ಸಾರಾಂಶ
ಕಾರಟಗಿ: ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿನ ಕಡತಗಳ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿ ಕಾರಟಗಿಯ ಗ್ರಾಮ ಆಡಳಿತಾಧಿಕಾರಿ ಸೋಮನಾಥ ತಳವಾರ ಅವರನ್ನು ಅಮಾನತು ಮಾಡಿ ಮತ್ತು ಸಿದ್ದಾಪುರ ಉಪತಹಸೀಲ್ದಾರ್ ಪ್ರಕಾಶ ನಾಯಕ ಅವರನ್ನು ವರ್ಗಾಯಿಸಿ ಜಿಲ್ಲಾಧಿಕಾರಿ ನಳಿನ್ ಅತುಲ್ ಆದೇಶಿಸಿದ್ದಾರೆ.
ಸೋಮನಾಥ ಈ ಹಿಂದೆ ತಹಶೀಲ್ದಾರ ಕಚೇರಿಯಲ್ಲಿ ವಿಷಯ ನಿರ್ವಾಹಕ, ಕಚೇರಿ ಕಂದಾಯ ನಿರೀಕ್ಷಿಕರಾಗಿ ಹಾಗೂ ಪ್ರಕಾಶ ನಾಯಕ ಭೂಮಿ ಶಿರಸ್ತೆದಾರ ಎಂದು ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಅವಧಿಯಲ್ಲಿ ಪಹಣಿ ತಿದ್ದುಪಡಿ ಮಾಡಲಾದ ೧೨೦ ಕೇಸಿನ ಪೈಕಿ ೧೦೦ ಪ್ರಕರಣಗಳಲ್ಲಿ ದಾಖಲಾತಿಗಳಿಲ್ಲದೆ ವರ್ಗಾವಣೆ ಮಾಡಿ ಕರ್ತವ್ಯಲೋಪ ಎಸಗಿರುವುದು, ರಾಜ್ಯ ನಾಗರಿಕ ಸೇವಾ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.ಈ ಪ್ರಕರಣ ತಹಶೀಲ್ದಾರ ಕುಮಾರಸ್ವಾಮಿ ಅವರ ಗಮನಕ್ಕೆ ಬಂದಾಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತನಿಖೆಗೆ ಕೋರಿದ್ದರು. ಬೆಂಗಳೂರಿನ ಭೂಮಿ ಉಸ್ತುವಾರಿ ಕೋಶಕ್ಕೂ ಪತ್ರ ಬರೆದು ದಾಖಲೆ ಸರಿಪಡಿಸಲು ಕೋರಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತನಿಖೆ ನಡೆಸುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದ್ದರು.ಉಪವಿಭಾಗಾಧಿಕಾರಿ ಇಬ್ಬರೂ ಅಧಿಕಾರಿಗಳಿಗೆ ಶೋಕಾಸ್ ನೊಟೀಸ್ ನೀಡಿದ್ದರೂ ಅಧಿಕಾರಿಗಳು ಯಾವುದೇ ಕಡತಗಳನ್ನು ಸಲ್ಲಿಸಲಿಲ್ಲ ಮತ್ತು ವಿಚಾರಣೆ ಸಂದರ್ಭದಲ್ಲಿ ಸಮರ್ಪಕ ಉತ್ತರ ನೀಡದೇ ಇರುವ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿ ಕ್ರಮಕ್ಕೆ ಶಿಫಾರಸು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸದ್ಯ ಕಾರಟಗಿ ಗ್ರಾಮ ಆಡಳಿತಾಧಿಕಾರಿ ಆಗಿರುವ ಸೋಮನಾಥ ತಳವಾರ ಅವರನ್ನು ಅಮಾನತು ಮಾಡಿ ಡಿಸಿ ಆದೇಶಿಸಿದ್ದಾರೆ.ಸದ್ಯ ಸಿದ್ದಾಪುರದ ಉಪತಹಸೀಲ್ದಾರ್ ಆಗಿರುವ ಪ್ರಕಾಶ ನಾಯಕ ವಿರುದ್ಧ ಶಿಸ್ತು ಕ್ರಮಕ್ಕೆ ಕಲ್ಬುರ್ಗಿ ಪ್ರಾದೇಶಿಕ ಆಯಕ್ತರಿಗೆ ಘಟನೋತ್ತರ ಮಂಜೂರಾತಿಗೆ ಡಿಸಿ ಪತ್ರ ಬರೆದಿದ್ದಾರೆ. ಇವರು ಕರ್ತವ್ಯ ಲೋಪ ಎಸಗಿದ್ದು ಕಂಡು ಬಂದಿದ್ದು, ಅವರನ್ನು ಕುಷ್ಟಗಿ ತಹಸೀಲ್ದಾರ್ ಕಚೇರಿಯಲ್ಲಿ ಖಾಲಿ ಇರುವ ಶಿರಸ್ತೇದಾರರ ಹುದ್ದೆಗೆ ವರ್ಗಾಯಿಸಿದ್ದಾರೆ.
ಪ್ರಕರಣ ಬೆಳಕಿಗೆ: ನಿಯಮಬಾಹಿರ ಖಾತೆ ವರ್ಗಾಯಿಸಲಾಗಿದೆ. ಮೂಲ ದಾಖಲೆಗಳ ನಾಶಪಡಿಸಲಾಗಿದೆ. ಮೋಜಣಿ ತಿದ್ದುಪಡಿ ನಕಲುಗಾಗಿ ವಿವಿಧ ಖಾತೆ ಬದಲಾವಣೆ ಮಾಡಿದ್ದರ ಶಂಕೆಯಲ್ಲಿ ನ್ಯಾಯವಾದಿ ಗವಿಸಿದ್ದಪ್ಪ ಸಾಲೋಣಿ ತಹಸೀಲ್ದಾರ್‌ಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ತಹಸೀಲ್ದಾರ್ ಎಂ.ಕುಮಾರಸ್ವಾಮಿ ಕಡತಗಳಿಗಾಗಿ ತಡಕಾಡಿದಾಗ ಮೂಲ ದಾಖಲೆಗಳೇ ಕಣ್ಮರೆಯಾಗಿದ್ದು ಗಮನಕ್ಕೆ ಬಂದಿತ್ತು. ಕೂಡಲೇ ಎಚ್ಚೆತ್ತುಕೊಂಡು ಡಿಸಿ ಗಮನಕ್ಕೆ ತಂದಿದ್ದರು.ಕಂದಾಯ ಕಚೇರಿ ಕಡತಗಳ ಕಣ್ಮರೆ ಪ್ರಕರಣದ ಕುರಿತು 2023ರ ಸೆಪ್ಟಂಬರ್ 30ರಂದು ಕನ್ನಡಪ್ರಭ ‘ಕಂದಾಯ ಅಧಿಕಾರಿಗಳಿಂದಲೇ ವ್ಯಾಜ್ಯ ಸೃಷ್ಟಿ, ತಹಸೀಲ್ದಾರ್ ಕಚೇರಿಯ ಮೂಲ ದಾಖಲೆಗಳ ನಾಪತ್ತೆ ಕುರಿತು ಮೊದಲು ವರದಿ ಬಿತ್ತರಿಸಿ ಬೆಳಕು ಚೆಲ್ಲಿತ್ತು.