ಅಭ್ಯರ್ಥಿಯ ಬಂಧುವನ್ನು ಕೆಪಿಎಸ್ಸಿ ಒಳಗೆ ಬಿಟ್ಟ ಸಿಬ್ಬಂದಿ ಅಮಾನತು

| Published : Jan 23 2024, 01:50 AM IST

ಅಭ್ಯರ್ಥಿಯ ಬಂಧುವನ್ನು ಕೆಪಿಎಸ್ಸಿ ಒಳಗೆ ಬಿಟ್ಟ ಸಿಬ್ಬಂದಿ ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಯ ಸಂಬಂಧಿಕನನ್ನು ಅನುಮತಿ ಇಲ್ಲದೇ ಕಚೇರಿಯೊಳಗೆ ಕರೆಸಿಕೊಂಡು ನಿಯಮ ಉಲ್ಲಂಘನೆ ಹಾಗೂ ಅಧಿಕಾರ ದುರುಪಯೋಗ ಆರೋಪದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರ ಆಪ್ತ ಸಹಾಯಕ ಗೋವಿಂದರಾಜು ಅವರನ್ನು ಅಮಾನತುಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಯ ಸಂಬಂಧಿಕನನ್ನು ಅನುಮತಿ ಇಲ್ಲದೇ ಕಚೇರಿಯೊಳಗೆ ಕರೆಸಿಕೊಂಡು ನಿಯಮ ಉಲ್ಲಂಘನೆ ಹಾಗೂ ಅಧಿಕಾರ ದುರುಪಯೋಗ ಆರೋಪದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರ ಆಪ್ತ ಸಹಾಯಕ ಗೋವಿಂದರಾಜು ಅವರನ್ನು ಅಮಾನತುಗೊಳಿಸಿರುವ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಅವರು, ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.

ಜ.6ರಂದು ಬೆಳಗ್ಗೆ 10.45ರಲ್ಲಿ ರಾಯಚೂರಿನ ಸುರೇಶ್ ಎಂಬಾತ ಕಚೇರಿಯಲ್ಲಿ ಓಡಾಡುತ್ತಿದ್ದ. ನೌಕರನಲ್ಲದ ವ್ಯಕ್ತಿ ಕಚೇರಿಯಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ ಕಾರ್ಯದರ್ಶಿಯವರು ಪ್ರಶ್ನಿಸಿದಾಗ, ನೇಮಕಾತಿ ವಿಚಾರವಾಗಿ ಗೋವಿಂದರಾಜು ಅವರನ್ನು ಭೇಟಿ ಮಾಡಲು ಬಂದಿರುವುದಾಗಿ ತಿಳಿಸಿದ್ದರು. ಸುರೇಶ್ ತನ್ನನ್ನು ಭೇಟಿ ಮಾಡಲು ಬಂದಿದ್ದಾಗಿ ಗೋವಿಂದರಾಜು ಒಪ್ಪಿಕೊಂಡಿದ್ದರು. ಅಧ್ಯಕ್ಷರು ಕಚೇರಿಯಲ್ಲಿ ಇಲ್ಲದ ಸಂದರ್ಭದಲ್ಲಿ ಅನುಮತಿ ಇಲ್ಲದೆಯೇ, ಅಭ್ಯರ್ಥಿಯ ಸಂಬಂಧಿಕನನ್ನು ಭೇಟಿ ಮಾಡಲು ಕಚೇರಿಗೆ ಕರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಕಾರ್ಯದರ್ಶಿಯವರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್‌ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಕಚೇರಿ ನಿಯಮಗಳ ಉಲ್ಲಂಘನೆಯ ಜೊತೆಗೆ ಗೋವಿಂದರಾಜು ಅವರು ಕಡತದ ಮೂಲಕ ಸಮುಚಿತ ಮಾರ್ಗದಲ್ಲಿ ಅನುಮೋದನೆಯನ್ನು ಪಡೆಯದ ಮಾಹಿತಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದರು ಎಂಬ ಆರೋಪ ಇದೆ. ಅಲ್ಲದೇ, ಗೋವಿಂದರಾಜು ವಿರುದ್ಧ ನಿಯಮಬಾಹಿರ ಚಟುವಟಿಕೆಗಳು, ಅಧಿಕಾರ ದುರುಪಯೋಗದ ಕುರಿತು ಅಭ್ಯರ್ಥಿಗಳಿಂದಲೂ ಮೌಖಿಕ ದೂರುಗಳು ಬಂದಿವೆ ಎಂದು ಅಮಾನತಿಗೆ ಕಾರಣವಾದ ಅಂಶಗಳ ಕುರಿತು ಕಾರ್ಯದರ್ಶಿ ಲತಾಕುಮಾರಿ ಉಲ್ಲೇಖಿಸಿದ್ದಾರೆ.