ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ: ವಾಹನಗಳ ತಪಾಸಣೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ಸಸ್ಪೆಂಡ್‌ನಂತಹ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ಜಿಪಂ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ರಾಹುಲ ಶಿಂಧೆ ಎಚ್ಚರಿಕೆ ನೀಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಗಡಿಗೆ ತೆರೆದಿರುವ ಚೆಕ್ ಪೋಸ್ಟ್‌ಗೆ ಸೋಮವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿದ ಅವರು, ಇದು ದೊಡ್ಡ ರಸ್ತೆ ಅಲ್ಲದೆ ಜನಸಂದಣಿ, ವಾಹನಗಳ ಓಡಾಟ ಹೆಚ್ಚಿದ್ದರೂ ಇಲ್ಲಿಯವರೆಗೂ ಒಂದೂ ಪ್ರಕರಣ ದಾಖಲಾಗಿಲ್ಲ ಏಕೆ ಎಂದು ಸಿಬ್ಬಂದಿ ಕರ್ತವ್ಯ ನಿರ್ವಹಣೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಶೆಡ್‌ಗಳಲ್ಲಿ ಕುಳಿತು ಕರ್ತವ್ಯ ನಿರ್ವಹಿಸಿದ್ದು ಸಾಕು. ರಸ್ತೆಯ ಮೇಲೆ ನಿಂತು ಹದ್ದಿನ ಕಣ್ಣಿಟ್ಟು ಕರ್ತವ್ಯ ನಿರ್ವಹಿಸಿ ಎಂದು ತರಾಟೆಗೆ ತೆಗೆದುಕೊಂಡರು.ನ್ಯಾಯಸಮ್ಮತ ಚುನಾವಣೆ ನಡೆಸಲು ನಿಮ್ಮ ಕರ್ತವ್ಯವೂ ಕೂಡ ಪಾತ್ರವಹಿಸಲಿದೆ. ಉರಿ ಬಿಸಲಿದೆ ನಿಜ. ಹಾಗಂತ ಕರ್ತವ್ಯದಲ್ಲಿ ನಿರ್ಲಕ್ಷ್ಯ ಸಲ್ಲದು. ಪರ್ಯಾಯವಾಗಿ ನೆರಳಿನ ವ್ಯವಸ್ಥೆ ಮಾಡಿಕೊಳ್ಳಿ. ಸಂಚರಿಸುವ ಲಾರಿ, ಕಾರು, ಮಿನಿ ವಾಹನ ಸೇರಿದಂತೆ ಎಲ್ಲ ಬಗೆಯ ವಾಹನಗಳ ತಪಾಸಣೆ ಮಾಡಿ, ಬೈಕ್‌ಗಳನ್ನೂ ಬಿಡಬೇಡಿ. ದಾಖಲೆಗಳಿಲ್ಲದೆ ನಗದು, ಸಾಮಗ್ರಿ, ಚಿನ್ನಾಭರಣ, ಮಧ್ಯ ಮತ್ತು ವಾಣಿಜ್ಯ ಸರಕುಗಳ ವಾಹನಗಳು ಸಾಗಾಟ ಮಾಡುವುದನ್ನು ಪರಿಶೀಲಿಸಬೇಕು. ದಾಖಲೆ ರಹಿತ ಸಾಮಗ್ರಿಗಳು, ನಗದು ದೊರೆತರೆ ನಿಯಮಾನುಸಾರ ಪ್ರಕರಣ ದಾಖಲಿಸಬೇಕು. ಇಲ್ಲವೇ ಕ್ರಮ ಎದುರಿಸಲು ಸಿದ್ದರಾಗಿ ಎಂದು ಎಚ್ಚರಿಕೆ ನೀಡಿದರು.
ಅಥಣಿ ತಹಸೀಲ್ದಾರ್ ಕಚೇರಿಯಲ್ಲಿ ವಿವಿಧ ತಂಡಗಳ ಮುಖ್ಯಸ್ಥರ ಸಭೆ ನಡೆಸಿದರು. ಸೆಕ್ಟರ್ ಆಫೀಸ್‌ರ ಫ್ಲೈ ಸ್ಕ್ವಾಡ್ ಒಳಗೊಂಡ ಅನೇಕ ತಂಡದ ಮುಖ್ಯಸ್ಥರು ಭಾಗವಹಿಸಿದ್ದರು. ತಮ್ಮ ತಮ್ಮ ಜವಾದ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ನಿರ್ಲಕ್ಷ ಮಾಡಿದರೆ ಅಮಾನತ ಮಾಡಲಾಗುವದು ಫ್ಲಾಯಿಂಗ್ ಸ್ಕ್ಯಾಡ್ ತಂಡ ಪ್ರತಿ ವಾಹನಗಳನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು. ಹಲವಾರು ಮೂಲಗಳಿಂದ ಪ್ರಚಾರ ಮಾಡುವುದನ್ನು ಹದ್ದಿ ಕಣ್ಣು ಇಟ್ಟು ಕ್ರಮ ಜರುಗಿಸಿಸಬೇಕು ಎಂದು ತಿಳಿಸಿದರು.ಸಭೆಯಲ್ಲಿ ಅಥಣಿ ತಹಸೀಲ್ದಾರ್ ವಾಣಿ.ಯು, ತಾಪಂ ಇಒ ಶಿವಾನಂದ ಕಲ್ಲಪೂರ, ನೀರಾವರಿ ಇಲಾಖೆ ಎಂಜಿನಿಯರ್ ಪ್ರವಿಣ ಹುಣಸಿಕಟ್ಟಿ, ಜಿ.ಎಸ್.ಮಠದ ಪಿಡಿಒ ಬೀರಪ್ಪ ಕಡಗಂಚಿ, ಆರ್.ಎಸ್.ಹಿರೇಮಠ, ಸಿ.ಎನ್.ಹಾಲಳ್ಳಿ, ಎಸ್.ಎಸ್.ಸನದಿ, ಆರ್.ಎಚ್.ಪಾಟೀಲ ಉಪಸ್ಥಿತರಿದ್ದರು.