ಟಿಎಸ್‌ಎಸ್ ಆಡಳಿತಾಧಿಕಾರಿ ನೇಮಕಕ್ಕೆ ತಡೆ

| Published : May 29 2024, 12:58 AM IST

ಸಾರಾಂಶ

ಸೋಮವಾರ ಸಂಜೆ ತೀರ್ಪು ನೀಡಿದ ಸಹಾಯಕ ಜಂಟಿ ನಿಬಂಧಕರು ಆಡಳಿತಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ ನೀಡಿದ್ದಲ್ಲದೇ, ಹಾಲಿ ಆಡಳಿತ ಮಂಡಳಿ ಅಧಿಕಾರ ನಡೆಸುವಂತೆ ತೀರ್ಪು ನೀಡಿದ್ದರು.

ಶಿರಸಿ: ಟಿಎಸ್‌ಎಸ್ ಆಡಳಿತಾಧಿಕಾರಿ ನೇಮಕದ ಆದೇಶಕ್ಕೆ ಬೆಳಗಾವಿಯ ಸಹಕಾರಿ ಜಂಟಿ ನಿಬಂಧಕರ ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಿಕ್ಕಿದ್ದು, ಹಾಲಿ ಆಡಳಿತ ಮಂಡಳಿಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ತಂಡವು ಮೇಲುಗೈ ಸಾಧಿಸಿದೆ.

ಚುನಾವಣೆ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿ, ಜಿಲ್ಲಾ ಉಪ ನಿಬಂಧಕರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ವಿರೋಧಿ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ.

ಟಿಎಸ್‌ಎಸ್‌ನ ಆಡಳಿತ ಮಂಡಳಿಗೆ ನಿಯಮಾನುಸಾರ ಚುನಾವಣೆ ನಡೆದಿಲ್ಲ. ಹಾಲಿ ಆಡಳಿತ ಮಂಡಳಿಯ ಆಡಳಿತವನ್ನು ಅಸಿಂಧುಗೊಳಿಸಬೇಕೆಂದು ವಿನಾಯಕ ಭಟ್ಟ ಹಾಗೂ ಗಣಪತಿ ರಾಯ್ಸದ್ ಜಿಲ್ಲಾ ಸಹಕಾರಿ ನಿಬಂಧಕರಲ್ಲಿ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿ, ಚುನಾವಣೆ ನಿಯಮಾನುಸಾರವಾಗಿ ನಡೆದಿಲ್ಲ ಎಂದು ತೀರ್ಪು ನೀಡಿ, ಆಡಳಿತಾಧಿಕಾರಿ ನೇಮಕ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ, ಹಾಲಿ ಆಡಳಿತ ಮಂಡಳಿಯು ಬೆಳಗಾವಿಯ ಸಹಾಕಾರಿ ಜಂಟಿ ನಿಬಂಧಕರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ತೀರ್ಪು ನೀಡುವಂತೆ ವಿನಂತಿಸಿಕೊಂಡಿದ್ದರು. ಸೋಮವಾರ ಸಂಜೆ ತೀರ್ಪು ನೀಡಿದ ಸಹಾಯಕ ಜಂಟಿ ನಿಬಂಧಕರು ಆಡಳಿತಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ ನೀಡಿದ್ದಲ್ಲದೇ, ಹಾಲಿ ಆಡಳಿತ ಮಂಡಳಿ ಅಧಿಕಾರ ನಡೆಸುವಂತೆ ತೀರ್ಪು ನೀಡಿದ್ದರು.

ಮಂಗಳವಾರ ಬೆಳಗ್ಗೆ ನಿಯಮಾನುಸಾರ ಆಡಳಿತಾಧಿಕಾರಿಯಿಂದ ಗೋಪಾಲಕೃಷ್ಣ ವೈದ್ಯ ಅಧ್ಯಕ್ಷ ಸ್ಥಾನದ ಅಧಿಕಾರ ಸ್ವೀಕರಿಸಿದರು. ನಂತರ ನೆರೆದಿದ್ದ ಷೇರು ಸದಸ್ಯರನ್ನುದ್ದೇಶಿಸಿ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಮ್ಮ ತಂಡ ಗೆಲುವು ಸಾಧಿಸಿದ ಹಿನ್ನೆಲೆ ತಾಲೂಕಿನ ಕೊಳಗಿಬೀಸ್‌ನ ಮಾರುತಿ ದೇವಸ್ಥಾನದಲ್ಲಿ ಸಹಕಾರಿ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಸಾವಿರಾರು ಸಂಖ್ಯೆಯ ಷೇರು ಸದಸ್ಯರು ಪಾಲ್ಗೊಂಡಿದ್ದರು. ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಸದಸ್ಯರು ಇಂದು ಸೇರಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ ಲೆಕ್ಕ ಪರಿಶೋಧಕರನ್ನು ಬದಲಾವಣೆ ಮಾಡಬೇಕೆಂದು ಸದಸ್ಯರ ಅಭಿಪ್ರಾಯದಂತೆ ನೂತನ ಲೆಕ್ಕ ಪರಿಶೋಧಕರನ್ನು ನೇಮಕ ಮಾಡಿ, ೫ ವರ್ಷದ ಲೆಕ್ಕ ತಪಾಸಣೆ ಮಾಡಿಸಬೇಕೆಂದು ತೀರ್ಮಾನಿಸಿ, ಸರ್ಕಾರಕ್ಕೆ ತಿಳಿಸಿದಾಗ ಸರ್ಕಾರದಿಂದ ಮುದ್ರೆ ದೊರೆತಿದೆ.

ಲೆಕ್ಕ ಪರಿಶೋಧನೆ ಆರಂಭವಾದ ನಂತರ ದೊಡ್ಡ ಹೊಡ್ಡ ಹೊಂಡಗಳು, ಕೋಟಿ ಕೋಟಿ ಹಣ ದೋಚುವವರಿದ್ದಾರೆ ಎಂಬುದು ತಿಳಿಯಿತು. ಸಂಘದ ಪ್ರತಿ ಹಂತದಲ್ಲಿಯೂ ಹಣ ದೋಚಿ, ನುಂಗಿ ನೀರು ಕುಡಿದಿದ್ದಾರೆ. ಸಂಘದ ಹಣ ಲಪಟಾಯಿಸಿದವರ ಮೇಲೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಲು ಮುಂದಾದೆವು. ವೈಯಕ್ತಿಕ ದ್ವೇಷವನ್ನು ನಾವು ಸಂಘದ ವ್ಯವಹಾರದಲ್ಲಿ ಎಳೆದು ತಂದಿಲ್ಲ. ೫ ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ್ದೇವೆ. ಆರಕ್ಷಕರ ತಾಂತ್ರಿಕ ಕಾರಣದಿಂದ ೬ನೇ ಪ್ರಕರಣ ದಾಖಲಿಸಲು ಸಮಸ್ಯೆಯಾಗುತ್ತಿದ್ದು, ಅದರ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜತೆ ಚರ್ಚಿಸುತ್ತೇನೆ ಎಂದರು.

ಹಿಂದಿನ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಹಿಂದಿನ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ನೆರವಿನಿಂದ ₹೧.೮೩ ಲಕ್ಷ ಭವಿಷ್ಯನಿಧಿ ಮುಂಚಿತವಾಗಿ ಪಡೆದುಕೊಂಡಿರುವುದು. ರವೀಶ ಹೆಗಡೆ ಸಂಘಕ್ಕೆ ಖರ್ಚು ಹಾಕಿ ₹೪೦ ಲಕ್ಷ ಮೊತ್ತದ ವೊಲ್ವೋ ಕಾರು ಪಡೆದಿರುವುದು. ರವೀಶ ಹೆಗಡೆ, ರಾಮಕೃಷ್ಣ ಹೆಗಡೆ, ಗಿರೀಶ ಪೂಜಾರಿ ಸೇರಿಕೊಂಡು ಎಪಿಎಂಸಿ ರಿಂಗ್ ರಸ್ತೆಯಲ್ಲಿ ಆಸ್ತಿ ಖರೀದಿ ಹಗರಣ, ರವೀಶ ಹೆಗಡೆ, ರಾಮಕೃಷ್ಣ ಹೆಗಡೆ, ಅನಿಲಕುಮಾರ ಮುಷ್ಠಗಿ, ವಿಮಲಾ ಮುಷ್ಠಗಿ ಸೇರಿಕೊಂಡು ಟೆಂಪೋ ಬಾಡಿಗೆ ಪಡೆದ ಹಗರಣ ಮಾಡಿದ್ದಾರೆ. ರೈತರಿಗೆ ಮಾಡಿದ ಅನ್ಯಾಯ ಎಂದು ಪ್ರಕರಣ ದಾಖಲಿಸಿದ್ದೇವೆ.

ರವೀಶ ಹೆಗಡೆ, ಪ್ರವೀಣ ಹೆಗಡೆ, ಮಾಬ್ಲೇಶ್ವರ ಹೆಗಡೆ ಸೇರಿಕೊಂಡು ₹೧೦೦ ಕೋಟಿ ಹಗರಣ ಪ್ರಕರಣ ದಾಖಲಿಸಿದರೆ ಇನ್ನಷ್ಟು ಸಮಸ್ಯೆಯಾಗುತ್ತದೆ ಎಂದು ಕಾಣದ ಕೈಗಳು ಚುನಾವಣೆಯೇ ಅಕ್ರಮವಾಗಿ ನಡೆದಿದೆ ಎಂದು ಜಿಲ್ಲಾ ಸಹಕಾರಿ ಇಲಾಖೆಯ ನಿಬಂಧಕರಿಗೆ ದೂರು ಸಲ್ಲಿಸಿ, ರಾಜಕೀಯ ಒತ್ತಡ ತಂದು ಆಡಳಿತಾಧಿಕಾರಿ ನೇಮಕ ಮಾಡಿಸಿದ್ದಾರೆ. ಬಡ ರೈತರಿಗೆ ಸಾಲ ನೀಡಬೇಕಾದರೆ ಸಾಕಷ್ಟು ಸಮಸ್ಯೆ ನೀಡುತ್ತಿದ್ದರು. ತಮಗೆ ಬೇಕಾದರವರಿಗೆ ಕೋಟಿ ಕೋಟಿ ರು. ಸಾಲ ನೀಡಿದ್ದಾರೆ ಎಂದು ಆರೋಪಿಸಿದರು.

ಉಪಾಧ್ಯಕ್ಷ ಎಂ.ಎನ್. ಹೆಗಡೆ ತೋಟಿಮನೆ, ನಿರ್ಮಲಾ ಹೆಗಡೆ, ರವಿ ಹೆಗಡೆ ಹಳದೋಟ, ವಸಂತ ಹೆಗಡೆ ಸಿರಿಕುಳಿ, ರವೀಂದ್ರ ಹೆಗಡೆ ಐನಕೈ ಸೇರಿದಂತೆ ಮತ್ತಿತರರು ಇದ್ದರು.ಪ್ರಕರಣ ದಾಖಲಿಸಲು ಕ್ರಮ: ಡಿಜಿಟಲ್ ಮೀಡಿಯಾದ ವ್ಯಕ್ತಿಯೊಬ್ಬ ನಮ್ಮ ಆಡಳಿತ ಮಂಡಳಿ ವಿರುದ್ಧ ಇಲ್ಲಸಲ್ಲದ ಬರವಣಿಗೆ ಬರೆಯುತ್ತಿದ್ದಾನೆ. ಅವನ ವಿರುದ್ಧ ಪ್ರಕರಣ ದಾಖಲಿಸಲು ಬಹಳ ಒತ್ತಡ ಬಂತು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರಶ್ನೆ ಮಾಡುವ ಅಧಿಕಾರವಿದೆ ಎಂಬ ಕಾರಣಕ್ಕೆ ಸುಮ್ಮನೆ ಉಳಿಯಲಾಗಿದೆ. ಸಂಸ್ಥೆಯ ಹೆಸರು ಕೆಡಿಸಲು ಮುಂದಾದರೆ ಖಂಡಿತ ಕಾನೂನು ಮೂಲಕ ಪ್ರಕರಣ ದಾಖಲಿಸಲು ಆಡಳಿತ ಮಂಡಳಿ ತೀರ್ಮಾನಿಸುತ್ತದೆ ಎಂದು ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ತಿಳಿಸಿದರು.

ಸಾಲ ಕಟ್‌ಬಾಕಿ ಇಟ್ಟುಕೊಂಡ ರಾಜಕೀಯ ಪುಢಾರಿ

ಕಳೆದ ೪೦ ವರ್ಷದಿಂದ ರಾಜಕೀಯದವರ ಜತೆ ಒಡನಾಟವಿದೆ ಎಂದು ತಿರುಗಾಡುತ್ತಿರುವ ರಾಜಕೀಯ ಪುಢಾರಿಯೊಬ್ಬ ₹೨ ಕೋಟಿ ಸಾಲ ಕಟ್‌ಬಾಕಿ ಉಳಿಸಿಕೊಂಡಿರುವುದಲ್ಲದೇ, ಸಾಲದ ಬಡ್ಡಿಯನ್ನು ಪಾವತಿಸಿಲ್ಲ. ಆಡಳಿತ ಮಂಡಳಿ ಮಾಡಿದ ಠರಾವನ್ನು ಸದಸ್ಯರಿಗೆ ನೀಡುತ್ತೇವೆ. ಎಲ್ಲ ದಾಖಲೆಗಳನ್ನು ಕೊಡುತ್ತೇವೆ. ಸರ್ಕಾರದ ಮುಖ್ಯ ಸ್ಥಾನದಲ್ಲಿರುವವರಿಗೆ ಕೆಳ ಹಂತದಲ್ಲಿರುವ ರಾಜಕಾರಣಿ ಮತ್ತು ಅಧಿಕಾರಿಗಳು ಮಸಿ ಬಡಿಯುವ ಕೆಲಸ ಮಾಡಿದ್ದಾರೆ. ಪ್ರಕರಣದಿಂದ ಖುಲಾಸೆಯಾಗಿಲ್ಲ. ತಡೆಯಾಜ್ಞೆ ಬಂದಿದ್ದು, ಸದ್ಯಕ್ಕೆ ಆಡಳಿತಾಧಿಕಾರಿಯಿಂದ ಮುಕ್ತಿ ಸಿಕ್ಕಿದೆ ಎಂದು ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ತಿಳಿಸಿದರು.