದರೂ ಇದು ಅಸಲಿ ಪ್ರತಿಮೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ಮೂಲಕ ಸುಳ್ಳು ಪ್ರಕಟಣೆ ನೀಡಿ, ಪ್ರವಾಸೋದ್ಯಮ ಸಚಿವರಿಗೂ ಸುಳ್ಳು ಮಾಹಿತಿ ನೀಡಿ, ಪ್ರತಿಮೆ ಸಾಗಾಟಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಇಟ್ಟುಕೊಳ್ಳದೆ ಎಲ್ಲರ ದಾರಿ ತಪ್ಪಿಸಿದರ ಪರಿಣಾಮ ಈ ಶಿಕ್ಷೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸತ್ಯಾಸತ್ಯತೆಗಳು ಬಯಲಿಗೆ ಬರಲಿದ್ದು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲಿದೆ ಎಂಬ ವಿಶ್ವಾಸ ನಮ್ಮದಾಗಿದೆ ಎಂದು ಕಾರ್ಕಳ ಕಾಂಗ್ರೆಸ್ ವಕ್ತಾರ ಶುಭದರಾವ್ ತಿಳಿಸಿದ್ದಾರೆ