ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಆಹಾರಧಾನ್ಯ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡು ಬಂದ ಗುಬ್ಬಿ ತಾಲೂಕಿನ ಟಿಎಪಿಸಿಎಂಎಸ್ ನ್ಯಾಯಬೆಲೆ ಅಂಗಡಿ ಹಾಗೂ ತಿಪಟೂರು ಪಟ್ಟಣ ದೊಡ್ಡಪೇಟೆ ಬಡಾವಣೆಯಲ್ಲಿರುವ ವಿನಾಯಕ ವಿವಿಧೋದ್ದೇಶ ಸಹಕಾರ ಸಂಘ ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಲಾಗಿದೆ ಎಂದು ರಾಜ್ಯ ಆಹಾರ ಆಯೋಗ ಅಧ್ಯಕ್ಷ ಡಾ. ಹೆಚ್. ಕೃಷ್ಣ ತಿಳಿಸಿದರು.ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜುಲೈ 23 ರಿಂದ 3 ದಿನಗಳ ಕಾಲ ಆಯೋಗದ ಸದಸ್ಯರೊಂದಿಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಪ್ರವಾಸ ಕೈಗೊಂಡು ಕೆಎಫ್‌ಎಸ್‌ಸಿಎಸ್ ಸಗಟು ಮಳಿಗೆ, ಟಿ.ಎ.ಪಿ.ಸಿ.ಎಂ.ಎಸ್ ಸಗಟು ಮಳಿಗೆ, ವಿವಿಧೋದ್ದೇಶ ಸಹಕಾರ ಸಂಘ ನ್ಯಾಯಬೆಲೆ ಅಂಗಡಿ, ವಿದ್ಯಾರ್ಥಿ ನಿಲಯ, ವಸತಿ ನಿಲಯ, ಅಂಗನವಾಡಿ ಕೇಂದ್ರ, ಪೆಟ್ರೋಲ್ ಬಂಕ್, ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಆಹಾರ ಧಾನ್ಯ ದಾಸ್ತಾನು ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ನ್ಯೂನ್ಯತೆ ಕಂಡು ಬಂದ ೨ ನ್ಯಾಯಬೆಲೆ ಅಂಗಡಿಗಳನ್ನು ಅಮಾನತ್ತು ಮಾಡಲಾಗಿದೆ ಎಂದು ತಿಳಿಸಿದರು. ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯ ವಿತರಣೆ ಮಾಡುವ ಗೋದಾಮುಗಳಲ್ಲಿ ಸುಮಾರು 300 ಕ್ವಿಂಟಾಲ್‌ವರೆಗೂ ಆಹಾರ ಧಾನ್ಯ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡು ಬಂದಿದೆ. ಗೋದಾಮುಗಳಲ್ಲಿ ಗೋಡೆಯಿಂದ ಅಂತರ ಕಾಪಾಡಿಕೊಂಡು ವೈಜ್ಞಾನಿಕವಾಗಿ ಆಹಾರ ಧಾನ್ಯಗಳ ಚೀಲಗಳನ್ನು ಜೋಡಿಸಬೇಕೆಂದು ನಿಯಮವಿದ್ದರೂ ಯಾವುದೇ ಗೋದಾಮುಗಳಲ್ಲಿ ನಿಯಮ ಪಾಲಿಸಿರುವುದು ಕಂಡು ಬಂದಿರುವುದಿಲ್ಲ ಎಂದು ತಿಳಿಸಿದರು. ಸಮಾಜ ಕಲ್ಯಾಣ/ ಹಿಂದುಳಿದ ವರ್ಗಗಳ ಕಲ್ಯಾಣ/ಪರಿಶಿಷ್ಟ ವರ್ಗಗಳ ಕಲ್ಯಾಣ/ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ವಸತಿ ನಿಲಯಗಳಲ್ಲಿ ಬಡ ಹಾಗೂ ನಿರ್ಗತಿಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅವರಿಗೆ ಗುಣಮಟ್ಟದ ಆಹಾರ ಪೂರೈಸುವುದು ಅಧಿಕಾರಿಗಳ ಜವಾಬ್ದಾರಿ. ಆದರೆ ಕೆಲವು ವಿದ್ಯಾರ್ಥಿ ನಿಲಯಗಳಲ್ಲಿ ಹೊಟ್ಟೆ ತುಂಬ ಊಟ ಸಿಗದೆ ಮಕ್ಕಳು ತೊಂದರೆ ಅನುಭವಿಸುತ್ತಿರುವುದು ಪರಿಶೀಲನಾ ವೇಳೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿಸಿದರು. ಕ್ಯಾತ್ಸಂದ್ರದ ಬಸವ ಪಟ್ಟಣದಲ್ಲಿರುವ ದೇವರಾಜ ಅರಸು ವಸತಿ ನಿಲಯ ಕಟ್ಟಡವು ಸುಸಜ್ಜಿತವಾಗಿದ್ದು, ಮಕ್ಕಳಿಗೆ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಬಟವಾಡಿಯಲ್ಲಿರುವ ಡಾ: ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಒಂದು ಚಿಕ್ಕ ಕೊಠಡಿಯಲ್ಲಿ ಕುರಿಮಂದೆಯಂತೆ ೩೦ ವಿದ್ಯಾರ್ಥಿಗಳನ್ನು ತುಂಬಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಕೇವಲ ಒಂದೇ ಶೌಚಗೃಹ ಹಾಗೂ ಒಂದೇ ಸ್ನಾನದ ಗೃಹವಿರುವುದರಿಂದ ನಿಗದಿತ ವೇಳೆಗೆ ಶಾಲೆಗೆ ತೆರಳಲು ಅಡ್ಡಿಯಾಗುತ್ತಿದೆ. ಸಮಸ್ಯೆಗಳನ್ನು ಬಗೆಹರಿಸಲು ನಿಲಯದ ಮೇಲ್ವಿಚಾರಕರನ್ನು ಪ್ರಶ್ನಿಸಿದರೆ ಬೆದರಿಸುತ್ತಾರೆ. ಚಳಿ-ಮಳೆಗಾಲದಲ್ಲೂ ಸ್ನಾನಕ್ಕೆ ಬಿಸಿನೀರಿಲ್ಲ. ಶುದ್ಧ ಕುಡಿಯುವ ನೀರಿಲ್ಲ. ಸ್ಯಾನಿಟರಿ ಪ್ಯಾಡ್ ಪೂರೈಕೆ ಮಾಡಿಲ್ಲವೆಂದು ನಿಲಯದ ವಿದ್ಯಾರ್ಥಿಗಳು ದೂರು ನೀಡಿದರು. ಈ ವಸತಿ ನಿಲಯದಲ್ಲಿ ಬಾಲಕಿಯರೇ ಇರುವುದರಿಂದ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಬೇಕು ಎಂದು ನಿಲಯದ ಅಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಸರ್ಕಾರದಿಂದ ಅನುದಾನ ಲಭ್ಯವಿದ್ದರೂ ಸಹ ಸೌಲಭ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಅಧಿಕಾರಿಗಳು ತಮ್ಮ ಬೇಜವಾಬ್ದಾರಿ ನಡೆಯನ್ನು ಬದಲಾಯಿಸಿಕೊಳ್ಳದಿದ್ದಲ್ಲಿ ಕಠಿಣ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲೆಯ ಯಾವುದೇ ವಿದ್ಯಾರ್ಥಿ ನಿಲಯಗಳ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿಲ್ಲ. ನಿಲಯ ಮೇಲ್ವಿಚಾರಕರು ಕಾಟಾಚಾರದ ನಿರ್ವಹಣೆ ಮಾಡುತ್ತಿದ್ದಾರೆ. ದಾಸ್ತಾನು ವಹಿಯಲ್ಲಿ ತರಕಾರಿ ಖರೀದಿ ಬಗ್ಗೆ ನಮೂದಿಸಲಾಗಿದೆಯಾದರೂ ಭೌತಿಕವಾಗಿ ತರಕಾರಿ ಇಲ್ಲದಿರುವುದು ಪರಿಶೀಲನೆ ಸಮಯದಲ್ಲಿ ಕಂಡು ಬಂದಿದೆ ಎಂದು ತಿಳಿಸಿದರು. ಕುಣಿಗಲ್ ತಾಲ್ಲೂಕು ವಾನಂಬಾಡಿ ಕಾಲೋನಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅಂಗನವಾಡಿ ಕಟ್ಟಡದ ಸುತ್ತಮುತ್ತಲು ಅನೈರ್ಮಲ್ಯತೆಯಿಂದ ಕೂಡಿದ್ದು, ದನದ ಕೊಟ್ಟಿಗೆಯಾಗಿ ಮಾರ್ಪಾಡಾಗಿದೆ. ಇದರಿಂದ ಅಂಗನವಾಡಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಹಿನ್ನೆಲೆಯಲ್ಲಿ ಕೂಡಲೇ ಸ್ವಚ್ಛಗೊಳಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜು ಅವರಿಗೆ ಸೂಚನೆ ನೀಡಿದರು. ಕುಣಿಗಲ್ ಪಟ್ಟಣದ ಪೆಟ್ರೋಲ್ ಬಂಕ್‌ವೊಂದರಲ್ಲಿ ಶೌಚಾಲಯಗಳು ಬಳಸದಂತೆ ಅಧ್ವಾನ ಸ್ಥಿತಿಯಲ್ಲಿದ್ದು, ವಾಹನಗಳಿಗೆ ಫ್ರೀ ಏರ್ ಸೌಲಭ್ಯವನ್ನು ಕಲ್ಪಿಸಿರುವುದಿಲ್ಲ. ಗ್ರಾಹಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಸಂಬಂಧಿಸಿದ ಪೆಟ್ರೋಲ್ ಬಂಕ್ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಆಹಾರ ಆಯೋಗ ಸದಸ್ಯರಾದ ಲಿಂಗರಾಜ್ ಕೋಟೆ, ಸುಮಂತ್ ರಾವ್, ಮಾರುತಿ ಎಂ. ದೊಡ್ಡಲಿಂಗಣ್ಣವರ, ಕೆ.ಎಸ್.ವಿಜಯಲಕ್ಷ್ಮಿ, ಎ.ರೋಹಿಣಿ ಪ್ರಿಯ, ಆಹಾರ ಆಯೋಗದ ಕಾರ್ಯದರ್ಶಿ ಸುಜಾತ ಹೊಸ್ಮನಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಶಬ್ಬೀರ್ ಅಹಮದ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೋನಿಯಾ ವರ್ಣೇಕರ್, ಕೃಷಿ ಜಂಟಿ ನಿರ್ದೇಶಕ ರಮೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಡಿ. ಎನ್. ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ನಿರೂಪಣಾಧಿಕಾರಿ ದಿನೇಶ್, ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.