ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ವಿವಿಧ ಶ್ರೇಣಿಯ 700ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಅಪರಾಧ ಚಟುವಟಿಕೆ, ಭ್ರಷ್ಟಾಚಾರ, ಕರ್ತವ್ಯಲೋಪ ಮತ್ತು ಇತರ ರೀತಿಯ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ವಿಚಾರಣೆಗೆ ಬಾಕಿ ಇರುವಂತೆ ಇಲಾಖೆ ಅಮಾನತುಗೊಳಿಸಿದೆ.

ಬಸವರಾಜ ಹಿರೇಮಠ

ಧಾರವಾಡ

ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ವಿವಿಧ ಶ್ರೇಣಿಯ 700ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಅಪರಾಧ ಚಟುವಟಿಕೆ, ಭ್ರಷ್ಟಾಚಾರ, ಕರ್ತವ್ಯಲೋಪ ಮತ್ತು ಇತರ ರೀತಿಯ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ವಿಚಾರಣೆಗೆ ಬಾಕಿ ಇರುವಂತೆ ಇಲಾಖೆ ಅಮಾನತುಗೊಳಿಸಿದೆ.

ಈ ಅವಧಿಯಲ್ಲಿ ಅಮಾನತುಗೊಂಡ 713 ಅಧಿಕಾರಿಗಳಲ್ಲಿ 95 ಮಂದಿಯ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. 62 ಮಂದಿಯ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ ಮತ್ತು 556 ಮಂದಿಯನ್ನು ಇತರ ಕಾನೂನುಬಾಹಿರ ಚಟುವಟಿಕೆ ಮತ್ತು ಇಲಾಖಾ ನಿಯಮ ಉಲ್ಲಂಘನೆ ಕಾರಣಕ್ಕೆ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ''''''''ಕನ್ನಡಪ್ರಭ''''''''ಕ್ಕೆ ಮಾಹಿತಿ ನೀಡಿದ್ದಾರೆ.

ಇನ್‌ಸ್ಪೆಕ್ಟರ್‌ಗೆ 7 ವರ್ಷ ಜೈಲು:

ಅಮಾನತುಗೊಂಡ ಸುಮಾರು 400 ಪೊಲೀಸ್ ಅಧಿಕಾರಿಗಳು ಈಗಾಗಲೇ ತಪ್ಪಿತಸ್ಥರೆಂದು ಕಂಡುಬಂದಿದ್ದು, ಮಾಡಿದ ಅಪರಾಧಗಳ ಸ್ವರೂಪವನ್ನು ಅವಲಂಬಿಸಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಪೈಕಿ ಅತ್ಯಂತ ಪ್ರಮುಖ ಪ್ರಕರಣವಾದ ಬಿಜೆಪಿ ನಾಯಕ ಯೋಗೇಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಧಾರವಾಡದ ಪೊಲೀಸ್ ಇನ್‌ಸ್ಪೆಕ್ಟರ್ ಚನ್ನಕೇಶವ ಟಿಂಗರಿಕರ ಅವರಿಗೆ ವಿಶೇಷ ನ್ಯಾಯಾಲಯ ಏಳು ವರ್ಷಗಳ ಕಾಲ ಶಿಕ್ಷೆ ವಿಧಿಸಿದೆ. ಇತ್ತೀಚೆಗೆ ಧಾರವಾಡದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಪೊಲೀಸ್ ಕಿರುಕುಳಕ್ಕೆ ಸಂಬಂಧಿಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ವಿದ್ಯಾಗಿರಿ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ತಹಸೀಲ್ದಾರ್ ಮತ್ತು ಮೂವರು ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.

ಹಾಗೆಯೇ, ದಾವಣಗೆರೆಯಲ್ಲಿ ನಡೆದ ಆಘಾತಕಾರಿ ಪ್ರಕರಣವೊಂದರಲ್ಲಿ ಇಬ್ಬರು ಪೊಲೀಸ್ ಸಬ್-ಇನ್‌ಸ್ಪೆಕ್ಟರ್‌ಗಳು, ಇನ್‌ಸ್ಪೆಕ್ಟರ್ ಜನರಲ್ ತಂಡದ ಅಧಿಕಾರಿಗಳಂತೆ ನಟಿಸಿ ಚಿನ್ನದ ವ್ಯಾಪಾರಿಯಿಂದ 80 ಗ್ರಾಂ ಚಿನ್ನವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ಮೇಲೆ ಈಗ ದರೋಡೆ ಆರೋಪಗಳಿವೆ. ಅದೇ ರೀತಿ, ಬಿಪಿಒ ಮ್ಯಾನೇಜರ್ ಅಪಹರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಹೆಡ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೇ, ಶಸ್ತ್ರಸಜ್ಜಿತ ವಾಹನದಿಂದ ₹7 ಕೋಟಿಗಳ ಹಗಲು ದರೋಡೆಗೆ ಮಾಸ್ಟರ್‌ಮೈಂಡ್ ಆರೋಪದ ಮೇಲೆ ಮತ್ತೊಬ್ಬ ಕಾನ್‌ಸ್ಟೇಬಲ್‌ನನ್ನು ಬಂಧಿಸಲಾಗಿದೆ. ಹೀಗೆ ಹಲವು ಉದಾಹರಣಗಳಿವೆ.

ಒಟ್ಟಾರೆ ಅಮಾನತುಗೊಂಡ ಪಟ್ಟಿಯಲ್ಲಿ ಏಳು ಡಿವೈಎಸ್‌ಪಿಗಳು, 61 ಪೊಲೀಸ್ ಇನ್‌ಸ್ಪೆಕ್ಟರ್‌ಗಳು, 75 ಪೊಲೀಸ್ ಸಬ್-ಇನ್‌ಸ್ಪೆಕ್ಟರ್‌ಗಳು, 73 ಸಹಾಯಕ ಸಬ್-ಇನ್‌ಸ್ಪೆಕ್ಟರ್‌ಗಳು, 231 ಹೆಡ್ ಕಾನ್‌ಸ್ಟೇಬಲ್‌ಗಳು ಮತ್ತು 266 ಕಾನ್‌ಸ್ಟೇಬಲ್‌ಗಳು ಸೇರಿದ್ದಾರೆ.

ಏತಕ್ಕಾಗಿ ಅಮಾನತು?:

ಪೊಲೀಸರು ದೂರುಗಳಿಂದ ಆರೋಪಿಗಳ ಹೆಸರುಗಳನ್ನು ತೆಗೆದುಹಾಕುವುದು, ವಾರಂಟ್‌ ವಿಷಯ, ವಶಪಡಿಸಿಕೊಂಡ ವಾಹನಗಳನ್ನು ಬಿಡುಗಡೆ ಮಾಡುವುದು, ರೌಡಿ-ಶೀಟರ್ ಪಟ್ಟಿಯಿಂದ ಹೆಸರು ಅಳಿಸುವುದು ಮತ್ತು ಗಾಂಜಾ, ಕ್ರಿಕೆಟ್ ಬೆಟ್ಟಿಂಗ್ ಮತ್ತು ಜೂಜಾಟ ಪ್ರಕರಣಗಳಲ್ಲಿ ಭಾಗಿಯಾಗಿರುವವರಿಗೆ ಸಹಾಯ ಮಾಡುವಂತಹ ಅನುಕೂಲಕ್ಕಾಗಿ ದೂರುದಾರರು ಮತ್ತು ಆರೋಪಿಗಳಿಂದ ಲಂಚ ಕೇಳಿದ ಆರೋಪ ಹಲವಾರು ಸಿಬ್ಬಂದಿ ಮೇಲಿದೆ. ಇನ್ನು, 50ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಲೈಂಗಿಕ ಕಿರುಕುಳ, ಅಕ್ರಮ ಬಂಧನ, ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು, ನಕಲಿ ಪಾಸ್‌ಪೋರ್ಟ್‌ಗಳಿಗೆ ಅನುಕೂಲ ಮಾಡಿಕೊಡುವುದು ಮತ್ತು ಇಲಾಖೆಯ ದಾಖಲೆಗಳನ್ನು ತಿರುಚುವ ಆರೋಪಗಳನ್ನು ಎದುರಿಸುತ್ತಿದ್ದಾರೆ. ಬೇಸರ ಎಂದರೆ, ಕೆಲವು ಸಿಬ್ಬಂದಿಯು ಕೊಲೆ ಪ್ರಕರಣಗಳು ಮತ್ತು ಇತರ ಗಂಭೀರ ಅಪರಾಧಗಳಿಗೆ ಪರೋಕ್ಷವಾಗಿ ಸಂಬಂಧ ಹೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಕಾನೂನಿನ ಭಯ ಕಡಿಮೆಯಾದಾಗ, ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುವುದು ಹೆಚ್ಚಾಗುತ್ತದೆ. ಇದು ಪೊಲೀಸರು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲು ಧೈರ್ಯ ತುಂಬುತ್ತದೆ. ಆಗಾಗ ಇಲಾಖೆ ಹಿರಿಯ ಅಧಿಕಾರಿಗಳ ಬಳಿ ಸಿಕ್ಕಿಬೀಳದೆ ತಪ್ಪಿಸಿಕೊಳ್ಳಬಹುದು ಎಂಬ ನಂಬಿಕೆಯೂ ಕೆಲವು ಪೊಲೀಸರಲ್ಲಿದೆ. ಒಮ್ಮೆ ತಪ್ಪು ಮಾಡಿ ಬಂಧಿತರಾದ ನಂತರ ಅನೇಕರು ಅಪರಾಧ ಮಾಡಿದ್ದಕ್ಕೆ ವಿಷಾದಿಸುತ್ತಾರೆ ಎಂದು ರಾಜ್ಯ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ಗೋಪಾಲ್ ಹೊಸೂರ್ ಹೇಳುತ್ತಾರೆ.

ಆಡಂಬರ ಜೀವನಶೈಲಿ ಮತ್ತು ಆಮಿಷಗಳು ಕೆಲವು ಪೊಲೀಸರನ್ನು ತೊಂದರೆಗೆ ಸಿಲುಕಿಸುತ್ತದೆ. ಇದು ದುರಾಸೆಯಲ್ಲದೆ ಬೇರೇನೂ ಅಲ್ಲ. ಸಾರ್ವಜನಿಕರಿಗೆ ಅರ್ಥಪೂರ್ಣ ರೀತಿಯಲ್ಲಿ ಸೇವೆ ಸಲ್ಲಿಸಲು ತಮಗೆ ಅವಕಾಶವಿದೆ ಎಂಬುದನ್ನು ಮರೆತು, ಕೆಲವು ಅಧಿಕಾರಿಗಳು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗುತ್ತಾರೆ ಮತ್ತು ಇಲಾಖೆಗೂ ಕೆಟ್ಟ ಹೆಸರು ಸಹ ತರುತ್ತಾರೆ ಎಂದು ಗೋಪಾಲ ಹೊಸೂರ ಬೇಸರ ವ್ಯಕ್ತಪಡಿಸುತ್ತಾರೆ.

ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವ ಪೊಲೀಸ್ ಸಿಬ್ಬಂದಿಯ ಶೇಕಡಾವಾರು ಪ್ರಮಾಣ (ಶೇ.0.1) ಕಡಿಮೆಯಿದ್ದರೂ, ಅಂತಹ ಘಟನೆಗಳು ಇಲಾಖೆಯ ವರ್ಚಸ್ಸಿಗೆ ಕಳಂಕ ತಂದಿವೆ. ಅಪರಾಧ ಪ್ರಕರಣಗಳಲ್ಲಿ ಕಾಣಿಸಿಕೊಳ್ಳುವ ಸಿಬ್ಬಂದಿ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ.

ಎನ್‌. ಶಶಿಕುಮಾರ, ಪೊಲೀಸ್‌ ಆಯುಕ್ತರು, ಹು-ಧಾ ಮಹಾನಗರ